ತಿಕೋಟಾದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 27: ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಈ ಸಭೆಯಲ್ಲಿ ತಿಕೋಟಾ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಯ ಸಮಿತಿಯ ಅಧ್ಯಕ್ಷ ಗುರುಪಾದಗೌಡ ದಾಶ್ಯಾಳ ಅವರು ಮಾತನಾಡಿ, ‘ಪ್ರಜಾಪ್ರಭುತ್ವ’- ಜನರಿಗಾಗಿ, ಜನರಿಂದ, ಜನರಿಗೋಸ್ಕರ ಇರುವ ಆಡಳಿತ. ಅದು ನಮ್ಮೆಲ್ಲರ ಜೀವನಶೈಲಿ ಮತ್ತು ನಾವು ಪ್ರತಿದಿನ ಎದುರಿಸುವ ಹಕ್ಕುಗಳು ಹಾಗೂ ಜವಾಬ್ದಾರಿಗಳ ಸಂಕೇತವಾಗಿದೆ. ಪ್ರತಿಯೊಬ್ಬ ಪ್ರಜೆಯನ್ನೂ ಸಮಾನತೆಯೆಡೆಗೆ ಕರೆದೊಯ್ಯವುದೇ ಸಂವಿದಾನದ ಆಶಯವಾಗಿತ್ತು. ಸಂವಿಧಾನ ಜಾರಿಗೆ ಬಂದಿಲ್ಲವಾದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುತ್ತಿರಲಿಲ್ಲ. ಪ್ರಜಾಪ್ರಭುತ್ವ ಜಾರಿಗೆಯಾಗುವ ಪೂರ್ವದಲ್ಲಿ ಜನಸಾಮಾನ್ಯರ ಪರಿಸ್ಥಿತಿ ಶೋಚನೀಯವಾಗಿತ್ತು. ಪ್ರಜಾಪ್ರಭುತ್ವ ಬಂದ ಮೇಲೆ ಸಾಮಾನ್ಯ ಜನರೂ ಸಹ ಪ್ರತಿ ಕ್ಷೇತ್ರಗಳಲ್ಲಿ ಸಬಲರಾದರು. ಮುಖ್ಯವಾಗಿ ಮೂಲಭೂತ ಹಕ್ಕುಗಳ ರಕ್ಷಣೆ, ಪ್ರತಿಯೊಬ್ಬ ನಾಗರಿಕನ ಹಕ್ಕುಗಳನ್ನು ರಕ್ಷಿಸುವುದು ಪ್ರಜಾಪ್ರಭುತ್ವದ ಪ್ರಮುಖ ಜವಾಬ್ದಾರಿಯಾಗಿದೆ. ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂಘ ಸ್ವಾತಂತ್ರ್ಯಗಳಂತಹ ಅನೇಕ ಹಕ್ಕುಗಳು ಇದರಲ್ಲಿ ಸೇರಿವೆ. ಜಾತಿ, ಧರ್ಮ, ಲಿಂಗ ಅಥವಾ ಯಾವುದೇ ಭೇದವಿಲ್ಲದೆ ಎಲ್ಲರೂ ಕಾನೂನಿನ ಮುಂದೆ ಸಮಾನರಾಗಿರುತ್ತಾರೆ. ಪ್ರಜಾಪ್ರಭುತ್ವವು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಅದನ್ನು ಕಾಪಾಡಲು ನಮ್ಮೆಲ್ಲರ ಸಕ್ರಿಯ ಕೊಡುಗೆ ಅಗತ್ಯವಾಗಿದೆ. ಇದರ ಮುಂದುವರೆದ ಭಾಗ ಗ್ಯಾರಂಟಿ ಯೋಜನೆಗಳಿಂದ ಎಲ್ಲರಿಗೂ ಆರ್ಥಿಕ ಸಮಾನತೆಯನ್ನು ಸಾರುವ ಕೆಲಸ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಸಾರ್ವತ್ರಿಕ ಮೂಲ ಆದಾಯದ ಪರಿಕಲ್ಪನೆಯನ್ನು ಪರಿಚಯಿಸುತ್ತಿರುವ ಮೊದಲ ರಾಜ್ಯ ಕರ್ನಾಟಕ. ಜನರು ಬೆಲೆ ಏರಿಕೆ, ಇಂಧನ ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಮೊದಲಾದ ಸಮಸ್ಯೆಗಳಿಂದ ತತ್ತರಿಸಿದ್ದು, ಅವರ ಬದುಕು ಸುಧಾರಿಸುವ ಉದ್ದೇಶದಿಂದ ಹಾಗೂ ಮಹಿಳೆಯರ ಮತ್ತು ಯುವ ಸಮುದಾಯದ ಸಬಲೀಕರಣಕ್ಕಾಗಿ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ. ದೇಶದಲ್ಲಿಯೇ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ರಾಜ್ಯ ಕರ್ನಾಟಕವಾಗಿದೆ. ಈ ಎಲ್ಲ ಸಾಮಾಜಿಕ ಚಿಂತನೆಯೊಂದಿಗೆ ಈ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ಪ್ರತಿಪಾದಿಸಿದರು.
ಬೃಹತ್ ಮತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಮತ್ತು ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಡಾ. ಎಂ. ಬಿ. ಪಾಟೀಲ ಅವರು, ಜಾರಿಗೆ ತಂದಿರುವ ಯೋಜನೆಗಳಿಂದ ವಿಜಯಪುರ ಜಿಲ್ಲೆಯಲ್ಲಿ ಬೃಹತ್ ಪ್ರಮಾಣದಲ್ಲಿ ಆರ್ಥಿಕ ಅಭಿವೃದ್ದಿಯಂತಹ ಕ್ರಾಂತಿಕಾರಿ ಬೆಳವಣಿಗೆಯಾಯಿತು. ಹತ್ತಾರು ಸಾವಿರ ಕೋಟಿ ರೂಪಾಯಿಗಳ ಅನುದಾನದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿ ಪೂರಕ ವಾತಾವರಣ ಸೃಷ್ಟಿ ಮಾಡಲಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ಉಪ ಕಸಬುಗಳು, ಗುಡಿ ಕೈಗಾರಿಕೆ, ವಾಹನ ತಾಯಾರಿಕೆ ಮತ್ತು ಆಟೋ ಮೊಬೈಲ್ ಕ್ಷೇತ್ರದ ಕ್ರಾಂತಿಕಾರಿ ಬೆಳವಣಿಗೆ ಸೇರಿದಂತೆ ಸಾರಿಗೆ ವ್ಯವಸ್ಥೆ ಸುಧಾರಣೆಯಾಯಿತು. ಈ ಪರಿಣಾಮವಾಗಿ ಇನ್ನೂ ಹಲವಾರು ಕ್ಷೇತ್ರಗಳ ಅಭಿವೃದ್ಧಿ ಪಡಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿಯ ಕಾರ್ಯ ನಿರ್ವಾಹಕ ಅಧಿಕಾರಿ ಬಸವಂತ್ರಾಯಗೌಡ ಬಿರಾದಾರ, ಗ್ಯಾರಂಟಿ ಯೋಜನೆಗಳ ತಾಲೂಕು ಮಟ್ಟದ ಸಮಿತಿಯ ಸದಸ್ಯರಾದ ಸಂಜು ಆಯತವಾಡ, ಮುತ್ತು ಹಿರೇಮಠ, ಗಂಗೂಬಾಯಿ ಮಡದಾನ, ಶಿವಾನಂದ ಹಂಜಗಿ, ಗೈಬಿಲಾಲ ಮುಜಾವರ, ಹೊನವಾಡ ಗ್ರಾ. ಪಂ. ಅಧ್ಯಕ್ಷ ತುಕಾರಾಮ ದಡಕೆ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೋಭಾ ಶೀಳಿನ, ತಾ.ಪಂ. ಪ್ರಥಮ ದರ್ಜೆಯ ಸಹಾಯಕ ರೀತಾ ಮೌರ್ಯ, ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು, ತಾಲೂಕು ಮಟ್ಟದ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು, ಊರಿನ ಗಣ್ಯರು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.

Share this