ಸಪ್ತಸಾಗರ ವಾರ್ತೆ,ವಿಜಯಪುರ, ಜು. 28:
ನಗರದ ಖಾಜಾ ನಗರ ಹಾಗೂ ಟಿಪ್ಪು ನಗರದ ಕೊಳಚೆ ಪ್ರದೇಶದ ನಿವಾಸಿಗಳ ಪುನರ್ವಸತಿಗಾಗಿ ಬುರಣಾಪುರ ಗ್ರಾಮದ ಸರ್ವೆ ನಂ. 67/1ರಲ್ಲಿ 5 ಎಕರೆ ಜಮೀನನ್ನು ಮಂಜೂರು ಮಾಡಿರುವ ಜಿಲ್ಲಾಡಳಿತದ ಕ್ರಮವನ್ನು ದಲಿತ ಸ್ವರಾಜ್ಯ ಸೇನೆ–ಕರ್ನಾಟಕ ಸಂಘಟನೆ ಸ್ವಾಗತಿಸಿದೆ.
ಆದರೆ, ಜಮೀನು ಮಂಜೂರಾದರೂ ಪುನರ್ವಸತಿ ಕಾಮಗಾರಿ ವಿಳಂಬವಾಗದಂತೆ ತಕ್ಷಣವೇ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ಸ್ಥಳಾಂತರ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಮನವಿಯಲ್ಲಿ, ಪುನರ್ವಸತಿ ಪ್ರದೇಶದಲ್ಲಿ ನಿವಾಸಿಗಳು ಕೂಡಲೇ ನೆಲೆಸಲು ಅಗತ್ಯವಾದ ಕುಡಿಯುವ ನೀರು, ವಿದ್ಯುತ್, ರಸ್ತೆ, ಒಳಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ತುರ್ತಾಗಿ ಒದಗಿಸಬೇಕೆಂದು ಆಗ್ರಹಿಸಲಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 3ರಿಂದ 4 ಬೋರ್‌ವೆಲ್‌ಗಳನ್ನು ಕೊರೆಸಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸುವಂತೆ ಕೋರಲಾಗಿದೆ.
ಮಹಾನಗರ ಪಾಲಿಕೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಶೀಘ್ರವಾಗಿ ವಿತರಿಸಿ ಸ್ಥಳಾಂತರ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು. ಹೆಸ್ಕಾಂ ಹೊಸ ಬಡಾವಣೆಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ತಕ್ಷಣ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಕೊಳಚೆ ಪ್ರದೇಶದ ನಿವಾಸಿಗಳ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಸಂಬಂಧಿತ ಇಲಾಖೆಗಳ ಅಧಿಕಾರಿಗಳ ಜಂಟಿ ಸಭೆ ಕರೆಯಿಸಿ ಕಾಮಗಾರಿಗಳಿಗೆ ಕಾಲಮಿತಿಯೊಳಗೆ ಚಾಲನೆ ನೀಡಬೇಕು ಎಂದು ದಲಿತ ಸ್ವರಾಜ್ಯ ಸೇನೆ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಗೌಡಪ್ಪ ಬಡಿಗೇರ, ಅಮೃತ ಮಾವಿನಹಳ್ಳಿ, ಪರಶುರಾಮ ಕರವಿನಾಳ, ತಿಪ್ಪಣ್ಣ ಡಿ., ಸುಭಾಷ್ ಪಾಂಡ್ರೆ, ಪ್ರಭು ಸಿಂಧೆ, ಅಕ್ಷಯ್ ಕುಮಾರ್ ಅಜಮನಿ, ಆರೂಢಸ್ವಾಮಿ ಕಬಾಡೆ, ರಮೇಶ್ ಚವ್ಹಾಣ್, ಸುಭಾಷ್ಚಂದ್ರ ಹೊನ್ನಕಂಟಿ, ಗುರುಪಾದ ಬಿರಾದಾರ, ಹುಲಗೆಪ್ಪ ಹಂದ್ರಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬುರಣಾಪುರದ 5 ಎಕರೆ ಜಮೀನಿನಲ್ಲಿ ನೀರು, ವಿದ್ಯುತ್, ಹಕ್ಕುಪತ್ರ ಸೇರಿ ಮೂಲಸೌಕರ್ಯ ಕಲ್ಪಿಸಲು ಆಗ್ರಹಿಸಿ ಸ್ವರಾಜ್ಯ ಸೇನೆ ಡಿಸಿಗೆ ಮನವಿ


