ರಸ್ತೆ ಅಪಘಾತ ತಡೆಯಲು ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲಿಸಿ: ಬೆಳಗಾವಿ ಲೋಕಾಯುಕ್ತ ಎಸ್ಪಿ ದೇಸಾಯಿ

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 12:
ದೇಶದಲ್ಲಿ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುವವರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದ್ದು, ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯವಾಗಿದೆ ಬೆಳಗಾವಿ ಲೋಕಾಯುಕ್ತ ಕಚೇರಿ ಎಸ್ಪಿ ಪ್ರಸನ್ನ ದೇಸಾಯಿ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ‌ ಡೀಮ್ಡ್ ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಸೋಮವಾರ ಆಯೋಜಿಸಲಾದ ಅಪಘಾತಗಳನ್ನು ಹೇಗೆ ನಿಯಂತ್ರಿಸಬೇಕು ಎಂಬ ವಿಷಯ ಕುರಿತು ವಿಶೇಷ ಉಪನ್ಯಾನ ನೀಡಿದರು.
ಕರ್ನಾಟಕ ಪೊಲೀಸ್ ಕಾಯ್ದೆ, 1963ರ ಕುರಿತು ಮಾತನಾಡಿ, ಭಾರತದ ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಪೊಲೀಸ್ ಕಾಯ್ದೆಗಳಿವೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆ, ಹೆಚ್ಚುತ್ತಿರುವ ಸೈಬರ್ ಅಪರಾಧಗಳು, ಅವುಗಳ ಬಗ್ಗೆ ವಹಿಸಬೇಕಿರುವ ಮುಂಜಾಗೃತೆ, ವಿದ್ಯಾರ್ಥಿಗಳು ಡಿಜಿಟಲ್ ವೇದಿಕೆಗಳನ್ನು ಜಾಗರೂಕತೆಯಿಂದ ಬಳಸುವುದು, ಮಾದಕ ದ್ರವ್ಯಗಳ ದುಷ್ಪರಿಣಾಮಗಳು, ಧೂಮ್ರಪಾನದ ದುಷ್ಪರಿಣಾಮಗಳ ಕುರಿತು ಅವರು ಮಾತನಾಡಿದರು.
ಬಿ.ಎಲ್.ಡಿ.ಇ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಮಾತನಾಡಿ, ಸಂಚಾರಿ‌ ನಿಯಮಗಳನ್ನು ಪಾಲಿಸುವುದು, ಹೆಲ್ಮೆಟ್ ಧರಿಸುವುದು ಮತ್ತು ವಾಹನ ಚಾಲನೆ ವೇಳೆ ವೇಗ ನಿಯಂತ್ರಣ ಕಾಪಾಡಿಕೊಳ್ಳುವುದರಿಂದ ಅಪಘಾತಗಳನ್ನು ಕಡಿಮೆ ಮಾಡಲು ಸಾಧ್ಯ. ದುಶ್ಚಟಗಳನ್ನು ಕೆಟ್ಟ ತೊರೆದು ಉತ್ತಮ ಆರೋಗ್ಯ ಮತ್ತು ಶಿಸ್ತಿನ ಜೀವನವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾನೂನು ಶಾಲೆಯ ಪ್ರಾಚಾರ್ಯ ಡಾ. ರಘುವೀರ ಕುಲಕರ್ಣಿ, ವೈದ್ಯಕೀಯ ಕಾಲೇಜಿನ ಹಿರಿಯ ಉಪಪ್ರಾಚಾರ್ಯ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಡೀಮ್ಡ್ ವಿವಿಯ ಸತೀಶ ಪಾಟೀಲ, ಬಿ. ಎಸ್. ಪಾಟೀಲ, ಈರಯ್ಯ ಮಠಪತಿ, ಫಾರೆನ್ಸಿಕ್ ಮೆಡಿಸೀನ್ ವಿಭಾಗದ ಅಧ್ಯಾಪಕರು, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಫಿಸಿಯೋಥೆರಪಿ ವಿಭಾಗದ ವಿದ್ಯಾರ್ಥಿನಿ ಐಶ್ವರ್ಯ ಕಟ್ಟಿ ಪ್ರಾರ್ಥಿಸಿದರು. ಲಾವಣ್ಯ ಕುಲಕರ್ಣಿ ಸ್ವಾಗತಿಸಿದರು.‌ ಶೇಷಾದ್ರಿ ಕೆ. ವಂದಿಸಿದರು. ನಿಖಿತಾ ನಿರೂಪಿಸಿದರು.

Share this