ಸಪ್ತಸಾಗರ ವಾರ್ತೆ, ಬಾಗಲಕೋಟೆ, ಆ. 10:
ಸಹಕಾರ ವಲಯವು ನಮ್ಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿಯೇ ಒಂದು ಅಮೂಲ್ಯ ಕೊಂಡಿಯಾಗಿದೆ. ಜನತೆಗೆ ಸಾಲ, ಉಳಿತಾಯ, ವಿಮೆ, ಕೌಟುಂಬಿಕ ಬೆಂಬಲ ಇವೆಲ್ಲವನ್ನೂ ಸಮರ್ಥವಾಗಿ ನೀಡುತ್ತಿರುವುದು ಸಹಕಾರ ಸಂಘಗಳ ಮಹತ್ವವನ್ನು ಪ್ರತಿಪಾದಿಸುತ್ತದೆ. ಈ ಹಿನ್ನೆಲೆಯಲ್ಲಿ, ಸೌಹಾರ್ದ ಸಹಕಾರ ಸಂಘಗಳು ನಂಬಿಕೆ ಮತ್ತು ಯಶಸ್ಸಿನ ನಿದರ್ಶನವಾಗಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ್ ಹೇಳಿದರು.
ನವನಗರದ ಸೆಕ್ಟರ್ ನಂ.25ರಲ್ಲಿ ನೂತನ ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಬಾಗಲಕೋಟೆ ಇದರ ಉದ್ಘಾಟನಾ ಸಮಾರಂಭ ಹಾಗೂ 18ನೇ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಇನ್ನೂ ಕೆಲವೇ ವರ್ಷಗಳಲ್ಲಿ ಹೆಮ್ಮರವಾಗಿ ಬೆಳೆದು ನಿಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
18 ವರ್ಷಗಳ ಹಿಂದೆ ಸ್ಥಾಪಿತವಾದ ನಮ್ಮ ಎಸ್ಆರ್ ಪಾಟೀಲ್ ಸಮೂಹ ಸಂಸ್ಥೆಗಳಲ್ಲಿ ಒಂದಾದ ಬಾಪೂಜಿ ಸೌಹಾರ್ದ ಸಹಕಾರಿಯು ಕರ್ನಾಟಕ ರಾಜ್ಯ ಇಂದು ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶೇಷವಾದ ಪ್ರಗತಿಯನ್ನು ಸಾಧಿಸಿ ಕೇಂದ್ರ ಸರ್ಕಾರ ನವದೆಹಲಿ ಇವರಿಂದ ಅನುಮತಿ ಪಡೆದು ತನ್ನ ಕಾರ್ಯವ್ಯಾಪ್ತಿಯನ್ನು ದೇಶದ ಇತರ ರಾಜ್ಯಗಳಿಗೆ ವಿಸ್ತರಿಸಿ ನೂತನವಾಗಿ ಬಾಪೂಜಿ ಮಲ್ಟಿ ಸ್ಟೇಟ್ ಕ್ರೆಡಿಟ್ ಕೋ ಆಪರೇಟಿವ್ ಸಂಸ್ಥೆಯಾಗಿ ಯಶಸ್ವಿ ದಾಪುಗಾಲನ್ನು ಇರಿಸಿದೆ ಎಂದರು.
ಈ ವೇಳೆಯಲ್ಲಿ ಕೇಂದ್ರ ಮಾಜಿ ಸಚಿವ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಮಾಜಿ ಸಚಿವ ಹಾಗೂ ಶಾಸಕ ಎಚ್.ವೈ. ಮೇಟಿ ಹಾಗೂ ಮಾಜಿ ಸಚಿವ ಹಾಗೂ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಅಜಯಕುಮಾರ ಸರನಾಯಕ ಮತ್ತು ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಗ್ರಾಹಕರು, ಠೇವಣಿದಾರರು, ಸಕಲ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಸಹಕಾರ ವಲಯವು ಆರ್ಥಿಕ ವ್ಯವಸ್ಥೆಯ ಅಮೂಲ್ಯ ಕೊಂಡಿ: ಎಸ್.ಆರ್. ಪಾಟೀಲ
