ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ: ನಾಯಕತ್ವದಿಂದ ದೇಶ ಕಟ್ಟುವ ಕನಸು – ಡಿವೈಎಸ್ಪಿ ನಾಗರಾಜ ಜಿ.

ಸಪ್ತಸಾಗರ ವಾರ್ತೆ,ವಿಜಯಪುರ, ಜು. 13: ನಗರದ ಬಿ.ಎಲ್.ಡಿ.ಇ. ಸಂಸ್ಥೆಯ ಶ್ರೀ ಬಿ.ಎಂ. ಪಾಟೀಲ ಪಬ್ಲಿಕ್ ಸಿಬಿಎಸ್‌ಇ ಶಾಲೆಯಲ್ಲಿ ವಿದ್ಯಾರ್ಥಿ ಚುನಾವಣೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಜಯಪುರ ನಗರ ಡಿವೈಎಸ್ಪಿ ನಾಗರಾಜ ಜಿ. ಮಾತನಾಡಿ, “ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು ಹಾಗೂ ಹೊಣೆಗಾರಿಕೆಯ ಗುಣಗಳನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂದು ಶಾಲೆಯನ್ನು ಮುನ್ನಡೆಸುವ ಮುಖ್ಯ ಬಾಲಕ-ಬಾಲಕಿಯರು ನಾಳೆ ದೇಶದ ನಾಯಕತ್ವ ವಹಿಸುವ ವ್ಯಕ್ತಿಗಳಾಗಬಹುದು” ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪಾಲಕರಿಗೆ ಗೌರವ ನೀಡಬೇಕು. ಪ್ರಮಾಣವಚನ ಸ್ವೀಕರಿಸಿದ ಎಲ್ಲಾ ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಹಾಗೂ ಮಾದರಿಯಾಗಿ ನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಬಾಲಕಿಯಾಗಿ ಕಿಂಜಲ್ ಹಜೇರಿ, ಮುಖ್ಯ ಬಾಲಕನಾಗಿ ಅರ್ಜುನ ಪಾಟೀಲ ಆಯ್ಕೆಯಾಗಿದ್ದು, ಕ್ರೀಡಾ ವಿಭಾಗದ ಮುಖ್ಯ ಬಾಲಕ ಅಪ್ಪು ಬಬಲೇಶ್ವರ, ಮುಖ್ಯ ಬಾಲಕಿ ಛವಿ ರುಣವಾಲ, ಸಾಂಸ್ಕೃತಿಕ ವಿಭಾಗದ ಮುಖ್ಯ ಬಾಲಕ ತೇಜಸ್ ನಾಯಕ, ಮುಖ್ಯ ಬಾಲಕಿ ಸಾಮಿಯಾ ಜೈನ್, ಶಿಸ್ತು ವಿಭಾಗದ ಮುಖ್ಯ ಬಾಲಕ ಸಮರ್ಥ ಮದ್ದಾನಿಮಠ, ಮುಖ್ಯ ಬಾಲಕಿ ಶ್ರೇಯಾ ವಂದಾಲ, ಶಾಲಾ ಆವರಣ ಉಸ್ತುವಾರಿ ಮುಖ್ಯ ಬಾಲಕ ಫೈಝಲ್ ಬಲವನೆಕರ, ಮುಖ್ಯ ಬಾಲಕಿ ನಿಧಿ ಢವಳಗಿ, ಮಾಧ್ಯಮ ಉಸ್ತುವಾರಿ ಮುಖ್ಯ ಬಾಲಕಿ ಅದ್ವಿಕಾ ಸಾಸನೂರ ಸೇರಿದಂತೆ ವೈಭವಿ ನಾರ್ವೇಕರ್, ಪ್ರಣವ ಶಹ ಹಾಗೂ ವಿಶ್ವನಾಥ ನಾಗರಾಳ ತಮ್ಮ ತಂಡದೊಂದಿಗೆ ಅತಿಥಿಗಳಿಂದ ಬ್ಯಾಡ್ಜ್ ಹಾಗೂ ಶಾಲಾ ಧ್ವಜವನ್ನು ಸ್ವೀಕರಿಸಿದರು. ಬಳಿಕ ಅತಿಥಿಗಳು ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಚಾರ್ಯೆ ವಸುಧಾ ನಾರ್ವೇಕರ, ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ, ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this