ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 22:
ಪಕ್ಷ ನಿಷ್ಠೆ ಬದಿಗೊತ್ತಿ ವ್ಯಕ್ತಿನಿಷ್ಠೆ ತೋರಿ ಭಾರತೀಯ ಜನತಾ ಪಕ್ಷ ತೊರೆದಿರುವ ಶಂಕರ ಹೂಗಾರ ಅವರಿಂದ ಬಿಜೆಪಿ ಪಾಠ ಕಲಿಯಬೇಕಿಲ್ಲ. ನಮ್ಮ ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ನಿಮಗಿಲ್ಲ, ಪಕ್ಷದಲ್ಲಿ ಯಾವ ಗೊಂದಲಗಳೂ ಇಲ್ಲ ಎಂದು ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಆನಂದ ಮುಚ್ಚಂಡಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಬಿಜೆಪಿಯಿಂದ ಹೊರಗೆ ಹೋಗಿರುವ ಶಂಕರ ಹೂಗಾರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಆನಂದ ಮುಚ್ಚಂಡಿ, ಭಾರತೀಯ ಜನತಾ ಪಕ್ಷ ದೇಶಾಭಿಮಾನವನ್ನೇ ಉಸಿರಾಗಿಸಿಕೊಂಡ ಪಕ್ಷ, ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷ ನಿಷ್ಠೆಯೇ ಇಲ್ಲಿ ಪ್ರಧಾನ. ಇದೇ ನಮ್ಮ ಪಕ್ಷದ ಸಿದ್ಧಾಂತ, ಆದರೆ ಪಕ್ಷ ನಿಮಗೂ ದೊಡ್ಡ ಜವಾಬ್ದಾರಿ ನೀಡಿತ್ತು. ಆದರೆ ಪಕ್ಷ ನಿಷ್ಠೆ ತೋರಬೇಕಾದ ನೀವು ವ್ಯಕ್ತಿ ನಿಷ್ಠೆ ತೋರಿ ಕಣ್ಣೀರು ಸುರಿಸಿ ಪಕ್ಷ ಬಿಟ್ಟಿದ್ದು ಮರೆತಂತಿದೆ. ಅಷ್ಟಕ್ಕೂ ಪಕ್ಷ ನಿಮ್ಮನ್ನೂ ತೆಗೆದುಹಾಕಿಲ್ಲ. ನೀವೇ ಪಕ್ಷ ನಿಷ್ಠೆ ಮರೆತು ವ್ಯಕ್ತಿ ನಿಷ್ಠೆ ಜಪಿಸಿ ಹೋಗಿದ್ದಿರಿ. ಈಗ ನಮ್ಮ ಪಕ್ಷದ ಬಗ್ಗೆ ಮಾತನಾಡುವ ಅವಶ್ಯಕತೆ ಏನಿದೆ? ವಿಜಯಪುರ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಅವರ ಅರ್ಹತೆ, ಅನುಭವ ಆಧರಿಸಿಯೇ ಪಕ್ಷ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದೆ. ನಮ್ಮ ಪಕ್ಷದಲ್ಲಿ ಯಾವ ಗೊಂದಲಗಳೂ ಇಲ್ಲ. ಯಾರನ್ನೋ ಮೆಚ್ಚಿಸಲು ವಿನಾಕಾರಣ ಟೀಕೆ ಮಾಡಲು ಹೋಗಬೇಡಿ. ಬಿಜೆಪಿ ರಾಷ್ಟ್ರದಲ್ಲಿ, ರಾಜ್ಯದಲ್ಲಿ ಹಾಗೂ ವಿಜಯಪುರ ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದೆ. ಪಕ್ಷಗಳಲ್ಲಿ ಯಾವ ಗೊಂದಲವಿಲ್ಲ. ನಮ್ಮ ಪಕ್ಷ ಆಂತರಿಕ ವಿಷಯಗಳ ಬಗ್ಗೆ ಚಿಂತನೆ ಮಾಡುವ ಅಗತ್ಯವಿಲ್ಲ. ಪಕ್ಷದ ಬಗ್ಗೆ ಚಿಂತನೆ ಮಾಡಲು ದೊಡ್ಡ ದೊಡ್ಡ ನಾಯಕ ಸಮೂಹವೇ ನಮ್ಮಲ್ಲಿದೆ. ನಮ್ಮ ಪಕ್ಷ ಬಿಟ್ಟು ಹೋಗಿರುವ ನಿಮ್ಮಿಂದ ನಾವು ಪಕ್ಷ ನಿಷ್ಠೆಯ ಪಾಠ ಕಲಿಯುವ ಅಗತ್ಯತೆ ಇಲ್ಲ ಎಂದು ಅವರು ಹೇಳಿದ್ದಾರೆ.
ಹೂಗಾರಂತಹ ವ್ಯಕ್ತಿಯಿಂದ ಬಿಜೆಪಿ ಪಾಠ ಕಲಿಯಬೇಕಿಲ್ಲ: ಆನಂದ ಮುಚ್ಚಂಡಿ


