2030 ರೊಳಗೆ 2.5 ಲಕ್ಷ ಮನೆಗಳಿಗೆ ಸಿ.ಎನ್.ಜಿ ಗ್ಯಾಸ್ ಸಂಪರ್ಕ ಗುರಿ: ಯತ್ನಾಳ

ಸಪ್ತಸಾಗರ ವಾರ್ತೆ ವಿಜಯಪುರ, ಡಿ. 6: ಮನೆಗಳಿಗೆ ನೇರವಾಗಿ ಸಿ.ಎನ್.ಜಿ ಸರಬರಾಜು ಮಾಡಿ, ನಗರವನ್ನು ಮಾಲಿನ್ಯ ಮುಕ್ತವಾಗಿಡುವ ಬಹಳ ದಿನಗಳ ಕನಸು ಥಿಂಕ್ ಗ್ಯಾಸ್ ಸಿ.ಎನ್.ಸಿ ಮೂಲಕ ನಡೆಯುತ್ತಿದೆ. 2030 ರೊಳಗೆ 2.5 ಲಕ್ಷ ಮನೆಗಳಿಗೆ ನೇರವಾಗಿ ಪಿ.ಎನ್.ಜಿ ಗ್ಯಾಸ್ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದರು.
ನಗರದಲ್ಲಿ ಶುಕ್ರವಾರ ಥಿಂಕ್ ಗ್ಯಾಸ್ ಸಿ.ಎನ್.ಜಿ ಸ್ಟೇಶನ್ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ವಿಜಯಪುರ ನಗರದಲ್ಲಿ 120 ಮನೆಗಳು ಮತ್ತು ಹಲವು ವಾಣಿಜ್ಯ ಸಂಸ್ಥೆಗಳು ನೈಸರ್ಗಿಕ ಅನಿಲದ ಪ್ರಯೋಜನ ಪಡೆಯುತ್ತಿವೆ. ಇದಕ್ಕಾಗಿ 25 ಕಿ.ಮೀ ಎಂ.ಡಿ.ಪಿ.ಇ ಲೈನ್ ಜೋಡಿಸಲಾಗಿದೆ ಎಂದರು.
ಈ ಮೊದಲು ವಿಜಯಪುರ ನಗರ ದೂಳಿನಿಂದ ಅಸ್ತಮಾ ವಿಪರಿತವಾಗಿತ್ತು. ನನ್ನ ಅವಧಿಯಲ್ಲಿ ಗುಣಮಟ್ಟದ ರಸ್ತೆಗಳು, ಚರಂಡಿ ನಿರ್ಮಾಣ, ಗಿಡಗಳು ನೆಟ್ಟಿದ್ದರಿಂದ ದೇಶದಲ್ಲಿ ವಿಜಯಪುರ 3ನೇ ಉತ್ತಮ ಪರಿಸರ ನಗರವಾಗಿದೆ. ಮನೆ ಮನೆಗೆ ಗ್ಯಾಸ್ ಸಂಪರ್ಕದಿಂದ 2030 ರೊಳಗಾಗಿ ನಗರ ಶೇ 100 ರಷ್ಟು ಪರಿಸರ ಮಾಲಿನ್ಯದಿಂದ ಮುಕ್ತವಾಗಲಿದೆ ಎಂದು ಹೇಳಿದರು.
ದೇಶದಾದ್ಯಂತ ಸುರಕ್ಷಿತ, ಕಡಿಮೆ ವೆಚ್ಚದ ಮತ್ತು ಪರಿಸರ ಸ್ನೇಹಿ ಇಂಧನ ಪರಿಹಾರಗಳನ್ನು ಒದಗಿಸಲು ಬದ್ದವಾಗಿರುವ ಥಿಂಕ್ ಸಿ.ಎನ್.ಜಿ ಗ್ಯಾಸ್ ಸ್ಟೇಶನ್ ನಗರದಲ್ಲಿ ಆಗಿರುವುದರಿಂದ ಆಟೋ ರಿಕ್ಷಾ, ಕಾರುಗಳು, ಸ್ಕೂಲ್ ಬಸ್ ಗಳಿಗೆ ಪೆಟ್ರೋಲ್ ವೆಚ್ಚಕ್ಕೆ ಹೋಲಿಸಿದರೆ, ಬಹಳ ಹಣ ಉಳಿಯಲಿದೆ. ಸುಮಾರು ರೂ.200 ಕೋಟಿ ಅನುದಾನದಲ್ಲಿ ಅಲ್ಲಲ್ಲಿ ಬಾಕಿ ಉಳಿರುವ ರಸ್ತೆಗಳು, ಚರಂಡಿ ನಿರ್ಮಾಣ ಹಾಗೂ ಬೀದಿ ದೀಪಗಳ ಅಳವಡಿಕೆ ಕಾಮಗಾರಿ ಶೀಘ್ರದಲ್ಲೇ ಆರಂಭಿಸಲಾಗುವುದು. ಅಷ್ಟರೊಳಗಾಗಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ ಮಾಡಿಕೊಳ್ಳಬೇಕು ಸಲಹೆ ನೀಡಿದರು.
ಮಹಾನಗರ ಪಾಲಿಕೆ ಮೇಯರ್ ಎಂ.ಎಸ್,ಕರಡಿ, ಥಿಂಕ್ ಗ್ಯಾಸ್ ಪ್ರಾದೇಶಿಕ ಮುಖ್ಯಸ್ಥ ರಂಗರಾಜನ್ ಶೇಷಾದ್ರಿ, ಮಾರುಕಟ್ಟೆ ಮುಖ್ಯಸ್ಥ ಪ್ರಯಾಗ್ ಮಿಶ್ರಾ, ಜಿಲ್ಲಾ ವ್ಯವಸ್ಥಾಪಕ ರಮೇಶ ರೆಡ್ಡಿ ಮತ್ತಿತರರು ಇದ್ದರು.

Share this