ಡಾಗ್ ಶೆಲ್ಟರ್ ನಿರ್ಮಾಣಕ್ಕೆ ಕ್ರಮ ವಹಿಸಿ : ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ

ಸಪ್ತಸಾಗರ ವಾರ್ತೆ, ವಿಜಯಪುರ, ಅ.10: ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಬೀದಿ ನಾಯಿಗಳಿಗೆ ಆಶ್ರಯ ಒದಗಿಸಲು ಬುರಾಣಪುರದಲ್ಲಿ ಕಾಯ್ದಿರಿಸಿದ ಎರಡು ಎಕರೆ ಜಾಗದಲ್ಲಿ ಡಾಗ್ ಶೆಲ್ಟರ್ ನಿರ್ಮಾಣಕ್ಕಾಗಿ ನೀಲ ನಕ್ಷೆ ತಯಾರಿಸಿ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚನೆ ನೀಡಿದ್ದಾರೆ.
ಸೋಮವಾರ ನಗರದ ಬುರಾಣಪುರದಲ್ಲಿರುವ ಗೋಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಡಾಗ್ ಶೆಲ್ಟರ್ ನಿರ್ಮಾಣಕ್ಕೆ ಸೂಚನೆ ನೀಡಿ, ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಕಾಳಜಿಯಿಂದ ನೋಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ನಗರದಲ್ಲಿರುವ ಪಶುಪಾಲನಾ ಇಲಾಖೆ ಕಚೇರಿಗೆ ಭೇಟಿ ನೀಡಿದ ಅವರು, ಬೀದಿ ನಾಯಿಗಳ ಸಂತಾನ ಹರಣಶಸ್ತ್ರ ಚಿಕಿತ್ಸಾ ಕಾರ್ಯಕ್ರಮದ ಕಟ್ಟಡವನ್ನು ನವೀಕರಿಸಲು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದ ಅವರು, ಪಾಲಿ ಕ್ಲಿನಿಕ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಜಾನುವಾರು ಚಿಕಿತ್ಸೆ, ನಾಯಿ ಮತ್ತು ಬೆಕ್ಕುಗಳ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾ ಕೊಠಡಿ, ರಕ್ತದ ಮಾದರಿಗಳನ್ನು ಪರೀಕ್ಷೆ ಮಾಡುವುದನ್ನು ಸಂಬಂಧಿಸಿದ ಪಶುವೈದ್ಯರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಅಶೋಕ ಘೋಣಸಗಿ, ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ. ವಿ.ಎನ್. ಹಾಸಂಗಿಹಾಳ, ಅಮೋಘ ತಳವಾರ ಸೇರಿದಂತೆ ವಿವಿಧ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.

Share this