ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 18 :
ಬಿಜೆಪಿಯ ಪಾಲಿಕೆ ಸದಸ್ಯರು ಪಕ್ಷದಿಂದ ಉಚ್ಛಾಟಿತರಾಗಿರುವ ಶಾಸಕ ಯತ್ನಾಳ ಅವರ ಜೊತೆ ಗುರುತಿಸಿಕೊಂಡರೆ ಖಂಡಿತವಾಗಿಯೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸದಸ್ಯರು ಬಿಜೆಪಿ ಚಿಹ್ನೆಯಡಿಯಲ್ಲಿ ಆಯ್ಕೆಯಾಗಿದ್ದಾರೆ, ಪಕ್ಷ ಉಚ್ಛಾಟನೆ ಮಾಡಿರುವ ಶಾಸಕ ಯತ್ನಾಳರ ಜೊತೆ ಕಾಣಿಸಿಕೊಳ್ಳುವುದು ಸರಿಯಲ್ಲ, ಇದೇ ರೀತಿ ವರ್ತನೆ ಮುಂದುವರೆದರೆ ಖಂಡಿತವಾಗಿಯೂ ಕ್ರಮ ಜರುಗಿಸಲಾಗುವುದು ಎಂದರು.
ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಬಗ್ಗೆ ಶಾಸಕ ಯತ್ನಾಳ ಟೀಕೆ ಸಲ್ಲ. ಪದೇ ಪದೇ ಹೇಳಿಕೆ ನೀಡುವುದು ಸರಿಯಲ್ಲ. ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಸಿಎಂ ಆಗುವ ಹಂತಕ್ಕೆ ಬಂದಿದ್ದಾರೆ. ಆದರೆ, ನಮ್ಮ ಪಕ್ಷದಲ್ಲಿಯೇ ಇರದ ಯತ್ನಾಳರು ತಾವು ಸಿಎಂ ಆಗುತ್ತೇನೆ ಎಂದು ಹೇಳುವುದು ಹಾಸ್ಯಾಸ್ಪದವಾಗಿದೆ ಎಂದರು. ಯಡಿಯೂರಪ್ಪನವರೇ ನನ್ನನ್ನು ಬೆಳೆಸಿದರು. ಬಿಜೆಪಿಗೆ ಕರೆದುಕೊಂಡು ಬಂದಿದ್ದರು ಎಂದು ಹೇಳಿಕೆ ನೀಡಿದ್ದೀರಿ. ಈಗ ಅಂತಹವರ ವಿರುದ್ಧ ಹೇಳಿಕೆ ನೀಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಪಕ್ಷದಿಂದ ಉಚ್ಚಾಟನೆ ಆಗಿದ್ದು, ನೀವು ಪಕ್ಷದ ಕಚೇರಿಗೆ ಬರುವುದಿಲ್ಲ. ಹೀಗಾಗಿ ಇಲ್ಲಿನ ವ್ಯವಸ್ಥೆ ನಿಮಗೆ ಗೊತ್ತಿಲ್ಲ. ಒಮ್ಮೆ ತಪ್ಪು ಮಾಡಿರುವ ಕಾರಣ ಪಕ್ಷದಿಂದ ಹೊರ ಹೋಗಿದ್ದೀರಿ, ಮತ್ತೆ ಪಕ್ಷಕ್ಕೆ ಬರಬೇಕು ಎಂದು ಇಂತಹ ಹೇಳಿಕೆ ನೀಡುತ್ತಿರುವಿರಿ ಅಷ್ಟೇ ಎಂದರು.
ಸಾವಿರ ದಿನದ ಸಾಧನೆ ಮಾಡುತ್ತಿರುವ ರಾಜ್ಯ ಸರ್ಕಾರ ಸಾವಿರ ಸಮಸ್ಯೆ ಹುಟ್ಟು ಹಾಕಿದೆ. ಈಗ ಬಜೆಟ್ ತಯಾರಿಯಲ್ಲಿ ಇದ್ದು, ವಿಜಯಪುರ ಜಿಲ್ಲೆಯ ಸಮಸ್ಯೆ ಬಗ್ಗೆ ಚರ್ಚೆ ಅಗತ್ಯ ಇದೆ. ಈ ನಿಟ್ಟಿನಲ್ಲಿ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಪಕ್ಷಾತೀತವಾಗಿ ಸಭೆ ಕರೆಯಬೇಕು. ಸರ್ಕಾರಿ ವೈದ್ಯಕೀಯ ಕಾಲೇಜು, ಕುಡಿಯುವ ನೀರಿನ ಸಮಸ್ಯೆ ಹಾಗೂ ನಗರದಲ್ಲಿ ಮೇಲ್ಸೇತುವೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಜಿಲ್ಲೆಯ ವಿಷಯಗಳ ಕುರಿತು ಬಜೆಟ್ ನಲ್ಲಿ ಘೋಷಣೆ ಮಾಡುವ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹಾಕಬೇಕಿದೆ ಎಂದು ಅಂಗಡಿ ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಡಾ.ಸುರೇಶ ಬಿರಾದಾರ, ಚಿದಾನಂದ ಚಲವಾದಿ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಯತ್ನಾಳ ಜತೆ ಗುರುತಿಸಿಕೊಂಡರೆ ನಿರ್ದಾಕ್ಷಿಣ್ಯ ಕ್ರಮ: ಅಂಗಡಿ ಎಚ್ಚರಿಕೆ


