ಸಪ್ತಸಾಗರ ವಾರ್ತೆ, ವಿಜಯಪುರ, ಅ. 18: ತಾಲೂಕಿನ ನಾಗಠಾಣ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೀಪಾವಳಿ ಹಬ್ಬದ ನಿಮಿತ್ತ ಶ್ರೀ ಭೀರದೇವರ ಮತ್ತು ಪರಮಾನಂದ ದೇವರ ಜಾತ್ರಾ ಮಹೋತ್ಸವವು ಅ.19 ರಿಂದ 22 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಅ.19 ರಂದು ನೀರು ತುಂಬುವ ಹಬ್ಬ,ಈ ದಿನದಂದು ಹೂವಿನ ಹಚ್ಚಡ, ದೀವಟಿಗೆ ಆರತಿ ಕಾರ್ಯಕ್ರಮ ಇರುವದು.
ಅ. 20 ರಂದು ಬೆಳಿಗ್ಗೆ 8 ಗಂಟೆಗೆ 8 ಕಿಮೀ ಗುಡ್ಡಗಾಡು ಓಟದ ಸ್ಪರ್ಧೆ, ಶ್ರೀ ಅಕ್ಕಮಹಾದೇವಿ ಗುಡಿಯಿಂದ ಆರಂಭವಾಗುವದು. ಮುಂಜಾನೆ 9 ಕ್ಕೆ ಭೀರದೇವರ ಗುಡಿಯಲ್ಲಿ ಜೇವರ್ಗಿ ತಾಲೂಕಿನ ಕರ್ಜಗಿ ಗ್ರಾಮದ ಲಿಂಗರಾಯ ದೇವರ ಡೊಳ್ಳಿನ ಸಂಘ ಹಾಗೂ ಜತ್ತ ತಾಲೂಕಿನ ಭೌರಮ್ಮ ಕರಜಗಿ ಡೊಳ್ಳಿನ ಸಂಘದ ವತಿಯಿಂದ ಡೊಳ್ಳಿನ ಪದಗಳ ಹಾಡಿಕೆ ನಡೆಯುವದು. ಸಂಜೆ 6ಕ್ಕೆ ಕಗ್ಗೋಡ ದೇವರ ಗೂಳಪ್ಪ ಪೂಜಾರಿಯ ಪಲ್ಲಕ್ಕಿಗಳ ಆಗಮನವಾಗುವದು. ರಾತ್ರಿ ಸೊಲ್ಲಾಪುರ ತಂಡದಿಂದ ಚಿತ್ರ ವಿಚಿತ್ರ ಮದ್ದು ಸುಡುವದು ಹಾಗೂ ಡೊಳ್ಳಿನ ಪದಗಳ ಹಾಡಿಕೆ ಇರುವದು.
ಅ.21 ರಂದು ನಸುಕಿನ 3 ಗಂಟೆಗೆ ಗೂಗದಡ್ಡಿಯಿಂದ ಮಹಾಲಕ್ಷ್ಮಿ ಪಲ್ಲಕ್ಕಿ ಆಗಮನ. ನಂತರ 4 ಗಂಟೆಗೆ ಭೀರದೇವರ ಶೃಂಗಾರ ಚೌಕಿಯೊಂದಿಗೆ
ಭಕ್ತರ ಮನೆಗೆ ದರ್ಶನ ಕೊಡುತ್ತಾ, ಗಂಗೆ ಸೀತಾಳದಲ್ಲಿ ಪೂಜೆ ಮುಗಿಸಿ, ಅಲ್ಲಿ ಹೇಳಿಕೆ ಮುಗಿಸಿ, ಬಜಾರಕ್ಕೆ ಆಗಮನವಾಗಿ, ಅಲ್ಲಿ ಭಕ್ತರಿಗೆ ದರ್ಶನ ಕೊಟ್ಟು ನಂತರ ಗುಡಿಗೆ ಬರುವುದು. 3 ಗಂಟೆಗೆ ಶಾಲಾ ಆವರಣದಲ್ಲಿ ಭಾರ ಎತ್ತುವ ಸ್ಪರ್ಧೆ ಜರುಗಲಿದೆ. ಆ ಸ್ಪರ್ಧೆಯಲ್ಲಿ 207 ಕೆಜಿ ಗುಂಡು ಎತ್ತಿದವರಿಗೆ 1 ಕೆಜಿ ಬೆಳ್ಳಿಯ ಗದೆಯನ್ನು ವಿಶೇಷ ಬಹುಮಾನವಾಗಿ ಭೀರದೇವರ ಚೌಕಿ ಪೂಜಾರಿಗಳಾದ ಶ್ರೀ ಗೂಳಪ್ಪ ಪೂಜೇರಿ ಅವರು ನೀಡುವರು. ಸಂಜೆ 7ಕ್ಕೆ ಪರಮಾನಂದ ದೇವರ ಗುಡಿಯಲ್ಲಿ ಗೂಗದಡ್ಡಿಯ ಲಾಯಮ್ಮದೇವಿ ಗಾಯನ ಸಂಘ ಮತ್ತು ಕುರಗೋಟದ ಅಮೋಘಸಿದ್ದೇಶ್ವರ ಗಾಯನ ಸಂಘದ ವತಿಯಿಂದ ಡೊಳ್ಳಿನ ಪದಗಳು ಜರುಗುವವು.
ಅ. 22 ರಂದು ಬೆಳಿಗ್ಗೆ 4 ಗಂಟೆಗೆ ಶ್ರೀ ಪರಮಾನಂದ ದೇವರ ಶೃಂಗಾರ ಚೌಕಿಯೊಂದಿಗೆ ಗೂಗದಡ್ಡಿಯ ಲಾಯಮ್ಮದೇವಿ ಸಂಘದ ಡೊಳ್ಳಿನ ವಾಲಗ,ಕರಡಿ ಮಜಲು ವಾದ್ಯ ಮೇಳದೊಂದಿಗೆ ಭಕ್ತರ ಮನೆಗೆ ಭೇಟಿ ನೀಡುತ್ತಾ, ಗಂಗೆ ಸೀತಾಳದಲ್ಲಿ ಪೂಜೆ ಸಲ್ಲಿಸಿ, 7 ಗಂಟೆಗೆ ಮುತ್ತಪ್ಪದೇವರ ಗುಡಿಯ ಮುಂದೆ ಮಳೆ-ಬೆಳೆ ಕುರಿತು ಹೇಳಿಕೆ ಹೇಳಿ, ಅಲ್ಲಿಂದ ಬಜಾರಕ್ಕೆ ಆಗಮನವಾಗಿ ಭಕ್ತರಿಗೆ ದರ್ಶನ ನೀಡಿ, ದೇವಸ್ಥಾನಕ್ಕೆ ಬರುವದು. ಸಂಜೆ 4 ಗಂಟೆಗೆ 18 ರಿಂದ 40 ವಯಸ್ಸಿನವರಿಗೆ ಜಂಗಿ ಕುಸ್ತಿ ಸ್ಪರ್ಧೆ ನಡೆಯಲಿದೆ. ರಾತ್ರಿ 9 ಗಂಟೆಗೆ ಶ್ರೀ ಪುಟ್ಟರಾಜ ಕಲಾ ನಾಟ್ಯ ಸಂಘ ಜಮಖಂಡಿ ವತಿಯಿಂದ ‘ದೇಸಾಯಿ ದರ್ಬಾರ್’ ಎಂಬ ಸಾಮಾಜಿಕ ನಾಟಕ ನಡೆಯಲಿದೆ.
ಈ ಜಾತ್ರಾ ಮಹೋತ್ಸವದಲ್ಲಿ ನಿರಂತರ ಅನ್ನ ಪ್ರಸಾದ ವ್ಯವಸ್ಥೆ ಇದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪುನೀತರಾಗಬೇಕೆಂದು ಜಾತ್ರಾ ಕಮೀಟಿಯ ಅಧ್ಯಕ್ಷ ಪ್ರಭುಲಿಂಗ ಹಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಗಠಾಣದಲ್ಲಿ ಶ್ರೀ ಭೀರದೇವರ, ಶ್ರೀ ಪರಮಾನಂದ ದೇವರ ಜಾತ್ರಾ ಮಹೋತ್ಸವ


