ಸಪ್ತಸಾಗರ ವಾರ್ತೆ, ವಿಜಯಪುರ, ಜ. 4 : ಭಾರತದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಅವರ 195ನೇ ಜನ್ಮದಿನದ ಅಂಗವಾಗಿ ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರಿಗೆ “ಅಕ್ಷರದ್ವ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ” ಪ್ರದಾನ ಸಮಾರಂಭವನ್ನು ದಲಿತ ವಿದ್ಯಾರ್ಥಿ ಪರಿಷತ್ (ಡಿವಿಪಿ) ರಾಜ್ಯ ಸಮಿತಿ ವತಿಯಿಂದ ಶನಿವಾರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಪ್ರಾಸ್ತಾವಿಕ ಭಾಷಣದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ತಿನ ಸ್ಥಾಪಕ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, 16 ವರ್ಷದಿಂದ ಸಾವಿತ್ರಿಬಾಯಿ ಫುಲೆ ಅವರ ಹೆಸರಿನ ಪ್ರಶಸ್ತಿ ನೀಡುತ್ತಾ ವಿಜಯಪುರದಲ್ಲಿ ಸಮಾರಂಭ ಆಯೋಜನೆ ಮಾಡಲಾಗುತ್ತಿದೆ. ಸಾವಿತ್ರಿಬಾಯಿ ಫುಲೆ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸುವುದು ಗೌರವದ ಜೊತೆಗೆ ದೊಡ್ಡ ಜವಾಬ್ದಾರಿಯೂ ಆಗಿದೆ. ಫುಲೆಯವರ ಜನ್ಮದಿನದ ನೆಪದಲ್ಲಿ ಅವರ ವಿಚಾರಧಾರೆ, ಹೋರಾಟ ಮತ್ತು ಸಾಮಾಜಿಕ ಕೊಡುಗೆಗಳನ್ನು ಸ್ಮರಿಸುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು. ನಮ್ಮ ನಿಲುವು ಸದಾ ಸೈದ್ಧಾಂತಿಕವಾಗಿರಬೇಕು ಎಂದು ಅವರು ಒತ್ತಿ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋದ್ದಾರ ಹಾಗೂ ಪಾಲಿಕೆ ಸದಸ್ಯೆ ಆರತಿ ಶಹಾಪುರ ಮಾತನಾಡಿ, ಮಹಿಳಾ ಶಿಕ್ಷಣವೇ ಸಮಾಜದ ಬದಲಾವಣೆಗೆ ಮೂಲ ಎಂದು ಹೇಳಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ವಿಜಯಾ ಕೋರಿಶೆಟ್ಟಿ ಮಾತನಾಡಿ, ಹೆಣ್ಣು ಶಿಕ್ಷಣ ಕಲಿಯುವುದೇ ಅಂದು ದೊಡ್ಡ ಸವಾಲಾಗಿದ್ದ ಸಂದರ್ಭದಲ್ಲಿ ಸಾವಿತ್ರಿಬಾಯಿ ಫುಲೆ ಅವರು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ ವಿಧವೆಯರಿಗೆ ಶಿಕ್ಷಣ ನೀಡಿ ಶಿಕ್ಷಕರನ್ನಾಗಿ ರೂಪಿಸಿದರು. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿ ಆಶ್ರಯ ನೀಡಿದ ಅವರ ಕಾರ್ಯ ಸಮಾಜ ಪರಿವರ್ತನೆಯ ಮಹತ್ತರ ಹೆಜ್ಜೆಯಾಗಿದೆ ಎಂದರು.
ಇಂದು ಸಾವಿರಾರು ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯುತ್ತಿರುವುದಕ್ಕೆ ಸಾವಿತ್ರಿಬಾಯಿ ಫುಲೆಯವರ ಕೊಡುಗೆ ಮೂಲ ಕಾರಣ ಎಂದು ಹೇಳಿದರು.
ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, 21ನೇ ಶತಮಾನದಲ್ಲಿ ‘ಜೈ ಜವಾನ್, ಜೈ ಕಿಸಾನ್’ ಜೊತೆಗೆ ‘ಜೈ ಶಿಕ್ಷಕ’ ಎಂಬ ಘೋಷವನ್ನೂ ಸೇರಿಸಬೇಕು. ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾಗಿದೆ. ವ್ಯಕ್ತಿತ್ವ ನಿರ್ಮಾಣ ಮತ್ತು ಸಮಾಜ ಪರಿವರ್ತನೆಯ ಶಕ್ತಿ ಶಿಕ್ಷಕರ ಕೈಯಲ್ಲಿದೆ ಎಂದರು.
ವಿಶೇಷ ಸನ್ಮಾನಿತ ಡಿಎಸ್ಪಿ ಬಸವರಾಜ ಯಲಿಗಾರ ಮಾತನಾಡಿ, ಶತಮಾನಗಳಿಂದ ದಮನಕ್ಕೊಳಗಾದ ದಲಿತರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಉನ್ನತಿಗಾಗಿ ಶ್ರಮಿಸಿದವರು ಸಾವಿತ್ರಿಬಾಯಿ ಹಾಗೂ ಜ್ಯೋತಿಬಾ ಫುಲೆ. ಅವರ ವಿಚಾರಗಳು ಇಂದು ಕೂಡ ಪ್ರಸ್ತುತವಾಗಿವೆ ಎಂದರು.
ಫುಲೆ ದಂಪತಿಗಳು ಬೀಜವಾದರೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ವೃಕ್ಷ; ನಾವು ಅದರ ಫಲಾನುಭವಿಗಳು ಎಂದು ಹೇಳಿದರು.
ಡಾ. ಬಸವರಾಜ ಜಾಲವಾದಿ ಮಾತನಾಡಿ, ಶಿಕ್ಷಣವೇ ಶೋಷಣೆಯ ವಿರುದ್ಧದ ಶಕ್ತಿಯಾಗಿದೆ. ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಇಡೀ ಸಮಾಜವನ್ನು ಬದಲಾಯಿಸಬಹುದು ಎಂದು ಅಭಿಪ್ರಾಯಪಟ್ಟರು.
ಎಸ್.ಬಿ ವಿಸ್ಡಮ್ ಕರಿಯರ್ ಅಕಾಡೆಮಿಯ ಶರಣಯ್ಯ ಭಂಡಾರಿಮಠ ಮಾತನಾಡಿ, ಅಕ್ಷರ ಮತ್ತು ಪ್ರೀತಿಯಿಂದ ಬದುಕನ್ನು ಅರಳಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಕ್ರಾಂತಿ ಮತ್ತು ಮಹಿಳೆಯರು ಉನ್ನತ ಸ್ಥಾನಕ್ಕೆ ಏರಬೇಕು ಎಂಬ ಅವರ ಕನಸನ್ನು ಸ್ಮರಿಸಲಾಯಿತು. ಕಾರ್ಯಕ್ರಮವು ಮಾತೆ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಜೊತೆಗೆ ಸಂವಿಧಾನ ಸಂಕಲ್ಪ ಗೀತೆಯ ಮೂಲಕ ಚಾಲನೆ ನೀಡಲಾಯಿತು. ನಾಡಿನ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳಾ ಸಾಧಕಿಯರಿಗೆ ಗಣ್ಯರ ಮೂಲಕ ಸನ್ಮಾನಿಸಿ “ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಈ ವೇಳೆ ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಜಿಲ್ಲಾ ಸಂಚಾಲಕ ಅಕ್ಷಯಕುಮಾರ ಅಜಮನಿ, ಉಪಾಧ್ಯಕ್ಷ ಮಹಾದೇವ ಚಲವಾದಿ, ಯಶೊದಾ ಕಾಂಬಳೆ, ಪ್ರೇಮಾ ಕೋಳಿ, ಲತಾ ರಾಠೋಡ ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಮತ್ತು ಜಿಲ್ಲಾ ಮುಖಂಡರು ಹಾಗೂ ವಿದ್ಯಾರ್ಥಿ ಯುವಜನರು ಭಾಗವಹಿಸಿದ್ದರು.
ಮಹಿಳಾ ಸಾಧಕಿಯರಿಗೆ “ಅಕ್ಷರದ್ವ ಸಾವಿತ್ರಿಬಾಯಿ ಫುಲೆ ರಾಜ್ಯ ಪ್ರಶಸ್ತಿ” ಪ್ರದಾನ | 16ನೇ ವರ್ಷದ ಯಶಸ್ವಿ ಸಮಾರಂಭಕ್ಕೆ ಸಾಕ್ಷಿಯಾದ ವಿಜಯಪುರ


