ಕಬ್ಬು ನುರಿಸುವ ಸಾಮರ್ಥ್ಯ 12 ಸಾವಿರ ಟಿಸಿಡಿಗೆ ಹೆಚ್ಚಳ: ಸಾರ್ವಜನಿಕ ಸಭೆಯಲ್ಲಿ ರೈತರ ಬೆಂಬಲ

ಸಪ್ತಸಾಗರ ವಾರ್ತೆ,ಚಡಚಣ, ಜು. 24: ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಾವಿನಾಳ ಗ್ರಾಮದಲ್ಲಿರುವ ಶ್ರೀ ದತ್ತ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಳ ಯೋಜನೆ ಕುರಿತು ಸಾರ್ವಜನಿಕ ಸಭೆ ಬುಧವಾರ ಕಾರ್ಖಾನೆ ಆವರಣದಲ್ಲಿ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಔದ್ರಮ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಯೋಜನೆಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯಪುರ ಪ್ರಾದೇಶಿಕ ಅಧಿಕಾರಿ ಎಸ್. ರಮೇಶ್ ಮಾತನಾಡಿ, ಕಾರ್ಖಾನೆಯ ಪ್ರಸ್ತುತ 2,500 ಟಿಸಿಡಿ ಕಬ್ಬು ನುರಿಸುವ ಸಾಮರ್ಥ್ಯವನ್ನು 12,000 ಟಿಸಿಡಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಇದರೊಂದಿಗೆ ಸಹ-ವಿದ್ಯುತ್ ಉತ್ಪಾದನಾ ಘಟಕದ ಸಾಮರ್ಥ್ಯವನ್ನು 19.5 ಮೆಗಾವ್ಯಾಟ್‌ನಿಂದ 43.5 ಮೆಗಾವ್ಯಾಟ್‌ಗೆ ಹಾಗೂ ಡಿಸ್ಟಿಲರಿ ಘಟಕದ ಸಾಮರ್ಥ್ಯವನ್ನು 60 ಕೆಎಲ್‌ಪಿಡಿಯಿಂದ 650 ಕೆಎಲ್‌ಪಿಡಿಗೆ ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ. ಈ ವಿಸ್ತರಣೆಯಲ್ಲಿ ಕಬ್ಬಿನ ರಸ, ಮೊಲಾಸಸ್ ಹಾಗೂ ವಿವಿಧ ಧಾನ್ಯಗಳನ್ನು ಕಚ್ಚಾ ವಸ್ತುವಾಗಿ ಬಳಸುವ ಉದ್ದೇಶವಿದೆ ಎಂದು ವಿವರಿಸಿದರು.
ಕಾರ್ಯಕ್ರಮವನ್ನು ಕಾರ್ಖಾನೆಯ ಸಂಚಾಲಕರಾದ ಪ್ರೀತಿ ರೂಪಾರೆಲ್ ಹಾಗೂ ಜಿತೇಂದ್ರ ಧಾರು, ಉಪಾಧ್ಯಕ್ಷ ಮೃತ್ಯುಂಜಯ ಶಿಂಧೆ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದು, ಆಡಳಿತಾಧಿಕಾರಿ ರವೀಂದ್ರ ಗಾಯಕವಾಡ ನೇತೃತ್ವ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಹಾವಿನಾಳ, ಕಾಂಚನಾಳ, ಹಾಲಳ್ಳಿ, ನಿವರಗಿ, ಗೋಡಿಹಾಳ ಸೇರಿದಂತೆ ಕಾರ್ಖಾನೆಯ ಕಾರ್ಯಕ್ಷೇತ್ರದ ವಿವಿಧ ಗ್ರಾಮಗಳ ರೈತರು ಹಾಗೂ ಗ್ರಾಮಸ್ಥರು ಕಬ್ಬು ನುರಿಸುವ ಸಾಮರ್ಥ್ಯ ಹೆಚ್ಚಳ ಯೋಜನೆಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಯೋಜನೆ ಅನುಷ್ಠಾನದಿಂದ ಕಬ್ಬು ಬೆಳೆಗಾರರಿಗೆ ಉತ್ತಮ ಅವಕಾಶಗಳು, ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ಹಿರಿಯ ಪರಿಸರ ಅಧಿಕಾರಿ ಗೋಪಾಲಕೃಷ್ಣ ಸಣ್ಣತಂಗಿ (ಬೆಳಗಾವಿ ವಲಯ), ಉಪನಿರ್ದೇಶಕ (ಆಹಾರ) ವಿನಯ ಪಾಟೀಲ, ಚಡಚಣ ಪೊಲೀಸ್ ಠಾಣೆಯ ಪಿಎಸ್‌ಐ ಅಪನಾಯಕ, ಹತ್ತಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಶಿವರಾಯ ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಕಂಪನಿಯ ಅಧಿಕಾರಿಗಳಾದ ಚಂಗದೇವ ಸಾಳ್ವೆ, ಭರತ ತಾವರೆ, ರವಿರಾಜ ಭೂಸಲೆ, ಜಿತೇಂದ್ರ ಮೆಟಕರಿ, ಅನಿರುದ್ಧ ಪಾಟೀಲ, ವಿಜಯ ಹತ್ತೂರೆ, ಸಂಗ್ರಾಮ ಸೂರ್ಯವಂಶಿ, ಸಂಜಯ ಸರಗರ, ರಾಹುಲ್ ಟಿಳೆಕರ, ವೆಂಕಟೇಶ ರಾವ್, ಚಂದ್ರಕಾಂತ ಬಿರಾಜದಾರ, ವಿನಾಯಕ ಪೂಜಾರಿ, ಸಚಿನ್ ನಿಕ್ಕಮ್, ಪುರುಷೋತ್ತಮ್ ಕಬಾಡಿಗೆ, ರವೀಂದ್ರ ಬಿರಾಜದಾರ, ಪ್ರಮೋದ ಪಾಟೀಲ ಹಾಗೂ ಉಮಾಶಂಕರ ಕ್ಷತ್ರಿ ಸೇರಿದಂತೆ ವಿವಿಧ ವಿಭಾಗಗಳ ಸಿಬ್ಬಂದಿ, ಕಬ್ಬು ಬೆಳೆಗಾರ ರೈತರು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Share this