ಕಲೆ-ಸಂಸ್ಕೃತಿಗೆ ಬಂಜಾರ ಸಮಾಜದ ಕೊಡುಗೆ ಅಪಾರ: ಸಚಿವ ಎಂ.ಬಿ. ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ.15: ಬಸವಣ್ಣನವರ ಕಾಯಕ ತತ್ವದಂತೆ ಬಂಜಾರ ಸಮಾಜ ಬಾಂಧವರು ಶ್ರಮ ಜೀವಿಗಳು. ಅವರು ಭವ್ಯವಾದ ಇತಿಹಾಸ ಹೊಂದಿದ್ದು, ಕಲೆ-ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಅವರು ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂತ ಶ್ರೀ ಸೇವಾಲಾಲ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂತ ಶ್ರೀ ಸೇವಾಲಾಲ್ ಅವರು ಸಮಾನತೆ, ಸೌಹಾರ್ದತೆ ಮತ್ತು ಶಿಸ್ತಿನ ಜೀವನದ ಮಹತ್ವವನ್ನು ಬೋಧಿಸಿದ ಮಹಾನ ವ್ಯಕ್ತಿ. ಪ್ರತಿ ತಾಂಡದಲ್ಲೂ ದುರ್ಗಾದೇವಿ ಹಾಗೂ ಸೇವಾಲಾಲ ದೇವಸ್ಥಾನಗಳನ್ನು ನಿರ್ಮಿಸಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಂಡಿರುವುದು ಬಂಜಾರ ಸಮುದಾಯದ ಆಧ್ಯಾತ್ಮಿಕ ಬಲದ ಸಂಕೇತವಾಗಿದೆ ಎಂದು ಹೇಳಿದರು.
ಸಾಂಪ್ರದಾಯಿಕ ಕಸೂತಿ ಕಲೆಯು ದೇಶ, ವಿದೇಶಗಳಲ್ಲಿ ಪ್ರಸಿದ್ದಿಯಾಗಿದೆ. ಸಮುದಾಯದ ಉಡುಗೆ-ತೊಡಿಗೆ ಹಾಗೂ ಆಚರಣೆಗಳು ಬಹುವಿಶಿಷ್ಟ ಹಾಗೂ ವಿಭಿನ್ನವಾಗಿದ್ದು, ಸಂಸ್ಕೃತಿ ಮತ್ತು ಪರಂಪರೆಗಳನ್ನು ಉಳಿಸಿ-ಬೆಳೆಸಿ ಕಾಪಾಡಿಕೊಂಡು ಬಂದಿದೆ. ಇಂತಹ ಸಾಂಸ್ಕೃತಿಕ ಪರಂಪರೆ- ಕಲೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಯಾವುದೇ ತಾಂಡಾವು ಹೊರಗುಳಿಯದಂತೆ ನೋಡಿಕೊಂಡು ಹಕ್ಕು ಪತ್ರ ವಿತರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಮೌಢ್ಯತೆ ತೊಡೆದು ಹಾಕಿದ ಶ್ರೀ ಸಂತ ಸೇವಾಲಾಲ ಅವರ ವಿಚಾರಧಾರೆಗಳನ್ನು ಅರಿಯುವ ಮೂಲಕ ಅವರು ಸಮಾಜ ಸುಧಾರಣೆಗೆ ನೀಡಿದ ಕೊಡುಗೆಯನ್ನು ಎಲ್ಲರೂ ಸ್ಮರಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕೌಶಲ್ಯಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಅವರು, ಆಚರಣೆಗಳು ಕೇವಲ ಒಂದು ದಿನದ ಆಚರಣೆಯಾಗದೇ, ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅನುಸರಿಸುವ ನಿಟ್ಟಿನಲ್ಲಿ ಪ್ರೇರಣೆ ಹೊಂದಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಬೇಕು. ಮಹಿಳೆಯರ ಶಿಕ್ಷಣಕ್ಕೆ ಒತ್ತು ನೀಡಬೇಕು. ಬಂಜಾರ ಸಮಾಜದ ಮಹಿಳೆಯರ ಸಂಪ್ರದಾಯ ಬದ್ಧ ಉಡುಗೆಯಲ್ಲಿ ಅಡಕವಾಗಿರುವ ಕಲೆ ಮತ್ತು ಸಂಸ್ಕೃತಿ ವೈಭವವನ್ನು ಸಾರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾಧಿಕಾರಿ ಆನಂದ.ಕೆ ಮಾತನಾಡಿ, ಸಂತ ಶ್ರೀ ಸೇವಾಲಾಲ್ ಅವರೋರ್ವ ದಾರ್ಶನಿಕರು ಅವರ ತತ್ವಾದರ್ಶ ಅವರು ನೀಡಿದ ಸಂದೇಶ ಸಮಾಜಕ್ಕೆ ದಾರದೀಪವಾಗಿದೆ. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಉಪನ್ಯಾಸ ನೀಡಿದ, ನಾರಾಯಣ ಪವಾರ, ಸಂತ ಶ್ರೀ ಸೇವಾಲಾಲ ಜೀವನ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ಬಹು ವಿಸ್ತೃತವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಇಲಿಯಾಸ ಬೋರಾಮಣಿ, ಉಪಮಹಾಪೌರರಾದ ಸುಮಿತ್ರಾ ಜಾಧವ, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಿಷಿ ಆನಂದ, ಧನಸಿಂಗ್ ಮಹಾರಾಜ, ಮಹಾದೇವ ರಾಠೋಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ರಾಜಪಾಲ ಚವ್ಹಾಣ, ಕೇಸು ನಾಯಕ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಇದ್ದರು.

ಭವ್ಯ ಮೆರವಣಿಗೆ :
ಬೆಳಿಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಿಂದ ಸಂತ ಶ್ರೀ ಸೇವಾಲಾಲ್ ಅವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಭವ್ಯ ಮೆರವಣಿಗೆಯು ನಗರದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ. ಬಿ.ಆರ್ ಅಂಬೇಡ್ಕರ ವೃತ್ತ ಹಾಗೂ ಕನಕದಾಸ ವೃತ್ತದ ಮೂಲಕ ಸಾಗಿ ನಗರದ ಕಂದಗಲ್ ಶ್ರೀ ಹನುಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.

Share this