ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ

ಸಪ್ತಸಾಗರ ವಾರ್ತೆ,ಬಬಲೇಶ್ವರ, ಅ. 12: ತಾಲೂಕಿನ ಕೃಷ್ಣನಗರದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2026-27ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಬಾಯ್ಲರ್ ಅಗ್ನಿ ಪ್ರದೀಪನ ಹಾಗೂ ಕೇನ್ ಕ್ಯಾರಿಯರ್ ಪೂಜಾ ಕಾರ್ಯಕ್ರಮ ಸೋಮವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆ ಅಧ್ಯಕ್ಷ ಕುಮಾರ ಚಂದ್ರಕಾಂತ ದೇಸಾಯಿ (ಜೈನಾಪುರ) ಮಾತನಾಡಿ, ಪ್ರಸಕ್ತ ಹಂಗಾಮಿನಲ್ಲಿ 10 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಕಾರ್ಖಾನೆಗೆ ಕಳುಹಿಸಬೇಕು. ಮುಂಬರುವ ದಿನಗಳಲ್ಲಿ ಹೊಸ ಕಾರ್ಖಾನೆಗೆ ಚಾಲನೆ ನೀಡಲಾಗುವುದು. ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಚ್ಚಿನ ಶ್ರಮ ವಹಿಸಬೇಕು ಎಂದು ಹೇಳಿದರು.
ಮಮದಾಪುರದ ಅಭಿನವ ಮುರುಗೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಕಾರ್ಖಾನೆ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ನಮ್ಮ ಭಾಗದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಇರುವುದು ಹೆಮ್ಮೆಯ ವಿಷಯ. ರೈತರು ಹಾಗೂ ಕಾರ್ಮಿಕರು ಕಾರ್ಖಾನೆಯ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಬೇಕು ಎಂದರು.
ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಜಯರಾಮ ಆಚಾರ್ಯ ಹಾಗೂ ಹಿರಿಯ ಆಚಾರ್ಯ ರಾಮಾಚಾರಿ ಕಟ್ಟಿ ಮಾತನಾಡಿದರು. ನಿರ್ದೇಶಕ ಎಸ್.ಟಿ. ಪಾಟೀಲ ಸ್ವಾಗತಿಸಿದರು. ರಾಮಾಚಾರಿ ಕಟ್ಟಿ ವಿಧಿವಿಧಾನದೊಂದಿಗೆ ಬಾಯ್ಲರ್ ಅಗ್ನಿ ಪ್ರದೀಪನ ಹಾಗೂ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಪ್ರಧಾನ ವ್ಯವಸ್ಥಾಪಕ ಜಯರಾಮ ಆಚಾರ್ಯ ದಂಪತಿ ಪೂಜೆಯಲ್ಲಿ ಪಾಲ್ಗೊಂಡರು.
ವಿವಿಧ ಮಠಾಧೀಶರಾದ ರುದ್ರಮುನಿ ಶಿವಾಚಾರ್ಯ, ಪ್ರಭು ತೋಂಟದಾರ್ಯ ಸ್ವಾಮೀಜಿ, ಪ್ರಭು ಮಹಾಸ್ವಾಮೀಜಿ, ಅಡವಿಸಿದ್ದೇಶ್ವರ ಸ್ವಾಮೀಜಿ, ಬಸವಲಿಂಗ ದೇವರು, ಡಾ. ಶಿವಲಿಂಗೇಶ್ವರ ಸ್ವಾಮೀಜಿ, ಡಾ. ವಿವೇಕಾನಂದ ದೇವರು, ಸದಾಶಿವಯ್ಯ ಹೊಳಿಮಠ ಹಾಗೂ ವಿಶ್ವನಾಥ ಕರಿಬಸವೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಅಶೋಕ ಲೆಂಕನ್ನವರ, ನಿರ್ದೇಶಕರಾದ ಹನುಮಂತ ಕೋರಡ್ಡಿ, ಈರಣಗೌಡ ನ್ಯಾಮಗೌಡರ, ರಮೇಶ ಜಕರೆಡ್ಡಿ, ಬಸನಗೌಡ ಪಾಟೀಲ, ಮಲ್ಲಪ್ಪ ಮಾದರ, ಸೋಮನಗೌಡ ಪಾಟೀಲ, ಸಂಜುಗೌಡ ಪಾಟೀಲ, ಎಸ್.ಟಿ. ಪಾಟೀಲ, ಗುರುಲಿಂಗಪ್ಪ ಅಂಗಡಿ, ಶ್ರೀನಿವಾಸ ನಿಡೋನಿ, ಪ್ರಭಾರ ವ್ಯವಸ್ಥಾಪಕ ನಿರ್ದೇಶಕಿ ಎಸ್.ಕೆ. ಭಾಗ್ಯಶ್ರೀ ಸೇರಿದಂತೆ ಕಾರ್ಖಾನೆಯ ಅಧಿಕಾರಿಗಳು, ಸಿಬ್ಬಂದಿ, ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕಬ್ಬು ಬೆಳೆಗಾರರು ಪಾಲ್ಗೊಂಡಿದ್ದರು.
ಶಿವಾನಂದ ಶೆಲ್ಲಿಕೇರಿ ಕಾರ್ಯಕ್ರಮ ನಿರೂಪಿಸಿದರು. ಬಿ.ಎಂ. ಚೌಗಲಾ ವಂದಿಸಿದರು.

Share this