ಯುವಜನರಲ್ಲಿ ಆತ್ಮಶಕ್ತಿ, ನೈತಿಕ ಮೌಲ್ಯ ಬೆಳೆಸಲು ಕರೆ
ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 19:
ನಶೆ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ದೇಶಾದ್ಯಂತ ಹಮ್ಮಿಕೊಂಡಿರುವ ಜಾಗೃತಿ ಅಭಿಯಾನದ ಮೂಲಕ 10 ಕೋಟಿ ಜನರನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ರಾಜಯೋಗಿನಿ ಬ್ರಹ್ಮಕುಮಾರಿ ಸುವರ್ಣ ಅಕ್ಕನವರು ಹೇಳಿದರು.
ನಗರದ ವಿವೇಕ ನಗರದ ಶ್ರೀ ಬಸವೇಶ್ವರ ಗಜಾನನ ತರುಣ ಮಂಡಳಿಯವರು ಉತ್ಸವ ಸಮಿತಿಯ ಅಂಗವಾಗಿ ಆಯೋಜಿಸಿದ್ದ ನಶೆ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳ ವ್ಯಸನವು ವ್ಯಕ್ತಿಯ ಆರೋಗ್ಯ, ಮಾನಸಿಕ ನೆಮ್ಮದಿಯ ಜೊತೆಗೆ ಕುಟುಂಬ ಮತ್ತು ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಯುವಜನತೆ ನಶೆಯ ಚಟಕ್ಕೆ ಬಲಿಯಾಗದಂತೆ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದೆ ಎಂದರು.
ರಾಜಯೋಗ, ಧ್ಯಾನ, ಸಕಾರಾತ್ಮಕ ಚಿಂತನೆ ಹಾಗೂ ಉತ್ತಮ ಜೀವನಶೈಲಿಯ ಮೂಲಕ ಆತ್ಮವಿಶ್ವಾಸ ಮತ್ತು ಮನೋಬಲವನ್ನು ಬೆಳೆಸಿಕೊಳ್ಳಬಹುದು. ಯುವಜನರಲ್ಲಿ ನೈತಿಕ ಮೌಲ್ಯ, ಆತ್ಮಶಕ್ತಿ ಹಾಗೂ ಆರೋಗ್ಯಕರ ಚಿಂತನೆಗಳನ್ನು ಬೆಳೆಸುವ ಮೂಲಕ ನಶೆ ಮುಕ್ತ ಸಮಾಜ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ನಶೆ ಮುಕ್ತ ಅಭಿಯಾನವನ್ನು ಮನೆ, ಶಾಲೆ, ಕಾಲೇಜು ಹಾಗೂ ವಿವಿಧ ಸಾಮಾಜಿಕ ಸಂಸ್ಥೆಗಳ ಮೂಲಕ ಜನಾಂದೋಲನವನ್ನಾಗಿ ರೂಪಿಸುವ ಅಗತ್ಯವಿದೆ. ಪ್ರತಿಯೊಬ್ಬರೂ ಅಭಿಯಾನದಲ್ಲಿ ಕೈಜೋಡಿಸಿದಾಗ ಮಾತ್ರ ಆರೋಗ್ಯವಂತ, ಸದೃಢ ಹಾಗೂ ನಶೆ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೆರೆದಿದ್ದ ಜನರಿಗೆ ನಶೆ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಗಜಾನನ ಸಮಿತಿಯ ಅಧ್ಯಕ್ಷ ನಿತಿನ್ ಪಾಟೀಲ, ಸ್ವರೂಪ್ ಕಪಾಲಿ, ಆದಿತ್ಯ ಬಿರಾದಾರ, ಸಿದ್ದರಾಮ ನಾಗಣಸೂರ, ಹರೀಶ ಬಿರಾದಾರ, ವಕೀಲ ವಿ.ಎಸ್. ಖಾಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಯುವಕರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.


