ಸಪ್ತಸಾಗರ ವಾರ್ತೆ ವಿಜಯಪುರ, ಸೆ. 12:
ದ್ರಾಕ್ಷಿ ಬೆಳೆಗಾರರ ವಿವಿಧ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ರೈತ ಸಂಘ ಶುಕ್ರವಾರ ಮನವಿ ಸಲ್ಲಿಸಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ,
ಇಡೀ ಕರ್ನಾಟಕದಲ್ಲಿ ಅಂದಾಜು 1 ಲಕ್ಷ ಎಕರೆ ದ್ರಾಕ್ಷಿ ಬೆಳೆಯಲಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿಯೇ ಶೇ. 70ರಷ್ಟು ದ್ರಾಕ್ಷಿ ಬೆಳೆಯುತ್ತಿದ್ದು, ಇದನ್ನು ನಂಬಿ 15-20 ಸಾವಿರ ರೈತ ಕುಟುಂಬಗಳು ಹಾಗೂ ಸಾವಿರಾರು ರೈತ ಕಾರ್ಮಿಕರು ಬದುಕು ಸಾಗಿಸುತ್ತಿದ್ದಾರೆ. ಆದರೆ ದಲ್ಲಾಳಿಗಳ ಹಾವಳಿ, ಮಾರುಕಟ್ಟೆಯ ಕೊರತೆ, ಕೋಲ್ ಸ್ಟೋರೆಜ್ ಕೊರತೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಖರ್ಚು, ಕೂಲಿಯವರ ಪಗಾರ, ಔಷಧ, ಗೊಬ್ಬರ ಇನ್ನಿತರ ಖರ್ಚು ಹತ್ತು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ರೋಗ ಹಾಗೂ ಸರಿಯಾದ ಬೆಲೆ ಸಿಗದೇ ಬೀದಿಗೆ ಬಿದ್ದು ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಆದ್ದರಿಂದ ಸರ್ಕಾರ ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಹೆಚ್ಚಿನ ಮಳೆಯಿಂದಾಗಿ ಅನೇಕ ರೈತರ ಜಮೀನಿನಲ್ಲಿ ನೀರು ನಿಂತು ನಷ್ಟ ಅನುಭವಿಸುವಂತಾಗಿದೆ. ಇದನ್ನು ಮನಗಂಡು ವಿಮೆ ಹಾಗೂ ಸರಕಾರದಿಂದ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.
ಕಳೆದ ತಿಂಗಳು ಸುರಿದಿರುವ ಅತೀ ಮಳೆಯಿಂದಾಗಿ ಸಾಕಷ್ಟು ದ್ರಾಕ್ಷಿ ಬೆಳೆ ಹಾಳಾಗಿದೆ. ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
2024-25 ನೇ ಸಾಲಿನ ದ್ರಾಕ್ಷಿ ಬೆಳೆ ವಿಮೆ ಅವದಿ ಮುಗಿದರೂ ಇನ್ನುವರೆಗೂ ವಿಮೆ ಹಣ ಜಮಾ ಮಾಡಿಲ್ಲ. ಬೇಗ ವಿಮೆ ಹಣ ಜಮಾ ಮಾಡಬೇಕು.
ದ್ರಾಕ್ಷಿಗೆ ಸಂಬಂಧಿಸಿದ ವಿಮೆ ಕಂಪನಿಯ ಕಚೇರಿಯನ್ನು ವಿಜಯಪುರದಲ್ಲಿ ತೆರೆಯಬೇಕು. 2025-26 ನೇ ಸಾಲಿನ ವಾತಾವರಣದಲ್ಲಿ ದ್ರಾಕ್ಷಿ ಬೆಳೆಯಲು ಯೋಗ್ಯ ವಾತಾವರಣ ಇಲ್ಲ. ಕೂಡಲೇ ಜಂಟಿ ಸಮೀಕ್ಷೆ ಕೈಕೊಂಡು ಪ್ರಕೃತಿ ವಿಕೋಪದಿಂದ ಆಗಿರುವ ನಷ್ಟಕ್ಕೆ ಪರಿಹಾರವನ್ನು ನ್ಯಾಯಯುತವಾಗಿ ನೀಡಬೇಕು. ದ್ರಾಕ್ಷಿಗೆ ಹವಾಮಾನ ಆದಾರಿತ ವಿಮೆ ನೀಡುವುದಾಗಿ ಹೇಳಿ ಪ್ರಭಾವಿಗಳ ಆದೇಶದಂತೆ ಇದರಲ್ಲಿ ಕೂಡಾ ಅಕ್ರಮ ಕಂಡು ಬರುತ್ತಿದ್ದು, ಇದನ್ನು ಸರಿ ಪಡಿಸಿ ನ್ಯಾಯಯುತವಾಗಿ ನಷ್ಟ ಪರಿಹಾರ ನೀಡಬೇಕು. ಅವಶ್ಯಕತೆಗೆ ಅನುಗುಣವಾಗಿ ಕೋಲ್ಡ್ ಸ್ಟೋರೆಜ್ ಸ್ಥಾಪನೆ ಮಾಡಬೇಕು, ಪೂಜೆಯಾಗಿ ಬಹುದಿನಗಳೆ ಕಳೆದಿವೆ, ಅದು ಪ್ರಾರಂಭವಾಗಬೇಕು. ಸರ್ಕಾರಿ ಕೋಲ್ಡ್ ಸ್ಟೋರೆಜ್ ಭೂಮಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದ ವೈನ್ ಪಾರ್ಕ ಕೂಡಲೇ ಪ್ರಾರಂಭವಾಗಬೇಕು. ಎ.ಪಿ.ಎಮ್.ಸಿ ಅಡಿಯಲ್ಲಿ ದ್ರಾಕ್ಷಿ (ಮನುಕು) ಖರೀಧಿ ಪುನಃ ಆರಂಭವಾಗಬೇಕು. ಇದರಿಂದ ಮಹಾರಾಷ್ಟ್ರಕ್ಕೆ ಹೋಗುವ ಖರ್ಚು ಉಳಿದು ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ. ದ್ರಾಕ್ಷಿ ಇಲ್ಲದ ಜಮೀನಿಗೆ ವಿಮೆ ತುಂಬಿ ದ್ರಾಕ್ಷಿ ಎಂದು ರೈತರಿಂದ ಹಣ ಪಡೆದು ಬ್ಯಾನರ ಇಟ್ಟು ಜಿ.ಪಿ.ಎಸ್ ಮಾಡುತ್ತಿದ್ದು,
ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ನಕಲಿ ಬೀಜ, ಗೊಬ್ಬರ ಹಾಗೂ ಕೀಟನಾಶಕಗಳ ಹಾವಳಿ ಹೆಚ್ಚಾಗಿದ್ದು ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ರಾಹುಲ್ ಕುಬಕಡ್ಡಿ, ಚೂನಪ್ಪ ಪೂಜೇರಿ ಮುಂತಾದ ಪ್ರಮುಖರು ಸೇರಿದಂತೆ ರೈತರು ಇದ್ದರು.
ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಕೆ
