ಕ್ಷೀರ ಪೈಲಟ್ ಯೋಜನೆಗೆ ಸರಕಾರಿ ಶಾಲಾ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ವಿನೂತನವಾಗಿ ಚಾಲನೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 8: ಕ್ಷೀರ ಯೋಜನೆಗೆ ಚಾಲನೆ ಸಿಕ್ಕಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ವಿಜಯಪುರ ಜಿಲ್ಲೆ ದೇಶದಲ್ಲಿ ಅತೀ ಹೆಚ್ಚು ಹಾಲು ಉತ್ಪಾದಿಸುವ ಮೂರು ಜಿಲ್ಲೆಗಳಲ್ಲಿ ಸ್ಥಾನ ಪಡೆಯಲಿದೆ ಎಂದು ಪದ್ಮಶ್ರೀ ಪುರಸ್ಕೃತ ಮತ್ತು ಬೆಂಗಳೂರಿನ ಅಸೆಲ್ ಕಂಪನಿ ಸಂಸ್ಥಾಪಕ ಪ್ರಶಾಂತ ಪ್ರಕಾಶ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಬಿ.ಎಲ್.ಡಿ.ಇ ಸಂಸ್ಥೆ, ಕೃಷಿಕಲ್ಪ ಫೌಂಡೇಶನ್ ಹಾಗೂ ಅಕ್ಷಯಕಲ್ಪ ಫೌಂಡೇಶನ್ ಸಹಯೋಗದಲ್ಲಿ ಜಿಲ್ಲೆಯಲ್ಲಿ ಸುಸ್ಥಿರ ಹೈನುಗಾರಿಕೆ ಉತ್ತೇಜಿಸಲು ಕ್ಷೀರ ಪೈಲಟ್ ಯೋಜನೆಗೆ ಸರಕಾರಿ ಶಾಲಾ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ವಿನೂತನವಾಗಿ ಚಾಲನೆ ನೀಡಿ ಅವರು ಮಾತಾಡಿದರು.
ಕಳೆದ 15 ರಿಂದ 20 ವರ್ಷಗಳ ಕಾಲ ನವ್ಯೋದ್ಯಮಗಳಿಗೆ ಉತ್ತೇಜನ ನೀಡಿ ನಗರಾಭಿವೃದ್ಧಿ ಮಾಡುವತ್ತ ಗಮನ ಹರಿಸಿದ್ದೆ. ಸಚಿವ ಎಂ. ಬಿ. ಪಾಟೀಲ ಅವರ ಸಹಯೋಗದಲ್ಲಿ ಈಗ ಬಿಯಾಂಡ್ ಬೆಂಗಳೂರು ಅಂದರೆ ಗ್ರಾಮೀಣ ಭಾಗಗಳಲ್ಲಿಯೂ ಕೈಗಾರಿಕೆಗಳನ್ನು ಪ್ರಾರಂಭಿಸಲು ಉತ್ತೇಜನ ನೀಡುವ ಕೆಲಸಗಳಿಗೆ ಆದ್ಯತೆ ನೀಡಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಸನಗೌಡ ಪಾಟೀಲ ಅವರು ನನ್ನ ಜೊತೆ ಈಗಾಗಲೇ 15 ಸಭೆಗಳನ್ನು ಮಾಡಿದ್ದಾರೆ. ತಂತ್ರಜ್ಞಾನ ಬಳಸಿ ಹಾಲು ಉತ್ಪಾದನೆ ಹೆಚ್ಚಿಸಲು ರೂಪುರೇಷೆ ಸಿದ್ಧಪಡಿಸಿದ್ದಾರೆ. ಜಿಲ್ಲೆಯ ಜನ ಕಾಯಕನಿಷ್ಠರಾಗಿದ್ದು, ಮುಂಬರುವ ದಿನಗಳಲ್ಲಿ ಶ್ವೇತಕ್ರಾಂತಿಗೂ ಕೊಡುಗೆ ನೀಡಲಿದ್ದಾರೆ. ಈ ಯೋಜನೆಯ ಯಶಸ್ಸಿಗೆ ಸಚಿವರು ಬೆನ್ನೆಲುಬಾಗಿ ನಿಂತಿರುವುದರಿಂದ ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆ ಹೈನೋದ್ಯಮದಲ್ಲಿ ದೇಶದ ಪ್ರಮುಖ ಮೂರು ಜಿಲ್ಲೆಗಳಲ್ಲಿ ಒಂದಾಗಲಿಗೆ ಎಂದು ಅವರು ಹೇಳಿದರು.
ಸಚಿವ ಎಂ. ಬಿ. ಪಾಟೀಲ ಮಾತನಾಡಿ, ಇದು ರೈತಪರ, ಮಹಿಳೆಯರ ಪರ, ಯುವಕರ ಪರ ಮತ್ತು ಪಕ್ಷಾತೀತ ಯೋಜನೆಯಾಗಿದೆ. ನಾವು ಕೈಗೊಂಡ ಕೋಟಿ ವೃಕ್ಷ ಅಭಿಯಾನದಂತೆ ಎಲ್ಲರೂ ಇದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಈ ಕ್ಷೀರ ಯೋಜನೆಯಡಿ ಸಣ್ಣದಾಗಿ ಹೈನುಗಾರಿಕೆ ಪ್ರಾರಂಭಿಸಿ ಲೋಪದೋಷ ಸರಿಪಡಿಸಿಕೊಂಡು ಹೈನುಗಾರಿಕೆಯನ್ನು ವಿಸ್ತರಿಸಲು ರೂಪುರೇಷೆ ಸಿದ್ದಪಡಿಸಲಾಗಿದೆ. ಯುವಕರೂ ಕೂಡ ವೃತ್ತಿಕೌಶಲ್ಯ ಹೆಚ್ಚಿಸಿಕೊಂಡು ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಮತ್ತು ಈ ಮೂಲಕ ತೋಟಗಾರಿಕೆ, ಹೈನುಗಾರಿಕೆಗಳನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡು ಉತ್ಪಾದನೆ ಹೆಚ್ಚಿಸಲು ಇದು ನೆರವಾಗಲಿದೆ. ಪೈಲೆಟ್ ಯೋಜನೆಗೆ ಆಯ್ಕೆಯಾಗಿರುವ ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪ್ರಶಾಂತ ಪ್ರಕಾಶ ಅವರು ನವ್ಯೋದ್ಯಮಿಗಳಿಗೆ ಸ್ಟಾರ್ಟಪ್ ಮೂಲಕ ಉದ್ಯಮ ಪ್ರಾರಂಭಿಸಲು ನೆರವಾಗುತ್ತಿದ್ದಾರೆ. ಅವರು ಅವರು ಈ ಯೋಜನೆಗೆ ಕೈ ಜೋಡಿಸಿರುವುದು ಸಂತಸ ತಂದಿದೆ. ಯುವ ಉದ್ಯಮಿಗಳಿಗೆ ಬದುಕು ನೀಡಿ ಅವರನ್ನು ಉನ್ನತ ಸ್ಥಾನಕ್ಕೇರಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಕೃಷಿಕಲ್ಪ ಫೌಂಡೇಶನ್ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಸಿ.ಎಂ.ಪಾಟೀಲ ಮಾತನಾಡಿ, ಬಸನಗೌಡ ಪಾಟೀಲ ಅವರು ಕಳೆದ ಮೂರು ವರ್ಷಗಳಿಂದ ಈ ಯೋಜನೆ ಜಾರಿಗೆ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಈ ಯೋಜನೆ ಜಾರಿಗೂ ಮುಂಚೆ ವಿಜಯಪುರ ಜಿಲ್ಲೆಯ 16 ಹಳ್ಳಿಗಳಲ್ಲಿ ಸಂಚರಿಸಿ ಅಸಮಗ್ರ ಧ್ಯಯನ ನಡೆಸಲಾಯಿತು. ಸಾಕಷ್ಟು ಚರ್ಚೆ ನಡೆಸಿ ಯೋಜನೆ ರೂಪಿಸಲಾಯಿತು. ನಮ್ಮ ರೈತರು ಶ್ರಮಜೀವಿಗಳು. ಯೋಜನೆ ಜಾರಿಗೆ ಸೂಕ್ತವಾದ ಐದು ಗ್ರಾಮಗಳನ್ನು ಆಯ್ಕೆ ಮಾಡಿ ತಿಪಟೂರಿನ ಮಾದರಿಯಲ್ಲಿ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯ ಯುವ ರೈತರಿಗೆ ತರಬೇತಿ ನೀಡಲಾಗಿದೆ. ಹಾಲು ಉತ್ಪಾದನೆಯಿಂದ ಆಗುವ ಲಾಭಗಳು ಕುರಿತು ಚಿಂತನೆ ನಡೆಸಲಾಗಿದೆ. ಬಿ.ಎಲ್.ಡಿ.ಇ ಸಂಸ್ಥೆ ಈ ಯೋಜನೆಗೆ ಅಗತ್ಯವಾಗಿರುವ ಎಲ್ಲ ನೆರವನ್ನು ನೀಡಿದೆ. ಸಂಸ್ಥೆಯ ಇನಕ್ಯೂಬೆಶನ್ ಸೆಂಟರ್ ಸಹಯೋಗದಲ್ಲಿ ಸ್ಟಾರ್ಟಪ್ ಗಳಿಗೂ ಅವಕಾಶ ನೀಡಲಾಗುವುದು. ರೈತ ಉತ್ಪಾದಕ ಸಂಸ್ಥೆಗಳ ಆದಾಯ ಹೆಚ್ಚಳ, ಮಾರುಕಟ್ಟೆ ಸೃಷ್ಠಿ, ಕ್ಷೀರ ಮತ್ತು ಉದ್ಯಮಶೀಲತೆ ಬೆಳವಣಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಕ್ಷಯಕಲ್ಪ ಫೌಂಡೇಶನ್ ಸಂಸ್ಥಾಪಕ ಶಶಿಕುಮಾರ ಮಾತನಾಡಿ, ಕಳೆದ 40 ವರ್ಷಗಳಲ್ಲಿ ವಿಶ್ವದಲ್ಲಿ 2/3ರಷ್ಟು ಕೃಷಿಯೋಗ್ಯ ಭೂಮಿ ಹಾಳಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ 60 ವರ್ಷಗಳಲ್ಲಿ ಕೃಷಿಯೋಗ್ಯ ಭೂಮಿ ಸಂಪೂರ್ಣವಾಗಿ ಮಾಯವಾಗಲಿದೆ. ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಕಳೆದ ಒಂದು ಶತಮಾನದ ಹಿಂದೆ ಇದ್ದ ಕೃಷಿ ಉತ್ಪಾದನೆ ಈಗ ಶೇ. ಗಣನೀಯವಾಗಿ ಕಡಿಮೆಯಾಗಿದೆ. ಮಣ್ಣಿನಗುಣ ಕಾಪಾಡಿಕೊಂಡು ಕೃಷಿ ಉತ್ಪಾದನೆ ಹೆಚ್ಚಿಸಲು ಸಂಸ್ಥೆ ಈ ಯೋಜನೆಯಡಿ ಕೆಲಸ ಮಾಡಲಿದೆ. ಸ್ಥಳೀಯವಾಗಿ ಗೊಬ್ಬರ ತಯಾರಿಕೆ, ಹೈನುಗಾರಿಕೆ ಉಪವಸ್ತುಗಳನ್ನು ಉತ್ಪಾದಿಸಲು ತರಬೇತಿ ನೀಡಲಾಗುವುದು. ಜಾನುವಾರುಗಳ ಆರೋಗ್ಯ ಸಂರಕ್ಷಣೆ, ವೈಜ್ಞಾನಿಕವಾಗಿ ಮೇವು ಉತ್ಪಾದನೆ, ಹಾಲು ಸಂಸ್ಕರಣೆಗೆ ಸೂಕ್ತ ತರಬೇತಿ ನೀಡಿ ಹಾಲು ಉತ್ಪಾದನೆ ಹೆಚ್ಚಿಸಲು ಇದರಿಂದ ಸಾಧ್ಯವಾಗಲಿದೆ. ಉತ್ಪಾದನೆಗೆ ತಕ್ಕಂತೆ ಗ್ರಾಹಕರನ್ನು ಸೃಷ್ಠಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾತನಾಡಿ, ಕೃಷಿ ಪ್ರಧಾನವಾಗಿರುವ ಈ ಯೋಜನೆಯಿಂದ ಗ್ರಾಮೀಣಾಭಿವೃದ್ಧಿಯಾಗಲಿದೆ. ಸಮಗ್ರ ಕೃಷಿಯಲ್ಲಿ ಕ್ಷೀರಕ್ರಾಂತಿ ಪಾತ್ರ ಮುಖ್ಯವಾಗಿದೆ. ಈ ಯೋಜನೆಗೆ ಕೃಷಿ, ತೋಚಗಾರಿ, ಪಶುಸಂಗೋಪನೆ, ಕೆಎಂಎಫ್ ಸೇರಿದಂತೆ ಎಲ್ಲ ಇಲಾಖೆಗಳು ಕೈಜೊಡಿಸಿ ಯಶಸ್ವಿಯಾಗಿ ಮಾಡಬೇಕು ಎಂದು ಹೇಳಿದರು.
ವಿಜಯಪುರ ಮತ್ತು ಬಾಗಲಕೋಟೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಈರನಗೌಡ ಕರಿಗೌಡ್ರ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿಯೂ ಹಾಲು ಉತ್ಪಾದಕರ ಸಂಘಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಎಂದು ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಕಳೆದ 20 ವರ್ಷಗಳಿಂದ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗಾಗಿ ಸಚಿವ ಎಂ. ಬಿ. ಪಾಟೀಲ ಅವರು ಪಟ್ಟಿರುವ ಶ್ರಮ ಮತ್ತು ಆ ಶ್ರಮದಿಂದ ಸಿಕ್ಕಿರುವ ಫಲ, ಕೋಟಿ ವೃ,ಕ್ಷ ಅಭಿಯಾನ ವಿಶ್ವಖ್ಯಾತಿಯ ನ್ಯೂಯಾರ್ಕ್ ಟೈಮ್ಸ್ ಯಲ್ಲಿ ವಿಶೇಷ ವರದಿಯಾಗುವ ಮೂಲಕ ಪ್ರಪಂಚಾದ್ಯಂತ ಗಮನ ಸೆಳೆದಿರುವ ಕುರಿತು ಎಳೆಎಳೆಯಾಗಿ ವಿವರಿಸಿದರು. ಅಲ್ಲದೇ, ಬಿ.ಎಲ್.ಡಿ.ಇ ಸಂಸ್ಥೆ ಅರ್ಜುಣಗಿ, ನಾಗರಾಳ, ನಿಡೋಣಿ, ಕುಮಠೆ, ಯಕ್ಕುಂಡಿ ಗ್ರಾಮಗಳಲ್ಲಿ ಈ ಪೈಲೆಟ್ ಯೋಜನೆ ಜಾರಿಗೆ ನೆರವಾಗಲು ತಲಾ ರೂ. 50 ಲಕ್ಷ ಆರ್ಥಿಕ ಸಹಾಯ ನೀಡಿದೆ. ಈ ಮೂಲಕ ಅನ್ನದಾತರ ಬಾಳು ಹಸನಾಗಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಇದಕ್ಕೂ ಮುಂಚೆ ವಿಜಯಪುರ-ಬಾಗಲಕೋಟೆ ಹಾಲು ಉತ್ಪಾದಕರ ಸಂಘದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ ಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಭುರಾಜ ಹಿರೇಮಠ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಅಶೋಕ ಗೊಣಸಗಿ ರೈತರೊಂದಿಗೆ ಕ್ಷೀರ ಯೋಜನೆಯ ಕುರಿತು ಸಂವಾದ ನಡೆಸಿದರು.
ಉಪನ್ಯಾಸಕ ಸುಭಾಷ ಕನ್ನೂರ ಮತ್ತು ಕೃಷಿಕಲ್ಪ ಫೌಂಡೆಶನ್ ನ ವೀರಣ್ಣ ರೊಟ್ಟಿ ವಿರಣ್ಣ ರೊಟ್ಟಿ ನಿರೂಪಿಸಿದರು.

Share this