ಸಪ್ತಸಾಗರ ವಾರ್ತೆ ಬಸವನ ಬಾಗೇವಾಡಿ, ಸೆ. 18 : ಮಹಿಳೆಯರನ್ನು ಸಬಲೀಕರಣಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವುದೇ ಸಂಸ್ಥೆಯ ಮುಖ್ಯ ಉದ್ದೇಶ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ಪ್ರಾದೇಶಿಕ ನಿರ್ದೇಶಕರಾದ ದಿನೇಶ್ ಪೂಜಾರಿ ರವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿ ಸಿ ಟ್ರಸ್ಟ್ ಬ.ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ವಲಯದ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ರಬಿನಾಳ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜನೆ ಮಾಡಲಾಗಿತ್ತು.
ಈ ಕಾರ್ಯಕ್ರಮವನ್ನು ಪ್ರಾದೇಶಿಕ ನಿರ್ದೇಶಕ ದಿನೇಶ ಪೂಜಾರಿ ಅವರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ, ಪ್ರಾಸ್ತವಿಕ ಮಾತುಗಳೊಂದಿಗೆ ಶ್ರೀ ಕ್ಷೇತ್ರದಿಂದ ನಡೆಯುವ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ಪದಾಧಿಕಾರಿಗಳಿಗೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ ವಿವರಿಸಿ ತಂಡದ ಸದಸ್ಯರಿಗೆ ಕ್ಷೇತ್ರದಿಂದ ಮತ್ತು ಯೋಜನೆಯಿಂದ ಸಿಗುವ ಸವಲತ್ತುಗಳನ್ನು ಸಂಘದ ಸದಸ್ಯರಿಗೆ ಒದಗಿಸಿಕೊಡುವಲ್ಲಿ ಒಕ್ಕೂಟದ ಪದಾಧಿಕಾರಿಗಳು ಕೆಲಸ ನಿರ್ವಹಿಸಬೇಕೆಂದರು. ಯೋಜನೆ ಪದಾಧಿಕಾರಿಗಳಿಗೆ ಸ್ಥಾನಮಾನಗಳ ಜತೆಗೆ ಸದಸ್ಯರ ಸಮಸ್ಯೆಗೆ ಸ್ಪಂದಿಸುವ ಸದವಕಾಶ ಕಲ್ಪಿಸುತ್ತದೆ ಎಂದರು.
ಜಿಲ್ಲಾ ನಿರ್ದೇಶಕ ಸಂತೋಷಕುಮಾರ್ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಚಿಂತನೆಯಿಂದ 30 ವರ್ಷಗಳ ಹಿಂದೆ ಒಂದು ಸಣ್ಣ ಗ್ರಾಮದಿಂದ ಆರಂಭಗೊಂಡ ಸ್ವಸಹಾಯ ಗುಂಪುಗಳ ರಚನೆ ಮಾಡಿ ಆರ್ಥಿಕ ವಹಿವಾಟು ವಿಸ್ತಾರಗೊಳಿಸಿದೆ. ಸ್ವಾವಲಂಬನೆ ಜೀವನಕ್ಕೆ ಸಹಕಾರ ಇಂದು ಇಡಿರಾಜ್ಯದಲ್ಲಿ ವಿಸ್ತರಿಸಿಕೊಂಡು ಪ್ರಬಲವಾಗಿ ಬೆಳೆಯುತ್ತಿದೆ’ ಎಂದು ಹೇಳಿದರು.
‘ಸಂಸ್ಥೆ ಮಹಿಳೆಯರಿಗೆ ಆರ್ಥಿಕ ಚೈತನ್ಯದ ಜತೆಗೆ ಅಕ್ಷರದ ಜ್ಞಾನ, ಧಾರ್ಮಿಕ ಸಂಸ್ಕಾರ, ಕಾನೂನು ತಿಳಿವಳಿಕೆ, ಆರೋಗ್ಯ, ಪರಿಸರ ಸ್ವಚ್ಛತೆ ಬಗ್ಗೆಯ ಜಾಗೃತಿ ಮೂಡಿಸುತ್ತಿದೆ. ದೇಶದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅತಿಮುಖ್ಯ ಎಂಬುದನ್ನು ಸಂಸ್ಥೆ ಅರ್ಥ ಮಾಡಿಕೊಂಡು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಪುರುಷರಿಗೆ ಸಮಾನವಾಗಿ ನಿಲ್ಲಬೇಕು ಎಂಬುದನ್ನು ಮಹಿಳೆಯರು ಅರ್ಥ ಮಾಡಿಕೊಂಡಿದ್ದಾರೆ ಎನ್ನುವ ವಿಶ್ವಾಸವಿದೆ’ ಎಂದು ಹೇಳಿದರು.
ಬಸವನ ಬಾಗೇವಾಡಿ ತಾಲ್ಲೂಕು ಯೋಜನಾಧಿಕಾರಿ ಪ್ರಸನ್ನ ಆರ್ ಅವರು ಮಾತನಾಡಿ ಒಕ್ಕೂಟ ಸಭೆಯ ಮಹತ್ವವನ್ನು ಮತ್ತು ಬ್ಯಾಂಕ್ ಸಂಘಕ್ಕೆ ವಿಧಿಸುವ ಅತ್ಯಂತ ಕಡಿಮೆ ಬಡ್ಡಿ ದರದ ಅಂದರೆ 100 ರೂ ಸಾಲ ವನ್ನು 1 ತಿಂಗಳಿಗೆ ಪಡೆದರೆ ಕೇವಲ 62 ಪೈಸೆ ಬಗ್ಗೆ ಮತ್ತು ವಾರದ ಸಭೆ ಮಾಡುವ ಬಗ್ಗೆ, csc ಕಾರ್ಯಕ್ರಮದ ಬಗ್ಗೆ ಹಾಗೂ csc ಸೇವೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಮಹಿಳೆಯರ ಹಕ್ಕು ಮತ್ತು ಕರ್ತವ್ಯಗಳೇನು ಎಂಬುದನ್ನು ಪರಿಚಯಿಸಿ ಸಣ್ಣಪುಟ್ಟ ವೆಚ್ಚಕ್ಕೂ ಕುಟುಂಬದ ಯಜಮಾನನ ಮುಂದೆ ಕೈ ಚಾಚದೆ ಸ್ವಂತ ದುಡಿಮೆಗೆ ಅವಕಾಶ ಕಲ್ಪಿಸಿರುವುದರ ಜತೆಗೆ ಸಾವಿರಾರು ವ್ಯಸನಿಗಳನ್ನು ಮದ್ಯವರ್ಜನ ಶಿಬಿರದ ಮೂಲಕ ನವ ಜೀವನಕ್ಕೆ ಎಡೆ ಮಾಡಿಕೊಟ್ಟಿದೆ. ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ಮಹಿಳೆಯರನ್ನು ಮತ್ತಷ್ಟು ಸಬಲೀಕರಣಗೊಳಿಸುವತ್ತ ಚಿಂತನೆ ನಡೆಸಬೇಕು’ ಎಂದು ಹೇಳಿದರು.
ಜಿಲ್ಲಾ ಅಡಿಟ್ ಪ್ರಬಂಧಕರಾದ ಯಮುನೂರಪ್ಪರವರು ಮಾತನಾಡಿ ಒಕ್ಕೂಟ ಪದಾಧಿಕಾರಿಗಳ ಜವಾಬ್ದಾರಿಯ ಬಗ್ಗೆ, ಒಕ್ಕೂಟ ಸಭೆಗಳ ಪರಿಣಾಮಕಾರಿ ನಿರ್ವಹಣೆ ಬಗ್ಗೆ, ಪದಾಧಿಕಾರಿಗಳ ನಾಯಕತ್ವದ ಬಗ್ಗೆ ದಾಖಲಾತಿ ನಿರ್ವಹಣೆ ಬಗ್ಗೆ, ಪ್ರಗತಿನಿಧಿ ಕಾರ್ಯಕ್ರಮ ಮತ್ತು ನಿಯಾಮವಳಿಗಳ ಬಗ್ಗೆ, ಪ್ರಗತಿನಿಧಿಗೆ ಭದ್ರತೆ ಮತ್ತು ಮಂಜೂರಾತಿ ಕ್ರಮದ ಬಗ್ಗೆ, ಪ್ರಗತಿ ರಕ್ಷಾ ಕವಚ ಕಾರ್ಯಕ್ರಮದ ಬಗ್ಗೆ, ಯೋಜನೆಯಲ್ಲಿ ಪ್ರಸ್ತುತ ಇರುವ ವಿವಿಧ ಜನ ಉಪಯೋಗಿ ಕಾರ್ಯಕ್ರಮಗಳ ಬಗ್ಗೆ ಮತ್ತು ಪ್ರಸ್ತುತ ದಿನಗಳಲ್ಲಿ ಅದರ ಅಗತ್ಯತೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿ ಪ್ರೇಮಾ, ತಾಂತ್ರಿಕ ಸಿಬ್ಬಂದಿ ಸಂಗೀತ, ರೋಜಾ,ವಲಯದ ಸೇವಾಪ್ರತಿನಿಧಿಗಳದ ಶರಣಮ್ಮ, ಅನ್ನಪೂರ್ಣ, ಸುಕನ್ಯ, ಜ್ಯೋತಿ, ಭವ್ಯ,ಹಾಗೂ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.
ಮಹಿಳೆಯರನ್ನು ಮುಖ್ಯವಾಹಿನಿಗೆ ತರುವುದೇ ಕ್ಷೇತ್ರದ ಮುಖ್ಯ ಉದ್ದೇಶ : ದಿನೇಶ ಪೂಜಾರಿ
