ಸಪ್ತಸಾಗರ ವಾರ್ತೆ,ವಿಜಯಪುರ, ಜು. 12:
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಕಷ್ಟ ಉಂಟುಮಾಡುತ್ತಿರುವ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಹಾಗೂ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯಪುರ ಜಿಲ್ಲಾ ಘಟಕವು ಸಂಸದ ರಮೇಶ ಜಿಗಜಿಣಗಿ ಅವರಿಗೆ ಮನವಿ ಸಲ್ಲಿಸಿತು.
ಜಿಲ್ಲಾ ಅಧ್ಯಕ್ಷ ಅರ್ಜುನ ಲಮಾಣಿ ಹಾಗೂ ಪ್ರಧಾನ ಕಾರ್ಯದರ್ಶಿ ಹಣಮಂತ ಕೊಣದಿ ಮಾತನಾಡಿ, ಈಗಾಗಲೇ ಸಿಇಟಿ ಹಾಗೂ ಟಿಇಟಿ ಉತ್ತೀರ್ಣರಾಗಿ ಸೇವೆಗೆ ಸೇರಿರುವ ಶಿಕ್ಷಕರಿಗೆ ಮತ್ತೊಮ್ಮೆ ಟಿಇಟಿ ಪರೀಕ್ಷೆ ಕಡ್ಡಾಯಗೊಳಿಸಿರುವುದು ಅನ್ಯಾಯವಾಗಿದೆ ಎಂದು ಹೇಳಿದರು.
ಈ ಕ್ರಮದಿಂದ ರಾಜ್ಯದ ಸಾವಿರಾರು ಶಿಕ್ಷಕರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ವಿಶೇಷವಾಗಿ ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರು ತೀವ್ರ ಆತಂಕದಲ್ಲಿದ್ದಾರೆ. ಟಿಇಟಿ ಪರೀಕ್ಷೆಯನ್ನು ಸರ್ಕಾರಿ ಶಾಲಾ ಶಿಕ್ಷಕರಿಗೆ ಮಾತ್ರ ಅನ್ವಯಿಸುವುದಕ್ಕೆ ಯಾವುದೇ ಸಮರ್ಥನೆ ಇಲ್ಲ. ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ ಅವರ ನಿರ್ದೇಶನದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮನವಿ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಸಂಸದ ರಮೇಶ ಜಿಗಜಿಣಗಿ, “ಶಿಕ್ಷಕರ ಬಗ್ಗೆ ನಮಗೂ ವಿಶೇಷ ಗೌರವ ಮತ್ತು ಕಾಳಜಿ ಇದೆ. ನಿಮ್ಮ ಮನವಿಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಪ್ರಯತ್ನಿಸುತ್ತೇನೆ. ಇದು ರಾಷ್ಟ್ರಮಟ್ಟದ ಸಮಸ್ಯೆಯಾಗಿದ್ದು, ಈ ಕುರಿತು ವ್ಯಾಪಕ ಚರ್ಚೆ ನಡೆಯುವಂತೆ ನೋಡಿಕೊಳ್ಳುತ್ತೇನೆ. ಶಿಕ್ಷಕರ ಸಮಸ್ಯೆಗೆ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ವತಿಯಿಂದ ಸಂಸದ ರಮೇಶ ಜಿಗಜಿಣಗಿ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ನಗರ ವಲಯ ಅಧ್ಯಕ್ಷ ಜುಬೇರ ಎಸ್. ಕೆರೂರ, ಜಿಲ್ಲಾ ಉಪಾಧ್ಯಕ್ಷ ರುದ್ರಮ್ಮ ಗಿಡ್ಡಪ್ಪಗೋಳ, ಸಂಘಟನಾ ಕಾರ್ಯದರ್ಶಿ ಕಬೂಲ್ ಕೊಕಟನೂರ, ತಾಲೂಕು ಅಧ್ಯಕ್ಷರಾದ ಅಶೋಕ ಚನಬಸಗೋಳ, ಮಲ್ಲಿಕಾರ್ಜುನ ಟಕ್ಕಳಕಿ, ಅಶೋಕ ಬೂದಿಹಾಳ, ಎಚ್.ಎಸ್. ಬಾರಿಕಾಯಿ, ಪಿ.ಸಿ. ತಳಕೇರಿ, ಬಿ.ಎಚ್. ಮುದನೂರ, ಬಿ.ಟಿ. ವಜ್ಜಲ, ಎಂ.ಎಸ್. ಚೌಧರಿ, ಪುಷ್ಪಾ ಗಚ್ಚಿನಮಠ, ಗೀತಾ ಹತ್ತಿ, ಸಾಬು ಗಗನಮಾಲಿ, ಸಿದರಾಯ ಅಥಣಿ, ಪಿ.ಎಂ. ಗಂಗೂರ, ಪ್ರವೀಣ ಪತ್ತಾರ ಸೇರಿದಂತೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಟಿಇಟಿ ರದ್ದುಪಡಿಸಲು ಸಂಸತ್ತಿನಲ್ಲಿ ಧ್ವನಿ ಎತ್ತಿ: ಸಂಸದ ಜಿಗಜಿಣಗಿ ಅವರಿಗೆ ಶಿಕ್ಷಕರ ಸಂಘ ಮನವಿ


