ವಿಶೇಷ ಘಟಕ ಯೋಜನೆಯ ಅನುದಾನ ಲ್ಯಾಪ್ಸ್ ಆಗದಂತೆ ಕ್ರಮ ಕೈಗೊಳ್ಳಿ – ಸುನೀಲ್ ಉಕ್ಕಲಿ

ಸಪ್ತಸಾಗರ ವಾರ್ತೆ,ವಿಜಯಪುರ,ಡಿ. 5: ವಿಶೇಷ ಘಟಕ ಯೋಜನೆ ಅನುದಾನ ಲ್ಯಾಪ್ಸ್ ಆಗದಂತೆ ನಿಗದಿತ ಅವಧಿಯಲ್ಲಿ ಕ್ರಿಯಾಯೋಜನೆಯನ್ವಯ ಕ್ರಮವಹಿಸಿ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಸದಸ್ಯ ಸುನೀಲ ಉಕ್ಕಲಿ ಅವರು ಹೇಳಿದರು.
ಗುರುವಾರ ನಗರದ ನೂತನ ಪ್ರವಾಸಿ ಮಂದಿರದ ಸಭಾ ಭವನದಲ್ಲಿ ವಿಶೇಷ ಘಟಕ ಯೋಜನೆಗೆ ಒಳಪಡುವ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, 2025-26ನೇ ಸಾಲಿನ ವಿಶೇಷ ಘಟಕ ಯೋಜನೆಗೆ ಸಂಬಂಧಿಸಿದ ಪ್ರಗತಿ ಮಾಹಿತಿಯನ್ನು ಪಡೆದುಕೊಂಡ ಅವರು, ಕೃಷಿ ಇಲಾಖೆ, ಕೈಗಾರಿಕೆ ಇಲಾಖೆ, ಹೆಸ್ಕಾಂ, ಕಾರ್ಮಿಕ ಇಲಾಖೆ, ಆಯುಷ್ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.
ಫಲಾನುಭವಿಗಳ ಯೋಜನೆವಾರು ಮಾಹಿತಿ ಪರಿಶೀಲಿಸಿ, ನಿಗದಿಪಡಿಸಿರುವ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಬೇಕು. ಯೋಜನೆಯನ್ನು ನೈಜ ಫಲಾನುಭವಿಗಳಿಗೆ ತಲುಪಿಸಿ, ಅನುದಾನ ಲ್ಯಾಪ್ಸ್ ಆಗದಂತೆ ನೋಡಿಕೊಳ್ಳಬೇಕು. ಸರ್ಕಾರದ ಆಶಯಕ್ಕೆ ಪೂರಕವಾಗಿ ಕ್ರಮ ವಹಿಸಬೇಕು. ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರಕಿಸಿ ಕೊಡಬೇಕು ಎಂದು ಹೇಳಿದರು.
ಎಲ್ಲಾ ಇಲಾಖೆಗೆ ಬಿಡುಗಡೆಯಾಗುವ ಅನುದಾನವನ್ನು ನಿಗಧಿತ ಅವಧಿಯಲ್ಲಿ ಸಂಪೂರ್ಣವಾಗಿ ಹಾಗೂ ಸಮರ್ಪಕವಾಗಿ ಅನುದಾನ ಬಳಸಿ ವರದಿ ಸಲ್ಲಿಸಲು ಸೂಚಿಸಿದರು.
ನಿಗದಿತ ಅವಧಿಯಲ್ಲಿ ಯೋಜನೆಯನ್ವಯ ಪೂರ್ಣ ಪ್ರಮಾಣದ ಅನುದಾನ ಬಳಸಲು ವಿಫಲರಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಆಯೋಗದಿಂದ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ವಿಜಯಪುರ ಮಹಾನಗರ ಪಾಲಿಕೆ ಕಚೇರಿಗೆ ಭೇಟಿ ನೀಡಿ, 2025-26ನೇ ಸಾಲಿನ ವಿಶೇಷ ಘಟಕ ಯೋಜನೆಗೆ ಸಂಬಂಧಿಸಿದ ಪ್ರಗತಿ ಮಾಹಿತಿಯನ್ನು ಮಹಾನಗರ ಪಾಲಿಕೆ ಆಯುಕ್ತರಿಂದ ಪಡೆದುಕೊಂಡರು.
ಫಲಾನುಭವಿಗಳ ಯೋಜನೆವಾರು ಮಾಹಿತಿ ಪರಿಶೀಲಿಸಿ, ನಿಗದಿಪಡಿಸಿರುವ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರ, ಪಾಲಿಕೆ ಆರೋಗ್ಯಾಧಿಕಾರಿ ಎಸ್.ಎಲ್. ಲಕ್ಕಣ್ಣವರ, ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ಅರವಿಂದ ಲಂಬು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಜಿ.ಇಂಡಿ, ಸಮಾಜ ಕಲ್ಯಾಣ ಇಲಾಖೆಯ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

Share this