ಸಪ್ತಸಾಗರ ವಾರ್ತೆ,ಇಂಡಿ, ಜೂ. 20: ತಾಲೂಕಿನ ತೆಗ್ಗೆಹಳ್ಳಿ ಗ್ರಾಮದ ಹೊಸ ಊರಿನಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ನೂರಾರು ಮಹಿಳೆಯರು ಖಾಲಿ ಕೊಡಗಳೊಂದಿಗೆ ಆಡಳಿತ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತೆಗ್ಗೆಹಳ್ಳಿ ಗ್ರಾಮದ ಹೊಸ ಊರಿನಲ್ಲಿ ಸುಮಾರು 300 ಕುಟುಂಬಗಳು ವಾಸವಾಗಿದ್ದು, ಕುಡಿಯುವ ನೀರಿಗಾಗಿ ಕೇವಲ ಒಂದು ಬಾವಿಯನ್ನೇ ಅವಲಂಬಿಸಬೇಕಾಗಿದೆ. ಈ ಬಾವಿಯಿಂದ ದಿನಕ್ಕೆ ಕೇವಲ 15 ನಿಮಿಷಗಳ ಕಾಲ ಮಾತ್ರ ನೀರು ಪೂರೈಕೆಯಾಗುತ್ತಿದೆ. ನಂತರ ನೀರಿನ ಅಗತ್ಯಕ್ಕಾಗಿ ಗ್ರಾಮಸ್ಥರು ಸುತ್ತಮುತ್ತಲಿನ ತೋಟಗಳಿಗೆ ತೆರಳಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಹಿಳೆಯರು ಹಾಗೂ ವೃದ್ಧರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಗ್ರಾಮಸ್ಥರು ಈ ಸಮಸ್ಯೆಯನ್ನು ಹಲವು ಬಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪರಿಹಾರ ದೊರೆತಿಲ್ಲ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಡಿ. ಪಾಟೀಲ ಅವರ ನೇತೃತ್ವದಲ್ಲಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ವಿಜಯ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರಿಗೆ ಜಂಟಿಯಾಗಿ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಸಂವಿಧಾನ ಹಾಗೂ ಸರ್ಕಾರದ ಆಶಯದಂತೆ ಕುಡಿಯುವ ನೀರು ಒದಗಿಸುವುದು ಮೂಲಭೂತ ಹಕ್ಕಾಗಿದ್ದು, ಈ ಹಕ್ಕು ಒದಗಿಸುವಲ್ಲಿ ಸರ್ಕಾರ ಹಾಗೂ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಕೂಡಲೇ ಸಂಬಂಧಪಟ್ಟ ಇಲಾಖೆ ಮಧ್ಯಪ್ರವೇಶಿಸಿ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಅಯೂಬ್ ನಾಟೀಕರ ಮಾತನಾಡಿ, ಜನಪ್ರತಿನಿಧಿಗಳು ಕೇವಲ ಅಧಿಕಾರದ ರಾಜಕಾರಣಕ್ಕೆ ಸೀಮಿತವಾಗದೆ ಜನಸಾಮಾನ್ಯರ ಸಮಸ್ಯೆಗಳ ಕಡೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಶ್ರೀಶೈಲಗೌಡ ಪಾಟೀಲ, ಸಿದ್ದು ಡಂಗಾ, ಡಾ. ರಮೇಶ್ ರಾಠೋಡ, ಬಾಳು ರಾಠೋಡ, ಬಾಬು ಕಾಂಬಳೆ, ಶರಣು ಕಾಂಬಳೆ, ಶಿವಾನಂದ ಹೊಸಮನಿ, ಉಮರ್ ಮುಜಾವರ, ಅಸಾದುಲ್ಲಾ ಮುಜಾವರ, ಗಂಗಾಧರ ಬೀರನಹಳ್ಳಿ, ಸಾಜನ್ ದೇಗಿನಾಳ, ಸಾಹೇಬಗೌಡ ಬೀರನಹಳ್ಳಿ, ಸಿದ್ದಪ್ಪ ಬೀರನಹಳ್ಳಿ, ದುಂಡಾಬಾಯಿ ಬೀರನಹಳ್ಳಿ, ಕಸ್ತೂರಿ ಬೀರನಹಳ್ಳಿ, ರಾಜಶ್ರೀ ಕೋರೆ, ನಿಂಗವ್ವ ಬೀರನಹಳ್ಳಿ, ದೇವಕಿ ಕೋರೆ ಸೇರಿದಂತೆ ಹಲವರು ಭಾಗವಹಿಸಿದ್ದರು.
ನೀರಿಗಾಗಿ ಖಾಲಿ ಕೊಡಗಳೊಂದಿಗೆ ತೆಗ್ಗೆಹಳ್ಳಿ ಮಹಿಳೆಯರ ಪ್ರತಿಭಟನೆ


