ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 17:
ಪುನೀತ ರಾಜಕುಮಾರ ಅವರ ಸಾಧನೆ, ಸೇವೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಮಂಗಳವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಪುನೀತ ರಾಜಕುಮಾರ ಅವರ ಜನ್ಮದಿನದ ನಿಮಿತ್ತ ಹಮ್ಮಿಕೊಂಡ ‘ಸ್ಫೂರ್ತಿ ದಿನ’ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪುನೀತ ರಾಜಕುಮಾರ ತಮ್ಮ ವಿನಯಶೀಲ ನಡವಳಿಕೆ ಮತ್ತು ನಟನೆಯಿಂದ ಕನ್ನಡಿಗರ ಮನೆಮಾತಾಗಿದ್ದರು. ತಮ್ಮ
ಸಮಾಜ ಸೇವೆ, ಮಾನವೀಯ ಗುಣಗಳಿಂದ ಜನಮನ ಗೆದ್ದು, ಎಲ್ಲರಿಗೂ ಸ್ಪೂರ್ತಿಯಾಗಿದ್ದಾರೆ. ತಮ್ಮ ಜೀವನದಲ್ಲಿ ಮಾಡಿದ ಕೆಲಸಗಳಿಂದ ಯುವ ಸಮೂಹಕ್ಕೆ ಪ್ರೇರಣಾತ್ಮಕವಾಗಿದ್ದಾರೆ ಎಂದು ಹೇಳಿದರು.
ಪುನೀತ ರಾಜಕುಮಾರ ಕೋಟ್ಯಂತರ ಜನರ ಆರಾಧ್ಯ ದೈವ. ಅವರು ಎಲೆಮರೆ ಕಾಯಿಯಂತೆ ಅನಾಥಾಶ್ರಮ, ಗೋ ಶಾಲೆ, ಮಕ್ಕಳ ಶಿಕ್ಷಣಕ್ಕಾಗಿ ನೆರವು, ವೃದ್ಧಾಶ್ರಮ ಹೀಗೆ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿ, ಎಲ್ಲರಿಗೂ ಮಾದರಿಯಾಗಿದ್ದರು ಎಂದು ಹೇಳಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯದಲ್ಲಿಯೇ ರಾಷ್ಟ್ರ ಪ್ರಶಸ್ತಿ ವಿಜೇತ ನಟನಾಗಿ, ನಂತರ ಯಶಸ್ವಿ ನಾಯಕ-ಗಾಯಕರಾಗಿ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು. ನಟನೆಯ ಜೊತೆಗೆ ಸರಳ ವ್ಯಕ್ತಿತ್ವ, ದಾನ-ಧರ್ಮ ಮತ್ತು ನೇತ್ರದಾನದ ಮೂಲಕ ಪುನೀತ ಅವರು ಅಜರಾಮರಾಗಿದ್ದಾರೆ ಎಂದು ಹೇಳಿದರು.
ಸಂತೋಷ ಅರಕೇರಿ, ವೀರೇಶ ಹುಣಶ್ಯಾಳ, ಮಡಿವಾಳ ಸಾರವಾಡ, ಆನಂದ ಗಂಗನಳ್ಳಿ, ಪ್ರವೀಣ ಅರಕೇರಿ, ರೂಪಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪುನೀತ ರಾಜಕುಮಾರ ಸಾಧನೆ, ಸೇವೆ ಯುವಪೀಳಿಗೆಗೆ ಪ್ರೇರಣೆ-ಸಂತೋಷ ಬಂಡೆ


