ಸಪ್ತಸಾಗರ ವಾರ್ತೆ ವಿಜಯಪುರ, ಜು.21:
ಶಾಸಕ ವಿಜಯಾನಂದ ಕಾಶಪ್ಪನವರಿಗೆ ಅಂತ್ಯ ಕಾಲ ಬಂದಿದೆ. ಆರುವ ಮುನ್ನ ದೀಪ ಉರಿಯುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಿಡಿ ಕಾರಿದ್ದಾರೆ.
ವಿಜಯಾನಂದ ಕಾಶಪ್ಪನವರ ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿರುವ ವಿಚಾರವಾಗಿ ಸೋಮವಾರ ಸುದ್ದಿಗಾರರ ಜೊತೆಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿ ಕಾಶಪ್ಪನವರ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು.
ಇಡೀ ಸಮಾಜ ಕಾಶಪ್ಪನವರ ಬೆನ್ನಿಗಿಲ್ಲ. ಕಾಶಪ್ಪನವರ ಪೂಜ್ಯರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಕೂಡಲಸಂಗಮ ಸ್ವಾಮೀಜಿ ಸಮಾಜದ ಪರ ಹಾಗೂ 2ಎ ಮೀಸಲಾತಿಗಾಗಿ ಕೆಲಸ ಮಾಡುತ್ತಿದ್ದಾರೆ. ಬಸವಜಯಮೃತ್ಯುಂಜಯ ಸ್ವಾಮೀಜಿ ಕೇವಲ ಯತ್ನಾಳ ಪರ ಮಾತನಾಡುತ್ತಾರೆ ಎಂಬ ಕಾಶಪ್ಪನವರ ಆರೋಪಕ್ಕೆ ಕೆಂಮಂಡಲವಾದ ಯತ್ನಾಳ್,
ನಾನು ಯಾವುದೇ ಸ್ವಾಮೀಜಿ ಜಗದ್ಗರುಗಳ ಬಳಿ ಕೆಲಸ ತೆಗೆದುಕೊಂಡಿಲ್ಲ.
ನಾನು ಬಹಳ ಸ್ವಾಮೀಜಿಗಳ ಕಾಲು ಮುಗಿಯಲ್ಲ. ಸಿದ್ದೇಶ್ವರ ಸ್ವಾಮೀಜಿ ಹಾಗೂ ಕೆಲ ಸ್ವಾಮೀಜಿಗಳ ಕಾಲುಗಳನ್ನಷ್ಟೇ ಮುಗಿಯುತ್ತೇನೆ ಎಂದು ಹೇಳಿದರು.
ಬಸವಣ್ಣನವರು ಹಿಂದೂ ಹಾಗೂ ಸನಾತನ ಧರ್ಮಕ್ಕೆ ಬೈಯ್ದಿಲ್ಲ.
ಕಂದಾಚಾರ, ಅನಾಚಾರ ವಿರುದ್ದ ಬಸವಣ್ಣನವರು ಕೆಲಸ ಮಾಡಿದ್ದಾರೆ.
ಬ್ರಾಹ್ಮಣ ಸಮುದಾಯದ ಬಸವಣ್ಣ ಸರಳ ಧರ್ಮ ಕೊಡಲು ಬದಲಾವಣೆ ಮಾಡಿದ್ದಾರೆ ಎಂದರು.
ಬಸವಣ್ಣ ಸಮಾಜ ಸುಧಾರಕ. ಅವರ ಹೆಸರನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲಸಂಗಮ ಸ್ವಾಮೀಜಿ 2ಡಿ ಮೀಸಲಾತಿ ಕೊಡಿಸಿದ್ದಾರೆ.
2ಡಿ ಮೀಸಲಾತಿಯಲ್ಲಿ ಬರೀ ಪಂಚಮಸಾಲಿಗಳಿಲ್ಲ.
ಎಲ್ಲಾ ಲಿಂಗಾಯತರು, ಜೈನರು, ಕ್ರಿಶ್ಚಿಯನ್, ಮರಾಠಾ, ವೈಷ್ಣವರು ಇದ್ದಾರೆ. ಅಲ್ಪಸಂಖ್ಯಾತರು ಅಂದರೆ ಬರೀ ಮುಸ್ಲಿಂಮರಲ್ಲಾ. ಇತರೆ ಸಮಾಜದವರೂ ಇದ್ದಾರೆಂದು ಯತ್ನಾಳ ಹೇಳಿದರು.
2ಡಿ ಮೀಸಲಾತಿ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ಅಲ್ಲಿ ತೀರ್ಪು ಬಂದ ಬಳಿಕ ಸರ್ಕಾರ ಮೀಸಲಾತಿ ನೀಡಲೇಬೇಕು ಎಂದು ತಿಳಿಸಿದರು.
ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ ಅವರನ್ನು ನಾನು ಒಪ್ಪುವುದೇ ಇಲ್ಲ ಎಂದರು.
ನನ್ನ ಕೆಲಸ ನೋಡಿ ಇನ್ನು ಎರಡು ತಿಂಗಳಲ್ಲಿ ನನ್ನನ್ನು ಮತ್ತೆ ಬಿಜೆಪಿಗೆ ವಾಪಸ್ ಕರೆದುಕೊಳ್ಳುತ್ತಾರೆ ಎಂದು ಯತ್ನಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಕಾಶಪ್ಪನವರಿಗೆ ಅಂತ್ಯಕಾಲ ಬಂದಿದೆ- ಯತ್ನಾಳ ಕಿಡಿ
