ಸಪ್ತಸಾಗರ ವಾರ್ತೆ,ವಿಜಯಪುರ, ಅ.2: ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ನಗರದ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಶ್ರದ್ಧಾಭಕ್ತಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ ಮೀನಾ, ಉಪವಿಭಾಗಾಧಿಕಾರಿ ಜುಫಿಶಾನ್ ಹಕ್ ಸೇರಿದಂತೆ ಗಣ್ಯರು ಚರಕ ನೂಲು ನೇಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.
ಗಾಯಕ ವೀರೇಶ ವಾಲಿ ಹಾಗೂ ತಂಡದವರು ವಂದೇ ಮಾತರಂ, ನಾಡಗೀತೆ ಹಾಗೂ ಗಾಂಧೀಜಿಯವರಿಗೆ ಪ್ರಿಯವಾದ ‘ರಘುಪತಿ ರಾಘವ ರಾಜಾರಾಮ್’ ಮತ್ತು ‘ವೈಷ್ಣವ ಜನತೋ’ ಭಜನೆಗಳನ್ನು ಪ್ರಸ್ತುತಪಡಿಸಿದರು.
ಸರ್ವಧರ್ಮ ಪ್ರಾರ್ಥನೆ
ಭಾವೈಕ್ಯತೆ, ಶಾಂತಿ ಹಾಗೂ ಸರ್ವಧರ್ಮ ಸಮಭಾವ ಸಾರುವ ಉದ್ದೇಶದಿಂದ ಸರ್ವಧರ್ಮ ಪ್ರಾರ್ಥನೆ ನಡೆಯಿತು. ರಘೋತ್ತಮ ಅರ್ಜುಣಗಿ ಅವರು ಭಗವದ್ಗೀತೆ ಪಠಣ, ಹಜರತ್ ಸೂಫಿ ಡಾ. ಹಯಾತ್ ರೋಜಿನದಾರ್ ಸಾಹೇಬರು ಕುರಾನ್ ಪಠಣ, ಸಿಯೋನ್ ಮಿನಿಸ್ಟ್ರೀಸ್ನ ರೆವರೆಂಡ್ ಡಾ. ಎಸ್. ವಿಲಾಸ ಬೈಬಲ್ ಪಠಣ, ಅಭಯ ಪೋರ್ವಾಲ್ ಜೈನ ಧರ್ಮದ ಪ್ರಾರ್ಥನೆ ಹಾಗೂ ಬುದ್ಧ ವಿಹಾರದ ನಿರ್ಮಾಣ ಸಮಿತಿಯ ಪ್ರತಾಪ ಚಿಕ್ಕಲಕಿ ಬೌದ್ಧ ಧರ್ಮದ ಪ್ರಾರ್ಥನೆ ನೆರವೇರಿಸಿದರು.
ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧೀಜಿ ಜಯಂತಿ ಅಂಗವಾಗಿ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಡಾ. ಮಾಧವ ಎಚ್. ಗುಡಿ ಅವರು ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಗಾಂಧೀಜಿಯವರ ಅಹಿಂಸೆ, ಸತ್ಯಾಗ್ರಹದ ತತ್ವಗಳು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳತೆ ಮತ್ತು ‘ಜೈ ಜವಾನ್, ಜೈ ಕಿಸಾನ್’ ಮಂತ್ರಗಳು ಇಂದಿನ ಯುವಜನತೆಗೆ ದಾರಿದೀಪವಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


