‘ನಾನು-ನನ್ನದು’ ಮನೋಭಾವದಿಂದ ದೇಶ-ಸಮಾಜದ ಚಿಂತನೆ ಕ್ಷೀಣಿಸಿದೆ: ಡಾ. ದೇಸಾಯಿ ಯಡಹಳ್ಳಿ ಕಳವಳ

ಸಪ್ತಸಾಗರ ವಾರ್ತೆ,ವಿಜಯಪುರ, ಜು.12: ಸಮಾಜದಲ್ಲಿ ಹೆಚ್ಚುತ್ತಿರುವ ಅನಗತ್ಯ ಆಡಂಬರ, ದುಂದು ವೆಚ್ಚ ಮತ್ತು ಪ್ರದರ್ಶನದ ಮನೋಭಾವಕ್ಕೆ ಕಡಿವಾಣ ಹಾಕುವ ಅಗತ್ಯವಿದ್ದು, ದೇಶ ಹಾಗೂ ಸಮಾಜದ ಬಗ್ಗೆ ಕಾಳಜಿ ಹೊಂದಿದ ಜೀವನಶೈಲಿ ರೂಢಿಸಿಕೊಳ್ಳಬೇಕೆಂದು ಹಿರಿಯ ಸಹಕಾರಿ ಧುರೀಣ ಹಾಗೂ ಪರಿಸರ ತಜ್ಞ ಡಾ. ಎಂ.ಆರ್. ದೇಸಾಯಿ ಯಡಹಳ್ಳಿ ಕರೆ ನೀಡಿದರು.
ಬಾಗಲಕೋಟೆ ಜಿಲ್ಲೆಯ ಬೀಳಗಿ ಸಮೀಪದ ಯಡಹಳ್ಳಿಯಲ್ಲಿ ಆಯೋಜಿಸಿದ್ದ ಅನಗತ್ಯ ಆಡಂಬರದ ಆಚರಣೆಗಳ ಕುರಿತ ಚಿಂತನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿನ ದಶಕಗಳಲ್ಲಿ “ನಾನು-ನನ್ನದು” ಎಂಬ ಸ್ವಾರ್ಥದ ಮನೋಭಾವ ಹೆಚ್ಚುತ್ತಿದ್ದು, ದೇಶ ಮತ್ತು ಸಮಾಜದ ಹಿತದ ಬಗ್ಗೆ ಜನರ ಬದ್ಧತೆ ಕುಗ್ಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ವಿದ್ಯುತ್ ಉಳಿತಾಯಕ್ಕೆ ನೀಡಿದ ಕರೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸೋಮವಾರ ಉಪವಾಸದ ಕರೆಗೆ ದೇಶದ ಜನ ಸ್ಪಂದಿಸಿದ ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಇಂಧನ ಉಳಿತಾಯಕ್ಕೆ ಪ್ರಧಾನಿ ನೀಡಿದ ಸಲಹೆಗೂ ಸಮರ್ಪಕ ಸ್ಪಂದನೆ ಸಿಗದಿರುವುದು ಸಾಮಾಜಿಕ ಜವಾಬ್ದಾರಿ ಕ್ಷೀಣಿಸಿರುವುದನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಅನಗತ್ಯವಾಗಿ ಭಾರೀ ಮದುವೆ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸುವ ಮೂಲಕ ಅರಣ್ಯ ಸಂಪತ್ತಿನ ನಾಶವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಮೊಬೈಲ್ ಕರೆ ಅಥವಾ ವಾಟ್ಸ್ಆಪ್ ಮೂಲಕ ಆಹ್ವಾನ ನೀಡುವುದರಿಂದ ಸಮಯ, ಹಣ ಹಾಗೂ ಪ್ರಕೃತಿ ಸಂಪನ್ಮೂಲಗಳನ್ನು ಉಳಿಸಬಹುದೆಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಮದುವೆ, ನಿಶ್ಚಿತಾರ್ಥ, ಸೀಮಂತ, ಜನ್ಮದಿನ, ವಾರ್ಷಿಕೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳು ಆಡಂಬರದ ಸ್ಪರ್ಧೆಯಾಗುತ್ತಿದ್ದು, ಸಾಲ ಮಾಡಿ ಆಚರಿಸುವ ಮನೋಭಾವ ಸಮಾಜಕ್ಕೆ ಪಿಡುಗಾಗಿದೆ ಎಂದು ಹೇಳಿದರು.
ಎಂ.ಆರ್. ಪಾಟೀಲ ಬಳ್ಳೊಳ್ಳಿ ಮಾತನಾಡಿ, ನಿಶ್ಚಿತಾರ್ಥಕ್ಕೂ ಸಾವಿರಾರು ಜನರನ್ನು ಸೇರಿಸುವ ಪ್ರವೃತ್ತಿ ಹೆಚ್ಚುತ್ತಿದ್ದು, ಸಮಾಜದಲ್ಲಿ ಸರಳ ವಿವಾಹಗಳ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ದಯಾನಂದ ಪಾಟೀಲ ಮುಧೋಳ ಅವರು, ಭಾರತೀಯ ಸಂಸ್ಕೃತಿಯ ಸೀಮಂತ ಕಾರ್ಯದ ವೈಜ್ಞಾನಿಕ ಮತ್ತು ಭಾವನಾತ್ಮಕ ಹಿನ್ನೆಲೆಯನ್ನು ಮರೆತು, ಅದನ್ನೂ ಆಡಂಬರದ ಪ್ರದರ್ಶನವನ್ನಾಗಿ ಮಾಡುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಎಸ್.ಟಿ. ಪಾಟೀಲ ಯಡಹಳ್ಳಿ ಮಾತನಾಡಿ, ಯಡಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿಶ್ಚಿತಾರ್ಥ ಮತ್ತು ಇತರ ಕುಟುಂಬ ಕಾರ್ಯಕ್ರಮಗಳನ್ನು ಸೀಮಿತವಾಗಿ ನಡೆಸುವಂತೆ ಮನವರಿಕೆ ಮಾಡಿದ್ದು, ಉತ್ತಮ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು.
ಸಭೆಯಲ್ಲಿ ರಾಜ್ಯ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ನ್ಯಾಯವಾದಿಗಳಾದ ಶ್ರೀಕಾಂತ ಶಿರಾಡೋಣ, ಎನ್.ಎಸ್. ಲೋಣಿ, ಶರಶ್ಚಂದ್ರ ಪಾಟೀಲ, ಲೋಕಾಯುಕ್ತ ಡಿಎಸ್ಪಿ ಬಸವರಾಜ ಯಲಿಗಾರ, ಸುರೇಶ ದೇಸಾಯಿ ಕಲಕೇರಿ, ಅದೃಶ್ಯಪ್ಪ ದೇಸಾಯಿ, ಪ್ರಕಾಶ ಪರನಾಕರ ಸೇರಿದಂತೆ ಹಲವರು ದುಂದು ವೆಚ್ಚ, ವಿವಾಹ ವಿಚ್ಛೇದನ, ವೃದ್ಧಾಪ್ಯದಲ್ಲಿನ ಪಾಲಕರ ನಿರ್ಲಕ್ಷ್ಯ ಸೇರಿದಂತೆ ವಿವಿಧ ಸಾಮಾಜಿಕ ಸಮಸ್ಯೆಗಳ ಕುರಿತು ಅಭಿಪ್ರಾಯ ಹಂಚಿಕೊಂಡರು.
ಕೊಲೂರ ಗ್ರಾಮದ ಶಿವಪ್ಪ ಸಂಗಪ್ಪ ತಿಪರೆಡ್ಡಿ ಹಾಗೂ ಬರಟಗಿ ಗ್ರಾಮದ ಗುರುಪಾದಗೌಡ ದಾಶ್ಯಾಳ ಇನ್ನು ಮುಂದೆ ತಮ್ಮ ಕುಟುಂಬದ ಕಾರ್ಯಕ್ರಮಗಳನ್ನು ಸರಳವಾಗಿ ನಡೆಸುವುದಾಗಿ ಘೋಷಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ವಿವಿಧ ಸಮುದಾಯಗಳ ಮುಖಂಡರು, ತಮ್ಮ ತಮ್ಮ ಸಮಾಜಗಳಲ್ಲಿ ಸರಳ ವಿವಾಹ ಹಾಗೂ ಅನಗತ್ಯ ಆಡಂಬರ ವಿರೋಧಿ ಜಾಗೃತಿ ಮೂಡಿಸುವ ಸಂಕಲ್ಪ ಕೈಗೊಂಡರು.

Share this