ಕನ್ನಡ ಭಾಷೆ ನಮ್ಮ ಸಂಸ್ಕೃತಿ, ಸಂಸ್ಕಾರದ ಪ್ರತೀಕ – ವಿಠ್ಠಲ ಕಟಕದೊಂಡ

ಸಪ್ತಸಾಗರ ವಾರ್ತೆ, ವಿಜಯಪುರ, ಜ.21: ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಕನ್ನಡದ ಮೊಟ್ಟಮೊದಲ ಶಾಸನದಿಂದ ಹಿಡಿದು ಇಂದು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದು, ಅಷ್ಟ ದಿಗ್ಗಜರು ಜ್ಞಾನಪೀಠ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕನ್ನಡದ ಅಭಿಮಾನ ಮೂಡಿಸಿದ ಪಾವನ ಪುಣ್ಯಭೂಮಿ ನಮ್ಮದು. ಕನ್ನಡ ನಮ್ಮ ತಾಯಿಭಾಷೆ, ಮಾತೃಭಾಷೆ, ನುಡಿ ಭಾಷೆಯಾಗಿ ನಾವೆಲ್ಲರೂ ಕನ್ನಡ ಭಾಷೆಯನ್ನು ಅಭಿಮಾನದಿಂದ ಪ್ರೀತಿಸಿ ಆರಾಧಿಸೋಣ. ಕನ್ನಡ ಭಾಷೆ ನಮ್ಮೆಲ್ಲರ ಸಂಸ್ಕೃತಿ ಸಂಸ್ಕಾರದ ಪ್ರತೀಕ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಅಭಿಪ್ರಾಯಪಟ್ಟರು.
ಮಂಗಳವಾರ ಹಿಟ್ಟಿನಹಳ್ಳಿಯ ಶ್ರೀ ಶಿವಮೂರ್ತಿ ಸ್ವಾಮಿ ಚರಂತಿಮಠ ಪ್ರೌಢಶಾಲೆಯ ಆವರಣದಲ್ಲಿ ಜರುಗಿದ ವಿಜಯಪುರ ತಾಲೂಕಾ ೮ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಹಳಗನ್ನಡ, ನಡುಗನ್ನಡ ,ಹೊಸಗನ್ನಡದ ಮೂಲಕ ವಚನ ಸಾಹಿತ್ಯ, ದಾಸ ಸಾಹಿತ್ಯದಲ್ಲಿ ಕ್ರಮವಾಗಿ ಅಣ್ಣ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭುಗಳು ಹಾಗೂ ಪುರಂದರದಾಸರು, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಮಹಾತ್ಮರ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಾಯಿ ಕನ್ನಡಾಂಬೆಯ ಕೀರ್ತಿಯನ್ನು ಹೆಚ್ಚಿಸೋಣ ಎಂದರು.
ಉದ್ಘಾಟನಾ ಕಾರ್ಯಕ್ರಮದ ಪಾವನ ವಹಿಸಿದ್ದ ನಿಡಸೋಸಿ ಮಠದ ಪೂಜ್ಯ ಜಗದ್ಗುರು ಶ್ರೀ ದುರದುಂಡೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, “ಆಚಾರಕ್ಕರಸನಾಗು ನೀತಿಗೆ ಪ್ರಭುವಾಗು, ಮಾತಿನಲಿ ಚೂಡಾಮಣಿಯಾಗು ನಾನು ಕಂದ ಜ್ಯೋತಿಯೇ ಆಗು ಜಗಕೆಲ್ಲ” ಎಂಬಂತೆ ಮಕ್ಕಳಲ್ಲಿ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯ ಪಾಲಕರು, ಶಿಕ್ಷಕರು, ಸಮಾಜ ಮಾಡಿ ಕನ್ನಡಾಂಬೆಯ ಋಣ ತೀರಿಸೋಣ ಎಂದರು.
ಕನ್ನಡ ಆಡಳಿತ ಭಾಷೆಯಾಗಬೇಕು. ಶಿಕ್ಷಣ ಮಾಧ್ಯಮವಾಗುವಲ್ಲಿ ಇಂದು ನಾವೆಲ್ಲ ಶ್ರಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಹೊನ್ನಳ್ಳಿಯ ಶಿವಶರಣೆ ನಿಂಬೆಕ್ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಡಿ. ಕುಮಾನಿ ಮಾತನಾಡಿ, ಅಕ್ಷರ ಜಾತ್ರೆ ಬಹು ವಿಜೃಂಭಣೆಯಿಂದ ಜರುಗಿದ್ದು, ತುಂಬಾ ಸಂತೋಷದ ಸಂಗತಿ. “ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಸಂದೇಶ ನೀಡಿದ ಅವರು ಕನ್ನಡವೇ ನಮ್ಮ ಉಸಿರಾಗಲಿ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಸೋಮಲಿಂಗ ಗೆಣ್ಣೂರ ಅವರು ಸರ್ವಾಧ್ಯಕ್ಷ ಭಾಷಣ ಮಾಡುತ್ತ, ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ. ನಿಮ್ಮ ಪಾದ ಸಾಕ್ಷಿ ಎನ್ನ ಮನ ಸಾಕ್ಷಿ ಕೂಡಲಸಂಗಮದೇವ ಎನಗಿದೇ ದಿವ್ಯ ಎಂದು ಮೊದಲಿಗೆ ಬಸವಣ್ಣನವರ ವಚನವನ್ನು ನೆನೆಯುತ್ತ, ಇಂಗಳೇಶ್ವರದ ಜೈನಕವಿ ಅಗ್ಗಳನು “ಚಂದ್ರಪ್ರಭಾ ಪುರಾಣ” ಎಂಬ ಧಾರ್ಮಿಕ ಕಾವ್ಯ ಕೃತಿಯನ್ನು ಹಾಗೂ ಮೊದಲ ವೀರಶೈವ ಕವಿ ಎನಿಸಿಕೊಂಡಿರುವ ಕೊಂಡಗೂಳಿಯ ಕೇಶಿರಾಜನು ಷಡಕ್ಷರ ಮಂತ್ರ ಮಹಿಮೆ ಎಂಬ ಗ್ರಂಥ ರಚಿಸಿದ್ದು ಇವು ವಿಜಯಪುರ ಜಿಲ್ಲೆಯ ಸಾಹಿತ್ಯದ ಕೀರ್ತಿಯನ್ನು ಹೆಚ್ಚಿಸಿರುವವು ಎಂದರು. ೧೨ನೇ ಶತಮಾನದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಸುಧಾರಣಾ ಆಂದೋಲನವಾಗಿ ಹೊರಹೊಮ್ಮಿದ ವಚನ ಸಾಹಿತ್ಯವು ಸಾಹಿತ್ಯ ಜಗತ್ತಿಗೆ ನೀಡಿದ ಅತಿ ಶ್ರೇಷ್ಠ ಕೊಡುಗೆಯಾಗಿದೆ. ಭಕ್ತಿ ಚಳುವಳಿಯ ಭಾಗವಾಗಿ ಆರಂಭವಾದ ವಚನ ಸಾಹಿತ್ಯವು ಅಸಮಾನತೆಯನ್ನು ಹೋಗಲಾಡಿಸಿ ಸಮಸಮಾಜದ ನಿರ್ಮಾಣ ಮಾಡಲು ಹಾಗೂ ಮೂಢನಂಬಿಕೆ, ಅಂಧ ಶೃದ್ಧೆಗಳನ್ನು ಕಿತ್ತೆಸೆದು ಕಾಯಕ ಸಿದ್ಧಾಂತ, ನೈತಿಕ ಜೀವನ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಿತು. ಪ್ರಜಾಪ್ರಭುತ್ವದ ಮೂಲ ತತ್ವಗಳಾದ ಸ್ವಾತಂತ್ರ‍್ಯ,ಸಮಾನತೆ, ಹಾಗೂ ಸಹೋದರತೆಯನ್ನು ಒಳಗೊಂಡ ವಿಶ್ವದ ಮೊದಲ ಸಂಸತ್ತು ಎಂದು ಪ್ರಸಿದ್ಧಿ ಪಡೆದ ಅನುಭವ ಮಂಟಪದ ಮೂಲಕ ವಚನ ಸಾಹಿತ್ಯವು ಜನಸಾಮಾನ್ಯರ ಸಾಹಿತ್ಯವಾಗಿ ವಿಫುಲವಾಗಿ ಬೆಳೆಯಿತು. ವಿಶ್ವಗುರು ಅಣ್ಣ ಬಸವಣ್ಣನವರ ಆದಿಯಾಗಿ ಗಂಗಾಂಬಿಕೆ, ನೀಲಾಂಬಿಕೆ, ಅಕ್ಕನಾಗಮ್ಮ, ಚೆನ್ನಬಸವಣ್ಣ, ಹಡಪದ ಅಪ್ಪಣ್ಣ, ಲಿಂಗಮ್ಮ, ಮಡಿವಾಳ ಮಾಚಿದೇವ, ನುಲಿಯ ಚಂದಯ್ಯ, ಹಾವಿನಾಳ ಕಲ್ಲಯ್ಯ, ಬಸವಾದಿ ಪ್ರಮುಖರು ಜಿಲ್ಲೆಯ ವಚನಕಾರರಾಗಿ ಸಾಹಿತ್ಯ ಲೋಕದಲ್ಲಿ ಕಳಸಪ್ರಾಯರಾಗಿರುವರು ಎಂದರು. ವಿಜಯಪುರ ಜಿಲ್ಲೆ ಮಕ್ಕಳ ಸಾಹಿತ್ಯದ ತವರೂರಾಗಿದ್ದು, ಇಲ್ಲಿ ಮಕ್ಕಳ ಸಾಹಿತ್ಯ, ದಲಿತ ಬಂಡಾಯ ಸಾಹಿತ್ಯ, ಮಹಿಳಾ ಸಾಹಿತ್ಯ, ಸಂಶೋಧನಾ ಸಾಹಿತ್ಯ, ಅಭಿನಂದನಾ ಸಾಹಿತ್ಯ, ಕಥೆ ಮತ್ತು ಕಾದಂಬರಿ, ಸೃಜನಶೀಲ ಸಾಹಿತ್ಯ, ಪತ್ರಿಕಾ ಸಾಹಿತ್ಯ, ರಂಗಭೂಮಿ,ತತ್ವಪದಗಳ ಸಾಹಿತ್ಯ, ಹೀಗೆ ನಾನಾ ಕ್ಷೇತ್ರಗಳಲ್ಲಿ ಜಿಲ್ಲೆಯ ಸಾಧಕರು ಸಾಧನೆ ಮಾಡಿದ ಸಾಹಿತಿಗಳ ಕುರಿತು ತುಂಬಾ ಮಾರ್ಮಿಕವಾಗಿ ಮಾತನಾಡಿದರು.
ಅಲ್ಲದೇ ೧೯೭೦ರ ದಶಕದಲ್ಲಿ ಹುಟ್ಟಿಕೊಂಡ ದಲಿತ ಬಂಡಾಯ ಸಾಹಿತ್ಯವು ಒಂದು ಶಕ್ತಿಶಾಲಿ ಚಳವಳಿಯಾಗಿದೆ. ಜಾತಿ ತಾರತಮ್ಯ ಸಾಮಾಜಿಕ ಅನ್ಯಾಯ ದಲಿತರ ಮೇಲಿನ ದಬ್ಬಾಳಿಕೆ ವಿರುದ್ಧ ಹೋರಾಡಲು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ದಲಿತ ಸಂಘರ್ಷ ಸಮಿತಿ ಜನ್ಮ ತಾಳಿತು. ವಿಜಯಪುರ ಜಿಲ್ಲೆಯಲ್ಲಿಯೂ ಸಹ ಅನೇಕರು ಬೆನ್ನೆಲುಬಾಗಿ ನಿಂತು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಸಾಹಿತ್ಯ ರಚನೆಯಾಗಿರುವುದು ಜಿಲ್ಲೆಯ ಹೆಮ್ಮೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಹಿಟ್ಟಿನಹಳ್ಳಿ, ಉತ್ನಾಳ, ಹಾಗೂ ಕೃಷಿ.ವಿ.ವಿ ಸಮಸ್ತ ಸಿಬ್ಬಂದಿ ತನು,ಮನ ಧನವನ್ನು ನೀಡುವ ಮೂಲಕ ಕಳೆದ ಒಂದು ತಿಂಗಳುಗಳಿಂದ ಅಹರ್ನಿಶಿ ದುಡಿದು ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಸರ್ವರನ್ನು ಅಭಿಮಾನದಿಂದ ಅಭಿನಂದಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ತಾಲೂಕಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಸರಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೆಡಶ್ಯಾಳ, ಕೃಷಿ ವಿ.ವಿ ಪ್ರಾಧ್ಯಾಪಕ ರಾಜಕುಮಾರ ಜೊಲ್ಲೆ, ಬಸವರಾಜ ಪಡಶೆಟ್ಟಿ ಉಪಸ್ಥಿತರಿದ್ದು ಮಾತನಾಡಿದರು.
ಶ್ರೀ ಶಿವಮೂರ್ತಿ ಸ್ವಾಮಿ ಚರಂತಿಮಠ ಪ್ರೌಢಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಪ್ರಸ್ತುತ ಪಡಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ಮಾಧವ ಎಚ್. ಗುಡಿ ಸ್ವಾಗತಿಸಿ ಗೌರವಿಸಿದರು. ತಾಲೂಕಾ ದಂಡಾಧಿಕಾರಿ ಪ್ರಶಾಂತ ಚನಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕಾ ಕಸಾಪ ಅಧ್ಯಕ್ಷ ಡಾ.ಆನಂದ ಕುಲಕರ್ಣಿ ಆಶಯ ನುಡಿಗಳನ್ನು ಹಂಚಿಕೊಂಡರು. ಮೋಹನ ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿದರು. ಮಹಾದೇವಿ ತೆಲಗಿ ಹಾಗೂ ಮಮತಾಜ್ ನಿರೂಪಿಸಿದರು. ವಿಜಯಲಕ್ಷ್ಮಿ ಹಳಕಟ್ಟಿ ವಂದಿಸಿದರು.

Share this