ಮುಖಕ್ಕೆ ಗಂಭೀರ ಗಾಯಗೊಂಡ 9 ವರ್ಷದ ಬಾಲಕಿ – 5 ವರ್ಷದ ಬಾಲಕನ ಕೈಗೆ ಕಚ್ಚಿದ ನಾಯಿ
ಸಪ್ತಸಾಗರ ವಾರ್ತೆ,ವಿಜಯಪುರ, ಆ.7: ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಎರಡು ಪ್ರತ್ಯೇಕ ಘಟನೆಗಳಲ್ಲಿ 9 ವರ್ಷದ ಬಾಲಕಿ ಹಾಗೂ 5 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿವೆ. ಇತ್ತೀಚಿನ ತಿಂಗಳುಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೀದಿ ನಾಯಿಗಳ ದಾಳಿಯ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿರುವ ಬೆನ್ನಲ್ಲೇ ಈ ಘಟನೆಗಳು ನಡೆದಿವೆ.
ಪಟ್ಟಣದ ರೇವತಮಡ್ಡಿ ಗುತ್ತೇದಾರ ಲೇಔಟ್‌ನಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಪ್ರೇರಣಾ ಗೌಳಿ (9) ಎಂಬ ಬಾಲಕಿಯ ಮೇಲೆ ಬೀದಿ ನಾಯಿ ಏಕಾಏಕಿ ಎರಗಿದೆ. ದಾಳಿಯಲ್ಲಿ ಬಾಲಕಿಯ ಮುಖ ಹಾಗೂ ಕಣ್ಣಿನ ಕೆಳಭಾಗಕ್ಕೆ ತೀವ್ರ ಗಾಯಗಳಾಗಿದ್ದು, ತಕ್ಷಣ ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಇನ್ನೊಂದು ಘಟನೆ ಕರೀಂನಗರದಲ್ಲಿ ನಡೆದಿದ್ದು, ಅಂಗಡಿಗೆ ತೆರಳುತ್ತಿದ್ದ ತೈಮೂರು ಮಕಾನದಾರ್ (5) ಎಂಬ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿ ಕೈಗೆ ಕಚ್ಚಿದೆ. ಗಾಯಗೊಂಡ ಬಾಲಕನಿಗೂ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸತತವಾಗಿ ಬೀದಿ ನಾಯಿಗಳ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಬೀದಿ ನಾಯಿಗಳನ್ನು ತಕ್ಷಣ ಹತೋಟಿಗೆ ತರಬೇಕು ಹಾಗೂ ನಗರಸಭೆ ಮತ್ತು ಸಂಬಂಧಿತ ಅಧಿಕಾರಿಗಳು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


