ಸಪ್ತಸಾಗರ ವಾರ್ತೆ,ವಿಜಯಪುರ, ಆ. 12 : ಇದು ವಿಜಯಪುರ ನಗರದ ಮನಗೂಳಿ- ಬಸವನ ಬಾಗೇವಾಡಿ ರಸ್ತೆ ಪಕ್ಕದ ಇಬ್ರಾಹಿಂಪುರ ಬಡಾವಣೆಯಲ್ಲಿರುವ ಪ್ರಾಚೀನವಾದ ಐತಿಹಾಸಿಕ ಹಿರೇಬಾವಿ. ಇದನ್ನು ವಿಜಯಪುರದ ಎರಡನೇ ‘ತಾಜ್ ಬಾವಡಿ’ ಎಂದರೂ ತಪ್ಪಾಗಲಿಕ್ಕಿಲ್ಲ.
ಇಬ್ರಾಹಿಂಪುರದ ಹಿರೇಬಾವಿ ನೋಡಿದ ಯಾರಿಗೇ ಆಗಲಿ ಥಟ್ಟನೆ ‘ತಾಜ್ ಬಾವಡಿ’ ಅವರ ನೆನಪಿಗೆ ಬರದೇ ಇರದು.
ತಾಜ್ ಬಾವಡಿಯಂತೆಯೇ ವಿಶಾಲವಾಗಿದೆ ಆದಿಲಶಾಹಿ ಕಾಲದ ಈ ಹಿರೇಬಾವಿ. ನೂರಕ್ಕೂ ಅಧಿಕ ಕಟ್ಟೆಗಳು, ಹಲವು ಕಮಾನುಗಳಿರುವ ಅದ್ಭುತ, ಸುಸಜ್ಜಿತ ಹಾಗೂ ಅತ್ಯಾಕರ್ಷಕ ಕಟ್ಟಡವನ್ನು ಈ ಹಿರೇಬಾವಿ ಹೊಂದಿದೆ.
ಈ ಬಾವಿ ಪಶ್ಚಿಮಾಭಿಮುಖವಾಗಿದ್ದು, ಪಶ್ಚಿಮ ದಡದಲ್ಲಿ ನಿಂತು ಪೂರ್ವಕ್ಕೆ ಕಲ್ಲು ಎಸೆದರೆ ಆ ಕಲ್ಲು ಆಚೆ ದಾಟುವುದೇ ಇಲ್ಲ. ಸಂಪೂರ್ಣ ಕಲ್ಲಿನಲ್ಲಿಯೇ ಕಟ್ಟಿರುವ ಹಿರೇಬಾವಿಯ ಕಟ್ಟಡ ಆಗಿನ ಶಿಲ್ಪಕಲೆಗೆ ಈಗಲೂ ಸಾಕ್ಷಿಯಾಗಿದೆ.
ಬೇಸಿಗೆಯಲ್ಲೂ ಬತ್ತದ ಇಂಥದೊಂದು ಭವ್ಯವಾದ, ವಿಶಾಲವಾದ, ಅಪಾರ ಜಲರಾಶಿ ತುಂಬಿ ಕೊಂಡಿರುವ ಐತಿಹಾಸಿಕವಾದ ಸುಂದರ ಬಾವಿಯೊಂದು ಇಬ್ರಾಹಿಂಪುರದಲ್ಲಿದೆ ಎನ್ನುವುದೇ ವಿಜಯಪುರ ಜಿಲ್ಲೆಯಲ್ಲಿರುವ ಅನೇಕರಿಗೆ ಗೊತ್ತೇ ಇಲ್ಲ.
ವಿಜಯಪುರ ಜಿಲ್ಲೆಯವರೇ ಆದ ರಾಜ್ಯದ ಈಗಿನ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವ ಡಾ. ಎಂ.ಬಿ.ಪಾಟೀಲ ಅವರು ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗ ನೆಲಮಟ್ಟದ ಎತ್ತರಕ್ಕಿದ್ದ ಈ ಐತಿಹಾಸಿಕ ಬಾವಿಯನ್ನು ಪುನರುಜ್ಜೀವನಗೊಳಿಸಿ ಸುತ್ತಲೂ ರಕ್ಷಣಾ ಗೋಡೆ ನಿರ್ಮಿಸಿ ಎಲ್ಲ ಕಡೆಗೂ ಗ್ರಿಲ್ ಹಾಗೂ ಕಬ್ಬಿಣದ ಗೇಟ್ ಅಳವಡಿಸುವ ಮೂಲಕ ಐತಿಹಾಸಿಕ ಹಿರೇಬಾವಿಯ ಸಂರಕ್ಷಣೆಗೆ ವಿಶೇಷ ಕೊಡುಗೆ ನೀಡಿದ್ದಾರೆ.
ಮಾತ್ರವಲ್ಲ ಇದೇ ನೀರನ್ನು ಬಳಸಿ ಬಾವಿಯ ಸಮೀಪದಲ್ಲಿಯೇ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಂಪೌಂಡ್ ಗೋಡೆಗೆ ಹೊಂದಿಸಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿ ಈ ಭಾಗದ ಜನತೆಗೆ ಕುಡಿಯುವ ನೀರಿನ ಅನುಕೂಲ ಮಾಡಿಕೊಟ್ಟಿದ್ದು ಅತ್ಯಂತ ಶ್ಲ್ಯಾಘನೀಯ ಕಾರ್ಯವೇ ಸರಿ.
ವಿಜಯಪುರದ ಐತಿಹಾಸಿಕ ಬೇಗಂ ತಲಾಬ್ ಗೂ ಇಬ್ರಾಹಿಂಪುರದ ಹಿರೇಬಾವಿಗೂ ಲಿಂಕ್ ಇದೆ ಎಂದು ಗ್ರಾಮದ ಹಿರಿಯರು ಹೇಳುವುದುಂಟು.
ಹಿರೇಬಾವಿಯ ಕಟ್ಟಡದಲ್ಲಿ
ನಾಲ್ಕೂ ದಿಕ್ಕಿಗೂ ಮೇಲಿನಿಂದ ಕೆಳಬಾಗದವರೆಗೆ ದೊಡ್ಡ ದೊಡ್ಡ ಕಮಾನುಗಳಿವೆ. ಎಂಥ ಬೇಸಿಗೆಯಲ್ಲೂ ಈ ಬಾವಿ ಬತ್ತಿಲ್ಲ ಎಂದು ಸ್ಥಳೀಯರು ಹೇಳುವುದುಂಟು.
ಹಿಂದೊಮ್ಮೆ ಬೇಸಿಗೆಯಲ್ಲಿ ವಿಜಯಪುರ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ಇದೇ ಹಿರೇಬಾವಿಯ ನೀರನ್ನೇ ಟ್ಯಾಂಕರ್ ಮೂಲಕ ಪೂರೈಸಲಾಗಿತ್ತು. ಅಷ್ಟೇ ಏಕೆ ಹಿಂದೆ ಇಬ್ರಾಹಿಂಪೂರಕ್ಕೂ ಇದೇ ಬಾವಿಯಿಂದಲೇ ಪ್ರತಿನಿತ್ಯ ನೀರು ಸರಬರಾಜಾಗುತ್ತಿತ್ತು. ಈಗ 24*7 ನಳದ ಸಂಪರ್ಕ ಕಲ್ಪಿಸಿ ಹೊಳೆ ನೀರು ಬರುತ್ತಿರುವುದರಿಂದ ಹಿರೇಬಾವಿಯಿಂದ ಈಗ ನೀರಿ ಸರಬರಾಜಾಗುವುದು ನಿಂತು ಹೋಗಿದೆ.
ಸುಮಾರು ನೂರಡಿಗೂ ಹೆಚ್ಚು ಆಳವಿರುವ ಈ ಐತಿಹಾಸಿಕ ಹಿರೇಬಾವಿಯಲ್ಲಿ ಇತ್ತೀಚಿಗೆ ನಗರದಲ್ಲಿ ಎರಡ್ಮೂರು ದಿನ ಗಳವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ತುಂಬಾ ನೀರು ಸಂಗ್ರಹವಾಗಿ ಒಳಗಡೆ ಕಾಣುವ ಎಲ್ಲ ಕಮಾನುಗಳು ಮುಚ್ಚಿಹೋಗಿವೆ. ಆರೇಳು ಅಡಿಯಷ್ಟು ಮಾತ್ರ ಬಾಕಿ ಇದೆ. ಹಿಂದೆಂದೂ ಇಷ್ಟೊಂದು ಪ್ರಮಾಣದಲ್ಲಿ ನೀರು ಬಾವಿಗೆ ಬಂದಿರಲಿಲ್ಲ. ಇದೇ ಮೊದಲ ಸಲ ನಾವು ಹಿರೇಬಾವಿಯಲ್ಲಿ ಸಾಕಷ್ಟು ನೀರು ತುಂಬಿರುವುದನ್ನು ನೋಡುತ್ತಿದ್ದೇವೆ ಎಂದು ಅಲ್ಲಿನ ನಿವಾಸಿಗಳು ಆಶ್ಚರ್ಯದಿಂದ ಹೇಳುತ್ತಾರೆ.
ಐತಿಹಾಸಿಕ ಹಿರಿಬಾವಿ ಈಗ ಅಪಾರ ಜಲರಾಶಿ ತುಂಬಿ ನಳನಳಿಸುತ್ತಿದ್ದು, ಈ ನಯನ ಮನೋಹರ ದೃಶ್ಯವನ್ನು ನೋಡುವುದೇ ಮನಸ್ಸಿಗೆ ಒಂದು ಆನಂದ. ನೀವೂ ಒಮ್ಮೆ ಸುಂದರವಾದ ಈ ಐತಿಹಾಸಿಕ ಹಿರೇಬಾವಿಯನ್ನು ನೋಡಲು ಬನ್ನಿ.
ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ
ಇಬ್ರಾಹಿಂಪುರ ಹಿರೇಬಾವಿಯ ಪಕ್ಕದಲ್ಲಿ ಕೆಲ ವರ್ಷಗಳ ಹಿಂದೆ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಹಲವು ತಿಂಗಳುಗಳೇ ಆಗಿದ್ದು, ಜನತೆಗೆ ಶುದ್ಧ ನೀರು ಬರದೇ ಈ ಘಟಕ ಈಗ ಇದ್ದೂ ಇಲ್ಲದಂತಾಗಿದೆ.
ಈ ಶುದ್ಧ ನೀರಿನ ಘಟಕಕ್ಕೆ ಹಿರೇಬಾವಿಯಿಂದಲೇ ನೀರಿನ ಸಂಪರ್ಕ ಕಲ್ಪಿಸಲಾಗಿದ್ದು, ಹಿರಿಬಾವಿಯಲ್ಲಿ ಸಾಕಷ್ಟು ನೀರಿದ್ದರೂ ಸಹ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಸ್ಥಬ್ದವಾಗಿದ್ದರಿಂದ ಜನತೆಗೆ ಕುಡಿಯಲು ಶುದ್ಧ ನೀರು ದೊರೆಯದಂತಾಗಿದೆ.
ಶುದ್ಧ ಕುಡಿಯುವ ನೀರು ಒಯ್ಯಲು ದಿನವೂ ಈ ಘಟಕಕ್ಕೆ ಬಂದು ನೀರು ಸಿಗದೇ ಬಂದ ದಾರಿಗೆ ಸುಂಕವಿಲ್ವಾ ಎಂಬತೆ ಹಾಗೇ ಬರೀ ಕ್ಪಯಾನುಗಳೊಂದಿಗೆ ವಾಪಸ್ಸು ಹೋಗುತ್ತಿದ್ದಾರೆ.
ಸಂಬಂಧಿಸಿದವರು ಕೂಡಲೇ ಇತ್ತ ಗಮನ ಹರಿಸಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ಥಿಗೊಳಿಸಿ ಕುಡಿಯಲು ಶುದ್ಧ ನೀರು ದೊರೆಯುವ ವ್ಯವಸ್ಥೆ ಮಾಡಬೇಕೆಂದು ಅಲ್ಲಿನ ನಾಗರಿಕರು ಆಗ್ರಹಪಡಿಸಿದ್ದಾರೆ. ಜನನ
ಸಂಬಧಿಸಿದವರು ನಾಗರಿಕರ ಸಮಸ್ಯೆಗೆ ಅದೆಷ್ಟು ಬೇಗ ಸ್ಪಂದಿಸುತ್ತಾರೋ ಎಂಬುದನ್ನು ಕಾದು ನೋಡಬೇಕು.