ವಿಸ್ಡಮ್ ಕರಿಯರ್ ಅಕಾಡೆಮಿ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 12 : ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಪ್ರಯುಕ್ತ ಎಸ್.ಬಿ. ವಿಸ್ಡಮ್ ಕೆರಿಯರ್ ಅಕಾಡೆಮಿ ಹಾಗೂ ಯುವ ಭಾರತ ಸಹಯೋಗದಲ್ಲಿ `ವಿವೇಕ ನಡೆ ಉತ್ಸಾಹ ಭರಿತವಾಗಿ ನಡೆಯಿತು. ಸ್ವಾಮಿ ವಿವೇಕಾನಂದರ ದಿವ್ಯ ಉಕ್ತಿಗಳನ್ನು ಮೊಳಗಿಸುತ್ತಾ, ಹಳದಿ ವರ್ಣದ ಟೀ-ಶರ್ಟ್ ತೊಟ್ಟ ಸಾವಿರಾರು ಯುವಕರು ಉತ್ಸಾಹದಿಂದ ಹೆಜ್ಜೆ ಹಾಕಿದರು.
ವಿಜಯಪುರದ ಶ್ರೀ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಂಡ ಈ ನಡೆ ಗಾಂಧಿವೃತ್ತ, ಶಿವಾಜಿ ವೃತ್ತ, ವಾಟರ್ ಟ್ಯಾಂಕ್ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಅಥಣಿ ರಸ್ತೆಯಲ್ಲಿರುವ ಸಾಯಿ ಗಾರ್ಡನ್ ತಲುಪಿ ಸಂಪನ್ನಗೊಂಡಿತು.
ನಡಿಗೆಯಲ್ಲಿ ಸ್ವಾಮಿ ವಿವೇಕಾನಂದರ ವೇಷ ತೊಟ್ಟ ಬಾಲಕ ಎಲ್ಲರ ಗಮನ ಸೆಳೆದ. ಸ್ವಾಮಿ ವಿವೇಕಾನಂದರ ಭಾವಚಿತ್ರ ಇರಿಸಿದ ಪುಷ್ಪಾಲಂಕೃತ ರಥ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿತು.
ವಿವೇಕ ನಡೆಗೆ ಚಾಲನೆ ನೀಡಿದ ಡಿವೈಎಸ್‌ಪಿ ಹಾಗೂ ಲೇಖಕ ಡಾ.ಬಸವರಾಜ ಯಲಿಗಾರ ಮಾತನಾಡಿ, ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸ್ವಾಮಿ ವಿವೇಕಾನಂದರ ಈ ಏಕೋಕ್ತಿ ಸಾಕು ಯುವಕರನ್ನು ಎಚ್ಚರಿಸಲು, ಈ ಉಕ್ತಿ ಕೇಳಿದಾಗ ಪ್ರತಿಯೊಬ್ಬರ ಯುವಕರಲ್ಲಿ ಗುರಿ ಮುಟ್ಟುವ ತವಕ, ಉತ್ಸಾಹ ಹಾಗೂ ಚೈತನ್ಯ ಜಾಗೃತಗೊಳ್ಳುತ್ತದೆ ಎಂದರು. ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿ, ಸಂಸ್ಕಾರಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿದ ಮಹಾನ್ ಚೇತನ, ಅವರ ಆದರ್ಶಮಯ ಜೀವನ, ಆದರ್ಶಮಯವಾದ ವಿಚಾರಗಳು ನಮಗೆ ನಿತ್ಯ ಪ್ರೇರಣೆಯ ಶಕ್ತಿ ಇದ್ದಂತೆ. ಅವರ ಜೀವನ-ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಿರಿ ಎಂದರು.
ದಿಕ್ಸೂಚಿ ಭಾಷಣ ಮಂಡಿಸಿದ ಚಿಂತಕ ಆದರ್ಶ ಗೋಖಲೆ ಮಾತನಾಡಿ, ನಮ್ಮ ದೇಶದ ಭವ್ಯ ಸಂಸ್ಕೃತಿ, ಸಂಸ್ಕಾರ ಹಾಗೂ ರೋಮಾಂಚನಮಯ ಇತಿಹಾಸದ ಬಗ್ಗೆ ನಾವು ಅರಿವು ಹೊಂದಬೇಕು. ಸ್ವಾಮಿ ವಿವೇಕಾನಂದರಂತಹ ಮಹಾನ್ ವ್ಯಕ್ತಿಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ಭಾರತೀಯ ಸಂಸ್ಕೃತಿ, ಭಾರತೀಯ ಪರಂಪರೆಯ ಅಮೃತದ ಸಿಹಿಯನ್ನು ಜಗತ್ತಿಗೆ ಪರಿಚಯಿಸಿದ ಶ್ರೇಯಸ್ಸು ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಸಹೋದರ-ಸಹೋದರಿಯರೇ ಎನ್ನುವ ಮೂಲಕ ಪ್ರಪಂಚದ ದಿಗ್ಗಜ ದಾರ್ಶನಿಕರು, ಧಾರ್ಮಿಕ ಪಂಡಿತರು ಸಹ ತಿರುಗಿ ನೋಡುವಂತೆ ಮಾಡಿದ ಪ್ರಖರವಾದ ವಿದ್ವತ್ತು ಹೊಂದಿದ್ದ ಸ್ವಾಮಿ ವಿವೇಕಾನಂದರು ಭಾರತ ಕಂಡ ಮಹಾನ್ ಚೇತನ ಎಂದರು.
ಎಸ್.ಬಿ. ವಿಸ್ಡಮ್ ಕೆರಿಯರ್ ಅಕಾಡೆಮಿ ಸಂಸ್ಥಾಪಕ ಶರಣಯ್ಯ ಭಂಡಾರಿಮಠ ಮಾತನಾಡಿ, ಸ್ವಾಮಿ ವಿವೇಕಾನಂದರು ಅಧ್ಯಾತ್ಮ ಹಾಗೂ ಜ್ಞಾನದ ಮೇರು ಪರ್ವತ. ಅವರ ಆದರ್ಶದ ಬೆಳಕಿನಲ್ಲಿ ಯುವಜನತೆ ಸಾಗಿ ಭವ್ಯ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಜಿಲ್ಲಾ ಯುವ ಪರಿಷತ್ ಅಧ್ಯಕ್ಷ ಶರಣು ಸಬರದ, ಬಸವರಾಜ ಬೈಚಬಾಳ, ವಿರೇಶ ಗೊಬ್ಬೂರ, ಚಿದಾನಂದ ಔರಂಗಾಬಾದ, ಆಕಾಶ ಸಬರದ, ಸೋಮಶೇಖರ ಚವ್ಹಾಣ, ಬಸವರಾಜ ಕರಿಕಬ್ಬಿ ಮೊದಲಾದವರು ಪಾಲ್ಗೊಂಡಿದ್ದರು.

Share this