ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಶಿಕ್ಷಕರು ಹೊರ ತರಬೇಕು: ಬಿರಾದಾರ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 6: ಸೃಷ್ಟಿಕರ್ತನು ಪ್ರತಿಯೊಬ್ಬ ಮಗುವಿಗೂ ವಿಶೇಷ ಸಾಮರ್ಥ್ಯವನ್ನು ಕೊಟ್ಟಿರುತ್ತಾನೆ. ಅದನ್ನು ಗುರುತಿಸಿ ಹೊರ ತೆಗೆಯುವ ಕಾರ್ಯವನ್ನು ಶಾಲಾ ಶಿಕ್ಷಕರು ಮಾಡಬೇಕಾಗಿದೆ ಎಂದು ಮಹಾನಗರ ಪಾಲಿಕೆಯ ಸದಸ್ಯ ಪ್ರೇಮಾನಂದ ಬಿರಾದಾರ ಹೇಳಿದರು.
ನಗರದ ಕನಕದಾಸ ಬಡಾವಣೆಯ ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಿಸ್ ಮತ್ತು ನೀಲಾಂಬಿಕಾ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಗಣೇಶ ವಿಸರ್ಜನೆ ಹಾಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಡಿದರು. ದಿನಕ್ಕೊಂದು ಆವಿಷ್ಕಾರಗಳ ಮೂಲಕ ಶರವೇಗದಲ್ಲಿ ಸಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಪಾಲಕರು ಹಾಗೂ ಶಿಕ್ಷಕರು ಕೇವಲ ಮಗುವಿನ ಅಂಕಗಳನ್ನು ನೋಡದೆ ಆತನ ಸಾಮರ್ಥ್ಯವನ್ನು ಗುರುತಿಸಬೇಕಾಗಿದೆ. ಬ್ರಿಟಿಷರ ವಿರುದ್ಧ ಒಟ್ಟುಗೂಡಲು ಲೋಕಮಾನ್ಯ ತಿಲಕರು ಪ್ರಾರಂಭಿಸಿದ ಗಣೇಶೋತ್ಸವ ಕಾರ್ಯಕ್ರಮ ಇಂದು ವಿವಿಧ ಆಯಾಮಗಳನ್ನು ಪಡೆದುಕೊಂಡಿದೆ. ಶಿಕ್ಷಣ ಸಂಸ್ಥೆಗಳಲ್ಲಿಯೂ ಗಣೇಶನನ್ನು ಪ್ರತಿಷ್ಠಾಪಿಸಿ ಮಕ್ಕಳ ಮನಸ್ಸನ್ನು ಮುದಗೊಳಿಸಿ ಅವರನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಸಂತಸ ತಂದಿದೆ ಎಂದು ಹೇಳಿದರು.
ಯುವ ವಕೀಲ ಮಹಮ್ಮದಗೌಸ ಹವಾಲ್ದಾರ ಮಾತನಾಡಿ, ಎಳೆಯ ಗೆಳೆಯರಾದ ನಾವೆಲ್ಲರೂ ಒಗ್ಗಟ್ಟಿನಿಂದ ಕಲಿಕೆಯಲ್ಲಿ ತೊಡಗಿಸಿಕೊಂಡು ಮುಂದಿನ ದಿನಮಾನಗಳಲ್ಲಿ ಭಾರತದ ಯಶಸ್ವಿ, ಪ್ರತಿಭಾನ್ವಿತ ಒಳ್ಳೆಯ ಪ್ರಜೆಗಳಾಗಿ ತಂದೆ ತಾಯಿ, ಗುರು ಹಿರಿಯರು ಹಾಗೂ ನಾಡಿನ ಕೀರ್ತಿಯನ್ನು ಹೆಚ್ಚಿಸಬೇಕು. ಈ ನಾಡಿನಲ್ಲಿ ಯಾರೂ ಕೇವಲ ಹಿಂದುಗಳಾಗಿ ಬದುಕಬೇಡಿ, ಮುಸ್ಲಿಮರಾಗಿ ಬದುಕಬೇಡಿ, ಜೈನರಾಗಿ ಬದುಕಬೇಡಿ, ಸಿಖ್ ರಾಗಿ ಬದುಕಬೇಡಿ ,ಇಂದಿನ ಮಕ್ಕಳೇ ನಾಳಿನ ನಾಗರಿಕರಾದ ನೀವುಗಳು ಭಾರತದ ಪ್ರಬುದ್ಧ ಪ್ರಜೆಗಳಾಗಿ ಜೀವಿಸಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಶಾಲೆಯು ಪ್ರಾರಂಭವಾದ ದಿನದಿಂದಲೂ ಭಿನ್ನ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದು, ಮಕ್ಕಳು ಸಂತಸದಿಂದ ತಮ್ಮನ್ನು ತಾವು ಕಲಿಕೆಯಲ್ಲಿ ತೊಡಗಿಸಿಕೊಂಡು ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಹೊರಹೊಮ್ಮಲಿ ಎನ್ನುವುದು ನಮ್ಮ ಆಶಾಮನೋಭಾವನೆಯಾಗಿದ್ದು. ಈ ವರ್ಷದ ಗಣೇಶ ಹಬ್ಬದ ನಿಮಿತ್ಯವಾಗಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಅದರಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಮಕ್ಕಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ಕೆಲಸ ಮಾಡಲಾಗಿದೆ ಎಂದರು.
ಅರಿಕೇರಿ ಅಮೋಘಸಿದ್ದೇಶ್ವರ ದೇವಸ್ಥಾನದ ಧರ್ಮದರ್ಶಿ ಅಪ್ಪು ಒಡೆಯರ, ಭಾಜಪ ಜತ್ತ ತಾಲೂಕಿನ ಅಧ್ಯಕ್ಷ ರಮೇಶ ದೇವರ್ಷಿ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಾಟೀಲ, ಮಣಪ್ಪುರಂ ಗೋಲ್ಡ್ ಫೈನಾನ್ಸ್ ಲೀ. ಶಾಖಾ ವ್ಯವಸ್ಥಾಪಕ ಭರತ ದಾಶಾಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ಲಕ್ಷ್ಮಣ ಬಿರಾದಾರ, ಮಹೇಶ ಕೋಳಿ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನೀಲಾ ಜತ್ತಿ, ಆಡಳಿತಾಧಿಕಾರಿ ಮಧು ಬಿರಾದಾರ, ಮುಖ್ಯ ಶಿಕ್ಷಕಿ ರಾಜಶ್ರೀ ಮುಳಜಿ, ಸೌಮ್ಯ ಗಲಗಲಿ, ಪೃಥ್ವಿ , ರಾಘವೇಂದ್ರ ರಾಥೋಡ, ಮಂಜುನಾಥ ಕುಡಚಿ, ಬಸವರಾಜ ಬರಗಿ, ಸೇರಿದಂತೆ ಶಿಕ್ಷಕ, ಶಿಕ್ಷಕಿಯರು ಸಿಬ್ಬಂದಿ ವರ್ಗದವರು,ಮುದ್ದು ಮಕ್ಕಳು ಭಾಗವಹಿಸಿದ್ದರು.
ಶಿಕ್ಷಕ ಆನಂದ ಕಂಬಾರ ಸ್ವಾಗತಿಸಿ, ನಿರೂಪಿಸಿದರು. ಪರಶುರಾಮ ಬಗಲಿ ವಂದಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರದ ಮಕ್ಕಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು. ತದನಂತರ ಪ್ರಸಿದ್ಧ ಸಾರವಾಡದ ಗೊಂಬೆ ಕುಣಿತದೊಂದಿಗೆ ಬಡಾವಣೆಯಲ್ಲಿ ಗಣೇಶನ ಮೂರ್ತಿಯ ಮೆರವಣಿಗೆ ನಡೆಯಿತು.

Share this