ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 21: ಮಾತೃಭಾಷೆಯು ಸಂಸ್ಕೃತಿ-ಭಾವನೆಗಳ ಪ್ರತೀಕ. ಅದು ಉತ್ತಮ ಶೈಕ್ಷಣಿಕ ಸಾಧನೆಗೆ ಮತ್ತು ವ್ಯಕ್ತಿತ್ವದ ಸಮಗ್ರ ವಿಕಸನಕ್ಕೆ ಅತ್ಯಗತ್ಯವಾಗಿದೆ. ಹಾಗಾಗಿ ಮಾತೃಭಾಷೆಯ ಕಾಳಜಿ ಸದಾ ಇರಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶನಿವಾರ ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ‘ವಿಶ್ವ ಮಾತೃಭಾಷಾ ದಿನ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾತೃಭಾಷೆ ಮಗು ಕಲಿಯುವ ಮೊದಲ ಭಾಷೆ. ಅದು ಪ್ರತಿಯೊಂದು ಸಂಸ್ಕೃತಿಯ ಆಸ್ತಿ ಮತ್ತು ನಮ್ಮೆಲ್ಲರ ಆತ್ಮವಿಶ್ವಾಸದ ಪ್ರತೀಕ. ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮಾತೃಭಾಷೆಯೇ ಬಹುಮುಖ್ಯ. ಮಕ್ಕಳು ಆಡುತ್ತಾ, ನೋಡುತ್ತಾ, ಮೈಗೂಢಿಸಿಕೊಳ್ಳುವ ಸಂವಹನದ ಬುನಾದಿಯೇ ಮಾತೃಭಾಷೆಯಾಗಿದೆ ಎಂದರು.
ಶಿಕ್ಷಕ ಸಿದ್ದು ರತ್ನಾಕರ ಮಾತನಾಡಿ, ಮಾತೃಭಾಷೆಯು ವ್ಯಕ್ತಿಯ ಸಂಸ್ಕೃತಿ, ಗುರುತು ಮತ್ತು ಭಾವನಾತ್ಮಕ ಬಂಧದ ಅಡಿಪಾಯವಾಗಿದೆ. ಇದು ಆಲೋಚನಾ ಶಕ್ತಿ, ಸೃಜನಶೀಲತೆ ಮತ್ತು ಇತರ ಭಾಷೆಗಳನ್ನು ಕಲಿಯಲು ಸುಲಭವಾದ ಅಡಿಪಾಯವನ್ನು ಒದಗಿಸುತ್ತದೆ ಎಂದು ಹೇಳಿದರು.
ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆಗಳು ನಾಶವಾದರೆ ನಾವು ಆ ಭಾಷೆಯ ಸಂಸ್ಕೃತಿ ಮತ್ತು ಎಲ್ಲ ಜ್ಞಾನ, ಸಂಪ್ರದಾಯಗಳನ್ನು ಕಳೆದುಕೊಳ್ಳುತ್ತೇವೆ. ಹಾಗಾಗಿ ಮಾತೃಭಾಷಾ ಸಂಸ್ಕೃತಿಯನ್ನು ಪ್ರೋತ್ಸಾಹಿಸಿ, ಉಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ರಾಜು ಕತ್ನಳ್ಳಿ, ಪ್ರವೀಣ ಅರಕೇರಿ, ಆನಂದ ಗಂಗನಳ್ಳಿ, ಜಟಿಂಗರಾಯ ಕಕ್ಕೇರಗೋಳ, ಹನಮಂತ ಹುಣಶ್ಯಾಳ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.
ಮಾತೃಭಾಷೆ ನಮ್ಮ ಕನಸನ್ನು ಅರಳಿಸುವ ಭಾಷೆ. ಅದು ನಮ್ಮ ಮನದ, ಹೃದಯದ ಭಾಷೆ. ಮಾತೃಭಾಷೆ ಮೇಲಿನ ಪ್ರೀತಿ ಪ್ರತಿಯೊಬ್ಬರ ಮನದಲ್ಲೂ ಅಚ್ಚಳಿಯದೆ ಇರುತ್ತದೆ ಎಂದರು.
ಮಾತೃಭಾಷೆಯು ಸಂಸ್ಕೃತಿ-ಭಾವನೆಗಳ ಪ್ರತೀಕ-ಸಂತೋಷ ಬಂಡೆ


