ಸಪ್ತಸಾಗರ ವಾರ್ತೆ,ವಿಜಯಪುರ, ಅ.1: ಹಿರಿಯ ನಾಗರಿಕರು ಸಮಾಜದ ಅಮೂಲ್ಯ ಆಸ್ತಿಯಾಗಿದ್ದು, ಅವರ ಜೀವನಾನುಭವ, ಜ್ಞಾನ ಮತ್ತು ಮಾರ್ಗದರ್ಶನ ಸದೃಢ ಸಮಾಜ ನಿರ್ಮಾಣಕ್ಕೆ ಅಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ‘ದೀರ್ಘಾಯುಷ್ಯದ ಯುಗ, ಸುದೀರ್ಘ ಜೀವನಕ್ಕಾಗಿ ಜೀವನಕ್ರಮಗಳ ಮರುಚಿಂತನೆ’ ಧ್ಯೇಯವಾಕ್ಯದಡಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆ ಹಿರಿಯರ ಅನುಭವ ಹಾಗೂ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವುದರೊಂದಿಗೆ ಅವರನ್ನು ಗೌರವದಿಂದ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಹಿರಿಯ ನಾಗರಿಕರ ಹಕ್ಕು, ಅಗತ್ಯ ಹಾಗೂ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದರು.
ಹಿರಿಯರು ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡು ಅಪಾರ ಅನುಭವ ಸಂಪಾದಿಸಿರುತ್ತಾರೆ. ಅವರ ಸಲಹೆ, ಮಾರ್ಗದರ್ಶನ ಕಿರಿಯರು ಜೀವನದ ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ. ಹೀಗಾಗಿ ಕುಟುಂಬದಲ್ಲಿ ಹಿರಿಯರಿಗೆ ಪ್ರೀತಿ, ಗೌರವ ಹಾಗೂ ಸೂಕ್ತ ಸ್ಥಾನಮಾನ ನೀಡುವುದರ ಜತೆಗೆ ಅವರ ಭಾವನೆಗಳನ್ನು ಅರ್ಥೈಸಿಕೊಂಡು ಅಗತ್ಯಗಳಿಗೆ ಸ್ಪಂದಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಸಿ.ಬಿ. ಕುಂಬಾರ ಮಾತನಾಡಿ, ಹಿರಿಯರ ಅನುಭವದ ಮಾತುಗಳನ್ನು ಆಲಿಸುವುದರಿಂದ ಜೀವನಕ್ಕೆ ಅಮೂಲ್ಯ ಪಾಠಗಳು ದೊರೆಯುತ್ತವೆ. ಅವರ ಸಲಹೆ ಮತ್ತು ಮಾರ್ಗದರ್ಶನ ಕುಟುಂಬದ ಬೆಳವಣಿಗೆ ಮಾತ್ರವಲ್ಲದೆ ಸಮಾಜದ ಪ್ರಗತಿಗೂ ಸಹಕಾರಿಯಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸಂತೋಷ ಎಚ್. ಮಾತನಾಡಿ, ವಯಸ್ಸಾದಂತೆ ಎದುರಾಗುವ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಹಿರಿಯರಿಗೆ ಅಗತ್ಯ ವೈದ್ಯಕೀಯ ಆರೈಕೆ, ಮಾನಸಿಕ ಬೆಂಬಲ ಹಾಗೂ ಕುಟುಂಬದ ಪ್ರೀತಿ ನೀಡುವುದು ನಿಜವಾದ ಗೌರವವಾಗಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಮಾತನಾಡಿ, ಹಿರಿಯರು ಕುಟುಂಬ ಹಾಗೂ ಸಮಾಜದಿಂದ ದೂರವಿರದೆ ಎಲ್ಲರೊಂದಿಗೆ ಬೆರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜನರೊಂದಿಗೆ ಬೆರೆಯುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ನೆಮ್ಮದಿ ದೊರೆಯುತ್ತದೆ. ವಿಶೇಷವಾಗಿ ಮಕ್ಕಳೊಂದಿಗೆ ಸಮಯ ಕಳೆಯುವುದು ಉತ್ತಮ ಎಂದರು.
ಬಿ.ಎಲ್.ಡಿ.ಇ. ಸಂಸ್ಥೆಯ ಹಿರಿಯ ನಾಗರಿಕರ ಸೇವಾ ವಿಭಾಗದ ವೈದ್ಯ ಡಾ. ಅಂಬ್ಲಿಗಿ ಮಾತನಾಡಿ, ಹಿರಿಯರ ಆರೋಗ್ಯ ಸಂರಕ್ಷಣೆಗೆ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ವತಿಯಿಂದ ಲಭ್ಯವಿರುವ ವೈದ್ಯಕೀಯ ಸೇವೆಗಳು ಹಾಗೂ ಆರೋಗ್ಯ ಸಂಬಂಧಿತ ನೆರವಿನ ಕುರಿತು ಮಾಹಿತಿ ನೀಡಿದರು. ಹಿರಿಯರ ಆರೋಗ್ಯ ಕಾಪಾಡುವಲ್ಲಿ ಕುಟುಂಬ ಮತ್ತು ಸಮಾಜದ ಸಹಕಾರವೂ ಮಹತ್ವದ್ದಾಗಿದೆ ಎಂದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಪಿ. ಬಿರಾದಾರ ಕಡ್ಲೇವಾಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಹಿರಿಯ ನಾಗರಿಕರಿಗಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಅವುಗಳನ್ನು ಅರ್ಹರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಎಸ್.ಎಲ್. ಇಂಗಳೇಶ್ವರ ಹಾಗೂ ಡಿವೈಎಸ್ಪಿ ಮುರಿಗೆಪ್ಪ ಉಪಾಸೆ ಮಾತನಾಡಿದರು. ವಿಶ್ರಾಂತ ಪ್ರಾಚಾರ್ಯ ಎಸ್.ಎಸ್. ಬಸವರೆಡ್ಡಿ ಅವರು ಹಿರಿಯ ನಾಗರಿಕರು ಆರೋಗ್ಯಕರ ಹಾಗೂ ನೆಮ್ಮದಿಯ ಜೀವನ ನಡೆಸಲು ಅನುಸರಿಸಬೇಕಾದ ಕ್ರಮಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಸ್ಪರ್ಧೆ ಹಾಗೂ ಚಟುವಟಿಕೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ಹಿರಿಯ ನಾಗರಿಕರಿಗೆ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣೆ ನಡೆಸಿದರು.
ಹಿರಿಯ ನಾಗರಿಕ ಎಸ್.ಸಿ. ರೆವಡಿ ತಮ್ಮ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಗದೀಶ ಕೆ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ನಿವೃತ್ತ ನೌಕರರ ಸಂಘದ ಪ್ರತಿನಿಧಿಗಳು, ಹಿರಿಯ ನಾಗರಿಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಹಿರಿಯರ ಜೀವನಾನುಭವ ಕಿರಿಯರಿಗೆ ಸದಾ ಮಾರ್ಗದರ್ಶಿ— ಅರವಿಂದ ಹಾಗರಗಿ


