ಹಿಜಾಬ್ ಅನುಮತಿ ಹಿಂಪಡೆಯುವರೆಗೆ ಹೋರಾಟ ನಿಲ್ಲದು: ಶಾಸಕ ಯತ್ನಾಳ ಎಚ್ಚರಿಕೆ

ಸಪ್ತಸಾಗರ ವಾರ್ತೆ ವಿಜಯಪುರ, ಜೂ. 5:
ಹಿಜಾಬ್ ಅನುಮತಿ ಹಿಂಪಡೆಯುವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಅಗತ್ಯಬಿದ್ದರೆ ಜೈಲಿಗೆ ಹೋಗಲು ಸಿದ್ದ. ನಮ್ಮ ಹಿಂದೂ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಕೇಸರಿ ಶಾಲುಗಳನ್ನು ಹಾಕಿಕೊಂಡೆ ಹೋಗುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಜಯಪುರ ನಗರದ ದರಬಾರ ಕಾಲೇಜು ಹತ್ತಿರ ಶುಕ್ರವಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ದರಿಸಲು ಅವಕಾಶ ನೀಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಪರ್ಯಾಯವಾಗಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸುವ ವೇಳೆ ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದ ನಂತರ ಮಾತನಾಡಿದ ಅವರು, ಹಿಜಾಬ್ ಗೆ ಅವಕಾಶ ನೀಡುವುದಾದರೆ ಕೇಸರಿ ಶಾಲಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಶಾಲಾ-ಕಾಲೇಜುಗಳಲ್ಲಿ ಶಿಸ್ತಿನ ಪ್ರತೀಕವಾಗಿ ಸಮವಸ್ತ್ರ ವ್ಯವಸ್ಥೆ ಜಾರಿಯಲ್ಲಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಡಳಿತದ ಕೊನೆಯ ಅವಧಿಯಲ್ಲಿ ಮುಸ್ಲಿಂರನ್ನು ಖುಷಿ ಪಡಿಸಲು ನ್ಯಾಯಾಲಯದಲ್ಲಿದ್ದರೂ ರಾಜ್ಯ ಸರ್ಕಾರ ಹಿಜಾಬ್ ಧರಿಸಲು ಅನುಮತಿ ನೀಡಿದೆ. ಈ ಆದೇಶ ಹೊರಬಿದ್ದ ಸಂದರ್ಭದಲ್ಲೇ ಪರ್ಯಾಯವಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಲು ಹಾಗೂ ಹಣೆಗೆ ಕೇಸರಿ ತಿಲಕ ಹಚ್ಚಿಕೊಳ್ಳಲು ಅವಕಾಶ ನೀಡಬೇಕೆಂದು ಒತ್ತಾಯಿಸಲಾಗಿತ್ತು.
ಆ ನಿಟ್ಟಿನಲ್ಲಿ ಸರ್ಕಾರ ಹಿಜಾಬ್ ಅನುಮತಿ ಆದೇಶ ಹಿಂಪಡೆಯಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಿಸಲು ಮುಂದಾಗಿದ್ದೇವು. ಆದರೆ, ನಾವು ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಪೊಲೀಸರು ಬಂಧಿಸುವ ಮೂಲಕ ನಮ್ಮನ್ನು ಅಪರಾಧಿಗಳಂತೆ ನಡೆಸಿಕೊಂಡಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಇದೇ ರೀತಿ ಹಿಂದೂ ವಿರೋಧಿ ನೀತಿಯನ್ನು ಮುಂದುವರೆಸಿದರೆ ಪಶ್ಚಿಮ ಬಂಗಾಳದಂತೆ 2028 ರಲ್ಲಿ ಕರ್ನಾಟಕದಲ್ಲಿಯೂ ಧೂಳಿಪಟ ಆಗುವುದು ನಿಶ್ಚಿತ. ಇಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ನಡೆಯುತ್ತದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿಯ ಸಂವಿಧಾನ ನಡೆಯಲ್ಲ. ಮುಸ್ಲಿಂ ತುಷ್ಟಿಕರಣವನ್ನು ಸಹಿಸಲಾಗುವುದಿಲ್ಲ. ಹಿಂದೂಗಳ ಹೋರಾಟಗಳು, ಆರ್.ಎಸ್.ಎಸ್, ವಿಶ್ವಹಿಂದೂ ಪರಿಷತ್ ಚಟುವಟಿಕೆಗಳು ಹಾಗೂ ಹಿಂದೂಗಳ ಹಬ್ಬ ಹರಿದಿನಗಳಿಗೆ ತೊಂದರೆ ನೀಡಿದರೆ ಸುಮ್ಮನಿರುವುದಿಲ್ಲ. ಇದೇ ರೀತಿಯಾದರೆ ರಾಜ್ಯ ದಂಗೆ ಏಳುತ್ತದೆ. ಅಗತ್ಯ ಬಿದ್ದರೆ ಜೈಲಿಗೆ ಹೋಗಲು ಸಿದ್ದರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ರಾಜಶೇಖರ ಕುರಿಯವರ, ಕಿರಣ ಪಾಟೀಲ, ಜವಾಹರ ಗೋಸಾವಿ, ಕುಮಾರ ಗಡಗಿ, ಗಿರೀಶ ಬಿರಾದಾರ, ಮುಖಂಡರಾದ ಪಾಂಡುಸಾಹುಕಾರ ದೊಡ್ಡಮನಿ, ಶಂಕರ ಹೂಗರ, ಅಶೋಕ ಬೆಲ್ಲದ, ವಿಠ್ಠಲ ನಡುವಿನಕೇರಿ, ರಾಜು ಜಾಧವ, ರಾಜಶೇಖರ ಬಜಂತ್ರಿ, ನಾಗರಾಜ ಮುಳವಾಡ, ಪಾರೀಶ ಶಿರಹಟ್ಟಿ, ಸಿದ್ದನಗೌಡ ಬಿರಾದಾರ, ಬಸವರಾಜ ಲವಗಿ, ಭೀಮು ಮಾಶ್ಯಾಳ, ಬಸವರಾಜ ಬಿರಾದಾರ, ರಾಚು ಬಿರಾದಾರ, ಪ್ರವೀಣ ನಾಟೀಕಾರ, ಸಂತೋಷ ಕವಟೇಕರ ಸೇರಿದಂತೆ ಹಿಂದೂ ಕಾರ್ತಕರ್ತರು ಭಾಗವಹಿಸಿದ್ದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ

ಕಾಲೇಜು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಣೆ ತಡೆದು, ಬಂಧಿಸಿದ ಪೊಲೀಸರ ವಿರುದ್ಧ ಹಾಗೂ ಮುಸ್ಲಿಂ ತುಷ್ಟಿಕರಣಕ್ಕಾಗಿ ಪೊಲೀಸರ ಮೂಲಕ ಹಿಂದೂ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

Share this