ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಮುಂದುವರಿದ ಧರಣಿ, ರೈತ ಸಂಘದ ಬೆಂಬಲ

ಸಪ್ತಸಾಗರ ವಾರ್ತೆ ವಿಜಯಪುರ, ನ. 9:
ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಎಂದು ಆಗ್ರಹಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಕೈಗೊಂಡ ಅನಿರ್ದಿಷ್ಟ ಧರಣಿ ಸತ್ಯಾಗ್ರಹ 53ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ್ ನಾಗೇಂದ್ರ ಅವರು ಮಾತನಾಡಿ “ಉದ್ದೇಶ ಒಳ್ಳೆದಿದೆ. ಜನರ ಹಿತವಿದೆ. ಅದಕ್ಕೆ ಜನ ಹೋರಾಟವನ್ನು ಪ್ರಾರಂಭ ಮಾಡಿದ್ದಾರೆ. ಬಸವಣ್ಣ ಹುಟ್ಟಿದಂತ ನಾಡಿದು. ಇವತ್ತಿನ ಶಿಕ್ಷಣ ಹಾಗೂ ಆರೋಗ್ಯ ಸರ್ಕಾರದ ಕೈಯಲ್ಲಿ ಇರಬೇಕು. ಖಾಸಗಿ ಅವರ ಕೈಯಲ್ಲಿ ಹೋಗಿ ಇವತ್ತಿನ ಶಿಕ್ಷಣ ಹದಗೆಟ್ಟಿದೆ. ಆರೋಗ್ಯ ಕ್ಷೇತ್ರ ಕೂಡ ಹದಗೆಟ್ಟಿದೆ. ಇಂಥ ಒಂದು ದೊಡ್ಡ ಜಿಲ್ಲೆಯಲ್ಲಿ ಸಾಕಷ್ಟು ಅವಕಾಶ ಇದೆ. ಸರ್ಕಾರಿ ಆಸ್ಪತ್ರೆ ಮಂಜೂರು ಆದ ಜಿಲ್ಲೆಯಲ್ಲಿ ಕೂಡ ಜಾಗ ಇಲ್ಲದೇ ನನೆಗುದಿಗೆ ಬಿದ್ದಿದೆ. ಇಲ್ಲಿ 153 ಎಕರೆ ಜಾಗ ಇದೆ. ಆಸ್ಪತ್ರೆ ಇದೆ. ಇನ್ನೂ ವಿಸ್ತರಣೆ ಮಾಡಿ ಸಂಪೂರ್ಣ ಸರ್ಕಾರಿ ಆಸ್ಪತ್ರೆ ಮಾಡಬೇಕು ಎಂದರು.
ಎರಡು ದಿನಗಳಲ್ಲಿ ರೈತ ಸಂಘದಿಂದ ಮುಖ್ಯಮಂತ್ರಿ ಅವರಿಗೆ ಭೇಟಿ ಮಾಡಿ ನಿಮ್ಮ ಹೋರಾಟದ ಉದ್ದೇಶ ಹಾಗೂ ಸರ್ಕಾರಿ ಕಾಲೇಜಿನ ಅವಶ್ಯಕತೆ ಹಾಗೂ ಇಲ್ಲಿರುವ ಅನುಕೂಲತೆ ಬಗ್ಗೆ ಪತ್ರವನ್ನು ಬರೆಯುತ್ತೇನೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಅಕ್ಕಿ ಮಾತನಾಡಿ, ಹದಿಮೂರು ತಾಲೂಕಿನ ಜಿಲ್ಲೆಯಾದ ವಿಜಯಪುರದಲ್ಲಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ ಎಂದರು.
ಹಿರಿಯ ರೈತ ಮುಖಂಡರಾದ ಪಂಚಪ್ಪ ಕಲ್ಬುರ್ಗಿ, ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರಾದ ಶಿವನಗೌಡ ಪಾಟೀಲ್, ಶಿವನಂದ್ ಕೊಂಡಗುಲಿ, ರಾಜೇಂದ್ರ, ಭೀಮರಾಯ ಪೂಜಾರಿ, ರವಿಕುಮಾರ್, ಗಂಗಪ್ಪ ಮೈತ್ರಿ, ಬಸನಗೌಡ, ಶಬ್ಬೀರ್ ಪಟೇಲ್ ಬಿರಾದಾರ್, ಮಹದೇವಪ್ಪ ತೇಲಿ, ಬಸವರಾಜ್ ರೆಡ್ಡಿ, ಜಯಸಿಂಗ್ ರಜಪೂತ್, ರಾಜೇಸಾಬ್ ನದಾಫ್, ಅಮ್ಮೋಗಿ ಉಕ್ಕಲಿ, ಡಿ.ಎಂ.ನದಾಫ್, ಲಾಯಪ್ಪ ಇಂಗಳೇ, ಪ್ರಭುಲಿಂಗ ಕಾರಜೋಳ, ಸಂತೋಷ್ ಚವ್ಹಾಣ್, ಹನುಮಂತ ಹಾಗೂ ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Share this