ಸಪ್ತಸಾಗರ ವಾರ್ತೆ,ಕೊಲ್ಹಾರ, ಮಾ. 7: ವಿದ್ಯಾರ್ಥಿ ಜೀವನವು ಬದುಕಿನ ಸುವರ್ಣಾವಧಿ.
ನಿಶ್ಚಿತಗುರಿ, ಅಚಲ ಶೃದ್ಧೆ, ಅವಿರತ ಪ್ರಯತ್ನ, ಸರಳವಾದ ಆಲೋಚನೆಗಳಿಂದ ಇಂದಿನ ಮಕ್ಕಳು ಸೃಜನಶೀಲ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.ತಾಯಿ-ತಂದೆ-ಗುರುಗಳನ್ನು ಪ್ರೀತಿಯಿಂದ ಕಾಣುತ್ತಾ, ಅವರ ಮಾರ್ಗದರ್ಶನದಲ್ಲಿ ದೇಶದ ಶ್ರೇಷ್ಠ ವ್ಯಕ್ತಿಗಳಾಗಿ ರೂಪುಗೊಳ್ಳಿ ಎಂದು ನಾಗಠಾಣದ ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಮಸೂತಿ ಗ್ರಾಮದ ಶ್ರೀ ಗುರು ಸಂಗನ ಬಸವೇಶ್ವರ ವಜ್ರ ಮಹೋತ್ಸವ ಪ್ರೌಢ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡ ಹತ್ತನೇ ವರ್ಗದ ವಿದ್ಯಾರ್ಥಿಗಳ ಶುಭ ಕೋರುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವು ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿಯಾಗಿದ್ದು, ಈ ಹಂತದಲ್ಲಿ ಕಲಿಯುವ ಸದ್ಗುಣ, ಶಿಕ್ಷಣ, ಸಮಯ ಪರಿಪಾಲನೆಯು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಿ, ಜೀವನದ ಸವಾಲುಗಳನ್ನು ಎದುರಿಸಲು ಸಿದ್ಧಗೊಳಿಸುತ್ತದೆ ಎಂದು ಹೇಳಿದರು.
ಅಧ್ಯಯನದ ಅಭಿರುಚಿಯೊಂದಿಗೆ ಪ್ರತಿನಿತ್ಯ ಮಕ್ಕಳು ಜ್ಞಾನಾರ್ಜನೆಯಲ್ಲಿ ಹೊಸತನ ಹುಡುಕಿ, ಓದಿನಲ್ಲಿ ನವೋತ್ಸಾಹ ತುಂಬಿಕೊಂಡು ಅಪಾರಜ್ಞಾನ ಸಂಪಾದಿಸಿ, ಶ್ರೇಷ್ಠ ಸಾಧನೆಯೊಂದಿಗೆ ಸಮಾಜದ ಋಣಭಾರ ತೀರಿಸುವಂತಾಗಬೇಕು. ಇಚ್ಚಾಶಕ್ತಿ, ದೃಢ ಪ್ರಯತ್ನದಿಂದ ಯಶಸ್ಸು ಪಡೆಯಬೇಕು ಎಂದು ಹೇಳಿದರು.
ಜ್ಞಾನಾರ್ಜನೆ ವಿದ್ಯಾರ್ಥಿಗಳ ಮುಖ್ಯ ಗುರಿ. ಕೇವಲ ಪರೀಕ್ಷೆಗಾಗಿ ಓದದೆ, ಜ್ಞಾನಕ್ಕಾಗಿ ಶಿಸ್ತು, ಶ್ರದ್ಧೆಯಿಂದ ಓದಬೇಕು. ಸಮಯ ವ್ಯರ್ಥ ಮಾಡದೆ, ವಿದ್ಯೆಯ ಮಹತ್ವ ಅರಿತು, ಕಠಿಣ ಪರಿಶ್ರಮದಿಂದ ಜ್ಞಾನ ಸಂಪಾದಿಸುವತ್ತ ಮನಸ್ಸನ್ನು ಕೇಂದ್ರೀಕರಿಸಬೇಕು. ಮಕ್ಕಳು ಶಾಲೆಯ ಬೌದ್ಧಿಕ ಸಂಪತ್ತಾಗಿದ್ದು, ಅವರು ಶಾಲೆಯ ಕೀರ್ತಿ ಪತಾಕೆ ಎತ್ತಿ ಹಿಡಿಯುವ ಆಧಾರಸ್ತಂಭಗಳಾಗಬೇಕು ಎಂದು ತಿಳಿಸಿದರು.
ಪ್ರೌಢಶಾಲೆಯ ಅಧ್ಯಕ್ಷ ಸಿ ಪಿ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಸ್ತು, ತಾಳ್ಮೆ, ಸಂಯಮ, ಗುರಿ ಬಹಳ ಮುಖ್ಯ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳು ಜೀವನದ ಮೌಲ್ಯ-ಸಂಸ್ಕಾರಗಳನ್ನು ರೂಢಿಸಿಕೊಳ್ಳಬೇಕು
ಎಂದು ತಿಳಿಸಿದರು.
ವ್ಹಿ.ವ್ಹಿ. ಸಂಘದ ಸದಸ್ಯ ಬಿ ಎ ಪಾಟೀಲ, ರಾಮಣ್ಣ ಯರಂತಲಿ, ಬವರಮ್ಮ ಬಿಸ್ಟಗೊಂಡ, ಮುಖ್ಯ ಶಿಕ್ಷಕ ಎಚ್ ಆರ್ ರಾಠೋಡ, ದೈಹಿಕ ಶಿಕ್ಷಕ ಎಂ ಜಿ ಪಾಟೀಲ, ಜಗದೀಶ ಸಾಲಳ್ಳಿ, ಎಸ್ ಐ ಬಿರಾದಾರ, ಸಿ ಎ ಗೂಗಿಹಾಳ ಸೇರಿದಂತೆ ಶಾಲೆಯ ಶಿಕ್ಷಕ ಸಿಬ್ಬಂದಿ, ಮಕ್ಕಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಖೋ ಖೋ ಪಂದ್ಯಕ್ಕೆ ಆಯ್ಕೆಯಾದ ವೈಷ್ಣವಿ ಬಂಡಿವಡ್ಡರ, ಐಶ್ವರ್ಯ ಹಂಗರಗಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷಾ ಸಾಧಕರನ್ನು ಸನ್ಮಾನಿಸಲಾಯಿತು. ಶಿಕ್ಷಕ ಜಿ ಎಸ್ ಗರಸಂಗಿ ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿ ಜೀವನವು ಬದುಕಿನ ಸುವರ್ಣಾವಧಿ-ಸಂತೋಷ ಬಂಡೆ


