ಸಪ್ತಸಾಗರ ವಾರ್ತೆ,ವಿಜಯಪುರ, ಜು. 13:
ಗುರುವಿನ ಸ್ಥಾನ ಶ್ರೇಷ್ಠವಾದದ್ದು. ಅವರು ಶಿಷ್ಯರಿಗೆ ಮಾರ್ಗದರ್ಶಕರಾಗಿ ಮುನ್ನಡೆಸುವವರು. ಅವರಿಂದ ಆತ್ಮ ಜ್ಞಾನ ದೊರಕುತ್ತದೆ. ಪರಮಾನಂದವನ್ನು ಹೊಂದಲು ಸಾಧ್ಯವಿದೆ. ಗುರು ಭಗವಂತನ ಪ್ರತಿನಿಧಿಯಾಗಿ ಭೂಮಿಯ ಮೇಲೆ ಇರುತ್ತಾನೆ .ಜಾತಿ ,ಧರ್ಮ ಎಲ್ಲವನ್ನು ಮೀರಿ ಸಮಾನತೆಯ ತತ್ವದಲ್ಲಿ ವಿದ್ಯೆಯನ್ನು ದಾನ ಮಾಡುತ್ತಾನೆ ಎಂದು ಬಿಡಿಈ ಸಂಸ್ಥೆಯ ಪದವಿ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ಸುಭಾಷ ಕನ್ನೂರ ಹೇಳಿದರು.
ನಗರದ ಆಶ್ರಮರಸ್ತೆಯ ಐಶ್ವರ್ಯ ಬಡಾವಣೆಯ ವರದಾಂಜನೆಯ ದೇವಸ್ಥಾನದಲ್ಲಿ ನಡೆದ ೫೪೫ ನೇ ಮಾಸಿಕ ಸತ್ಸಂಗ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸ ನೀಡುತ್ತಿದ್ದರು.
ಇಂದು ಗುರುಗಳು ಪ್ರಗತಿಪರ ಚಿಂತಕರಾಗಬೇಕು. ಜೊತೆಗೆ ಧರ್ಮ ಚಿಂತನೆಯ ಪ್ರಸಾರಕರಾಗಬೇಕು. ಅಂದಾಗ ಗುರುವಿನ ಸ್ಥಾನ ದೊಡ್ಡದಾಗುತ್ತದೆ ಎಂದು ನುಡಿದರು.
ಗುರುಗಳು ನಿತ್ಯ ಅಧ್ಯಯನಶೀಲರಾಗುವುದರೊಂದಿಗೆ ಹೊಸದನ್ನು ಸಮಾಜಕ್ಕೆ, ಶಿಷ್ಯರಿಗೆ ನೀಡಬೇಕು ಹಾಗೂ ನಂಬಿಕೆಯ ನೆಲೆಯನ್ನು ಕಳೆದುಕೊಳ್ಳದೆ ಆತ್ಮ ಸಾಕ್ಷಾತ್ಕಾರ ದರ್ಶನವನ್ನು ಮಾಡಿಸಬೇಕು. ಸಾಮಾಜಿಕ ಚಿಂತಕರಾಗಿ ಪ್ರಗತಿಪರ ವಿಚಾರಗಳನ್ನು ಸಮಾಜದಲ್ಲಿ ಬೋಧಿಸಬೇಕು.
ಸಾಮಾಜಿಕ ಬೆಳವಣಿಗೆಗೆ ಗುರುಗಳ ಪಾತ್ರ ಹಿರಿದಾಗಿದೆ. ಗುರು ಎಂದರೆ ಭಕ್ತಿ ಹಾಗೂ ಶಕ್ತಿ ನೆಲೆಯಾಗಿ ಇರುತ್ತಾನೆ. ಶಿಲೆಯನ್ನು ಶಿಲ್ಪಿಯಾಗಿ ಶ್ರೇಷ್ಠ ಮೂರ್ತಿ ಮಾಡುವ ಶಕ್ತಿ ಗುರುವಿನಲ್ಲಿ ಇರುತ್ತದೆ. ಅವನ ಆಶ್ರಯ ಶಿಷ್ಯರಿಗೆ ಏನೆಲ್ಲ ದೊರಕಿಸಿಕೊಡುತ್ತದೆ. ಈ ಕಾರಣ ಗುರುಗಳನ್ನು ನಂಬಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆಯಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ಉದ್ಯಮಿದಾರ ಹನುಮಂತ ಚಿಂಚಲಿ ಅವರನ್ನು ಹಾಗೂ ಬಬಲೇಶ್ವರದ ಶಾಂತವೀರ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ವ್ಹಿ. ಬಿ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ವಿ. ಬಿ. ಪಾಟೀಲ ಅವರು ಮಾತನಾಡಿ ಕೃತಜ್ಞತೆಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣ್ಯ ವ್ಯಾಪಾರಸ್ಥ ರಾಮಗೊಂಡಪ್ಪ ಗುದ್ದಿ ಅವರು ವಹಿಸಿದ್ದರು.
ಅನಿಲಕುಮಾರ ಬಿ. ಬಿರಾದಾರ,
ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಎಸ್. ಬಿರಾದಾರ, ಅರವಿಂದ ಗೊಬ್ಬೂರ, ಸುಭಾಷ ಕರಿಕಬ್ಬಿ, ಪಾಯಣ್ಣ ಪಡಸಲಗಿ, ವಿವೇಕ ಹುಂಡೆಕಾರ, ಕಮಲಾಕರ ಕುಮಟಗಿ, ಬಸವರಾಜ ದೇವರ, ಬಸವರಾಜ್ ರೂಗಿ, ಮಧು ಕಲಾದಗಿ, ರಾಜಣ್ಣ ಜಕ್ಕೊಂಡಿ, ಶ್ರೀಶೈಲ ಬೆಲ್ಲದ, ಜಿ.ಡಿ. ಬಾಗೇವಾಡಿ, ಅರ್ಚಕರಾದ ಮಲ್ಲಯ್ಯಸ್ವಾಮಿ ಹಿರೇಮಠ,ಬಿ.ವ್ಹಿ. ಪಾಟೀಲ, ಎಂ.ಎಸ್. ಬಿಸನಾಳ, ನಾನಾಗೌಡ ಪಾಟೀಲ, ಹರ್ಷ ಬರಟಗಿ, ಎಂ.ಆರ್. ಬಡಿಗೇರ, ಎಸ್.ಕೆ.ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ವಿಶ್ರಾಂತ ಪ್ರಾಚಾರ್ಯ ಪ್ರೊ.ಎಮ್ . ಓಂ. ಶಿರೂರ ಸ್ವಾಗತಿಸಿ, ನಿರೂಪಿಸಿದರು. ಸಾಹಿತಿ ಡಾ. ಮಲ್ಲಿಕಾರ್ಜುನ ಮೇತ್ರಿ ವಂದಿಸಿದರು.
ಗುರುಗಳು ಪ್ರಗತಿಪರ ಚಿಂತಕರಾಗಬೇಕು- ಡಾ. ಕನ್ನೂರ


