ಬೇಸಿಗೆ: ನೀರು ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಸಲ್ಲದು- ಸಚಿವ ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ,ವಿಜಯಪುರ, ಏ.10: ಜಿಲ್ಲೆಯಲ್ಲಿ ಸದ್ಯಕ್ಕೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿಲ್ಲ. ಇಂಡಿ ಹಾಗೂ ಚಡಚಣ ಭಾಗದಲ್ಲಿ ನೀರಿನ ಸಮಸ್ಯೆ ತಲೆದೋರಬಹುದು. ಗ್ರಾಪಂ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್ ಮತ್ತು ಮಧ್ಯಮ‌ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕುಡಿಯುವ ನೀರಿನ ನಿರ್ವಹಣೆ ಕುರಿತ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಸಿಗೆ ಸಂದರ್ಭದಲ್ಲಿ ಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಕೇಂದ್ರಗಳಿಗೆ ತಕ್ಷಣ ತೆರಳಿ ಸಭೆ ನಡೆಸಿ ನಿಮ್ಮ ನಿಮ್ಮ ಹಂತದಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಇಂಡಿ ಸೇರಿದಂತೆ ಎಲ್ಲೆಲ್ಲಿ ನೀರಿನ ಸಮಸ್ಯೆ ಉದ್ಭವಿಸಿದಲ್ಲಿ ತಕ್ಷಣವೇ ಪರ್ಯಾಯ ವ್ಯವಸ್ಥೆಗಳನ್ನು ಕೈಗೆತ್ತಿಕೊಂಡು ಯಾವುದೇ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ನೋಡಿಕೊಳ್ಳುವುದರತ್ತ ನಿಗಾ ವಹಿಸಬೇಕು. ಸಾಧ್ಯವಾದರೆ ಬೋರವೆಲ್ ನಂತಹ ಜಲಮೂಲಗಳನ್ನು ಗುರುತಿಸಿಟ್ಟುಕೊಳ್ಳಬೇಕು. ಬೇಸಿಗೆ ಸಂದರ್ಭದಲ್ಲಿ ಜನ-ಜಾನುವಾರುಗಳಿಗೆ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಸದಾ ಸನ್ನದ್ಧವಾಗಿರಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಮುಂದಿನ ಇಪ್ಪತ್ತು ದಿನಗಳವರೆಗೆ ನೀರು ಬಿಡುಗಡೆ ಸಂದರ್ಭದಲ್ಲಿ ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಲು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಭೆ ನಡೆಸಿ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಮಾತನಾಡಿ, ಜಿಲ್ಲೆಯ ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯದಲ್ಲಿ ಕಳೆದ ವರ್ಷ ಇದ್ದ ನೀರಿನ ಲಭ್ಯತೆ ಎರಡೂ ಜಲಾಶಯದಲ್ಲಿ ಇದೆ ಎಂದು ಮಾಹಿತಿ ನೀಡುತ್ತಿದ್ದಂತೆಯೇ ಮಧ್ಯೆ ಪ್ರವೇಶಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಆಗಸ್ಟ್‌ ತಿಂಗಳವರೆಗೆ ಕುಡಿಯುವ ನೀರಿನ ಲಭ್ಯತೆಯನ್ನು ಬಳಸಿಕೊಳ್ಳಬೇಕು ಎಂದರು. ಗ್ರಾಮೀಣ ಪ್ರದೇಶ 40 ಬಹುಹಳ್ಳಿ ಕುಡಿಯುವ ನೀರಿನ (ಎಂವಿಎಸ್) ಯೋಜನೆಗಳು ಸಮರ್ಪಕವಾಗಿ ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಮುದ್ದೇಬಿಹಾಳ ಶಾಸಕರಾದ ಸಿ.ಎಸ್‌. ನಾಡಗೌಡ ಮಾತನಾಡಿ, ಜಲಾಶಯದ ಸ್ಟೋರೇಜ್ ನೋಡಿಕೊಂಡು ನೀರಿನ ಸಮರ್ಪಕ ನಿರ್ವಹಣೆ ಮಾಡಬೇಕು ಎಂದು ಸಲಹೆ ಮಾಡಿದರು.

ನಾಳೆ ಕೆರೆಗಳಿಗೆ ನೀರು
ಕೆರೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ನಿಗಾವಹಿಸಿ ಕೊನೆಯ ಹಂತದವರೆಗೂ ನೀರು ತಲುವಂತೆ ನೋಡಿಕೊಳ್ಳಬೇಕು ಎಂದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು, ಕೆರೆ ತುಂಬುವ ಶೆಡ್ಯೂಲ್ ಪ್ರಕಾರ ತುಂಬಿಸಬೇಕು. ಒಟ್ಟು 2.3 ಟಿಎಂಸಿ ನೀರು ನಾಳೆ ಹರಿಸಲಾಗುವುದು ಎಂದರು.
ಮೊದಲು ಟೇಲ್ ಎಂಡ್ ನೀರು ತಲುಪುವಂತೆ ನಿರ್ವಹಣೆ ಮಾಡಿ, ಕುಡಿಯುವ ನೀರಿನ ಉದ್ಧೇಶಕ್ಕೆ ನೀರು ಹರಿಸಲಾಗುತ್ತಿದೆ. ಅದೇ ಉದ್ಧೇಶಕ್ಕೆ ಮಾತ್ರ ನೀರು ಸದ್ಭಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಈ ವಿಷಯದಲ್ಲಿ ಪೊಲೀಸ್ ಇಲಾಖೆ, ಸಂಬಂಧಿಸಿದ ಇಲಾಖೆ ಸಮನ್ವಯತೆ ಸಾಧಿಸಬೇಕು ಎಂದರು.
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನಗರದ ಹಳೆಯ ಬೋರವೆಲ್ ಗಳು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಯಾವ ಯಾವ ವಾರ್ಡಿಗೆ ಎಷ್ಟು ನೀರು ಎಂಬುದಾಗಿ ಶೆಡ್ಯೂಲ್ ಮಾಡಿ ಸಮರ್ಪಕವಾಗಿ ನೀರು ಪೂರೈಸಬೇಕು ಎಂದರು.

ಭೂತನಾಳ ಕೆರೆಯಲ್ಲಿ ನೀರು ಸಂಗ್ರಹಿಸಿ
ಭೂತನಾಳ ಕೆರೆಗೆ ವಿಶೇಷವಾಗಿ ಬೇಸಿಗೆ ಸಂದರ್ಭದಲ್ಲಿ ನೀರು ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.
ನಗರಕ್ಕೆ ನೀರಿನ ಯಾವುದೇ ತೊಂದರೆಯಾಗದ ಹಾಗೆ ನೀರು ನಿರ್ವಹಣೆ ಮಾಡಬೇಕು. ನಗರದ ಬಾವಿಗಳನ್ನು ಸ್ವಚ್ಚಗೊಳಿಸಿ, ಅನ್ಯ ಉದ್ಧೇಶಗಳಿಗೆ ನೀರು ಬಳಸಬಹುದಾಗಿದೆ. 26 ಬಾವಿಗಳಿಗೆ ಸಿಎಸ್ ಆರ್ ಅನುದಾನದಲ್ಲಿ ಬಾವಿ ಸ್ವಚ್ಛಗೊಳಿಸಿ ಮೋಟಾರ್ ಅಳವಡಿಸಲಾಗಿದೆ. ತಾಜಬಾವಡಿ ನೀರೂ ಬಳಕೆಯಗುತ್ತಿದೆ. ಬೋರವೆಲ್ ಮರುಪೂರಣಗೊಳಿಸಿ ನೀರು ಬಳಸಿಕೊಳ್ಳಬಹುದು. ಬಾವಿ ನೀರನ್ನು ಪರ್ಯಾಯ ವ್ಯವಸ್ಥೆ ಮಾಡಿ,ಸ್ಥಳೀಯ ಸಂಸ್ಥೆಯಲ್ಲಿ ಸಮಸ್ಯೆ ಇರದಂತೆ ಮುಂಜಾಗ್ರತೆ ವಹಿಸಬೇಕು ಎಂದರು.
ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳು ಸೇರಿದಂತೆ ಕೆಲವು ಕಡೆ ಕೃಷಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿಗೆ ಪರಿಹಾರ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಸೂಚಿಸಿದರು.

ಜಲಧಾರೆ ಯೋಜನೆ ಶೀಘ್ರ ಪೂರ್ಣಗೊಳಿಸಿ
ಬೇಸಿಗೆಯಲ್ಲೂ ಜಿಲ್ಲೆಯಲ್ಲಿ ನೀರಿನ ಶಾಶ್ವತ ಪರಿಹಾರ ಕಲ್ಪಿಸಲಿರುವ ಮಹತ್ವಾಕಾಂಕ್ಷೆಯ ಜಲಧಾರೆ ಯೋಜನೆಯನ್ನು ಯುದ್ಧೋಪಾದಿಯಲ್ಲಿ ಕೈಗೊಂಡು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು ಮಾಡಿದರು.
ಜಲಧಾರೆ ಯೋಜನೆ ಭೌತಿಕವಾಗಿ ಶೇ. 81 ರಷ್ಟು ಪೂರ್ಣ ಆಗಿದೆ. ಅರಣ್ಯ ಹಾಗೂ ಕೆಲವು ಸಮಸ್ಯೆಗಳಿವೆ. ಆ ಸಮಸ್ಯೆಗಳಿಗೆ ಬೇಗ ಪರಿಹಾರ ಕಂಡುಕೊಂಡು, ಯೋಜನೆ ಪೂರ್ಣಗೊಳಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆದಾಗ್ಯೂ ನಾವು ಜೂನ್, ಜುಲೈವರೆಗೆ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಆದರೆ ಜಲಧಾರೆ ಯೋಜನೆಯಲ್ಲಿರುವ ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸಚಿವರು ಗಂಭೀರವಾಗಿ ಹೇಳಿದರು.
ಸಿಂದಗಿ ಪಟ್ಟಣದಲ್ಲಿ ಜಲಧಾರೆ ಯೋಜನೆಯ ಓವರ್ ಹೆಡ್ ಟ್ಯಾಂಕ್
ಪೈಪಲೈನ್ ಎಷ್ಟು ಕಿಮೀ ಆಗಿದೆ. ಅದರ ಪ್ರಗತಿ ಆಲಮೇಲ ಹಾಗೂ ಮನಗೂಳಿಯಲ್ಲಿರುವ ಭೂಮಿ ‌ಸಮಸ್ಯೆಯನ್ನು ಶೀಘ್ರ ಇತ್ಯರ್ಥಪಡಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

2027 ಮಾರ್ಚ್‌ ವೇಳೆಗೆ ಹಂತ ಪೂರ್ಣಗೊಳಿಸಿ
ಮಹತ್ವಕಾಂಕ್ಷೆಯ ಜಲಧಾರೆ ಹಂತ -1 ಹಾಗೂ ಹಂತ-2ರ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ನಿವಾರಿಸಿಕೊಂಡು ಬೇಗ ಕಾಮಗಾರಿ ಮಾಡಿಸಬೇಕು. ಅರಣ್ಯ ಇಲಾಖೆ ಈ ಯೋಜನೆಯಡಿಯಿರುವ ತೊಂದರೆ ಬಗೆಹರಿಸಬೇಕು. 2027 ಮಾರ್ಚ್‌ ಒಳಗಾಗಿ ಪೂರ್ಣಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.
ಈ ಯೋಜನೆಯಡಿ ಇರುವ ವಿದ್ಯುತ್‌ ಪೂರೈಕೆಗೆ ಇರುವ ತಾಂತ್ರಿಕ ಮತ್ತಿತರೆ ಸಮಸ್ಯೆ ಪರಿಹರಿಸಲು ಸಭೆ ನಡೆಸಿ ಅಗತ್ಯ ಸಲಹೆ ನೀಡಿ, ಈ ಮಾಹಿತಿಯನ್ನು ಆಯಾ ಶಾಸಕರಿಗೆ ಒದಗಿಸಬೇಕು ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಯಾವುದೇ ಗೊಂದಲ, ಸಮಸ್ಯೆ ಮಾಡಿಕೊಳ್ಳದೇ ಸುಸೂತ್ರವಾಗಿ ಯೋಜನೆ ನಿರ್ವಹಿಸುವ ಮೂಲಕ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಈ ಕುರಿತು ಪ್ರತಿ ತಿಂಗಳು ವರದಿ ಸಲ್ಲಿಸಬೇಕು. ಜಿಲ್ಲೆಯ ಜನರ ನೀರಿನ ಸಮಸ್ಯೆ ಶಾಶ್ವತ ಬಗೆಹರಿಸುವ ಈ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತಾಲೂಕಿನಲ್ಲಿ ಸಭೆ ನಡೆಸಬೇಕು. ಜಿಲ್ಲಾ ಹಂತದಲ್ಲೂ ಸಭೆ ನಡೆಸಬೇಕು ಎಂದರು.
ಭೀಮಾ ನದಿಯ ಮೇಲೆ ಬರುವ ಬಹು ಹಳ್ಳಿ ಕುಡಿಯುವ ನೀರಿನ ಯೋಜನೆಯಡಿ ಸಮರ್ಪಕವಾಗಿ ನೀರು ಪೂರೈಸಬೇಕು ಎಂದರು.
ಸಭೆಯಲ್ಲಿ ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅಪ್ಪಾಜಿ ಸಿ. ಎಸ್. ನಾಡಗೌಡ, ವಿಠ್ಠಲ ಕಟಕದೊಂಡ, ರಾಜುಗೌಡ ಪಾಟೀಲ, ಅಶೋಕ ಮನಗೂಳಿ, ಮೇಯರ್ ಮಡಿವಾಳಪ್ಪ ಕರಡಿ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಆಲಮಟ್ಟಿ ಜಲಾಶಯದ ಮುಖ್ಯ ಎಂಜಿನೀಯರ್‌ಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share this