ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಆಗ್ರಹಿಸಿ 34ನೇ ದಿನಕ್ಕೆ ಕಾಲಿಟ್ಟ ಧರಣಿ

ಸಪ್ತಸಾಗರ ವಾರ್ತೆ ವಿಜಯಪುರ, ಅ. 21: ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮಂಗಳವಾರ 34ನೇ ದಿನಕ್ಕೆ ಕಾಲಿಟ್ಟಿದೆ.
ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ಪಿಪಿಪಿ (ಪಬ್ಲಿಕ್-ಪ್ರೈವೇಟ್ ಪಾರ್ಟ್ನರ್‌ಶಿಪ್) ಮಾದರಿಯನ್ನು ಕೈಬಿಟ್ಟು ಸಂಪೂರ್ಣ ಸರ್ಕಾರಿ ಹೂಡಿಕೆಯೊಂದಿಗೆ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಒತ್ತಾಯಿಸಿ ಹೋರಾಟಗಾರರು ಜಿಲ್ಲೆಯ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಹೋರಾಟ ನಡೆಸುತ್ತಿದ್ದಾರೆ.
ಈ ಹೋರಾಟಕ್ಕೆ ವಿವಿಧ ಪ್ರಗತಿಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಸ್ಥಳೀಯ ನಾಗರಿಕರು ಪಕ್ಷಾತೀತವಾಗಿ ವ್ಯಾಪಕ ಬೆಂಬಲ ನೀಡುತ್ತಿದ್ದಾರೆ.
ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ), ಕರ್ನಾಟಕ ರಕ್ಷಣಾ ವೇದಿಕೆ, ವಿಶ್ವ ಹಿಂದೂ ಪರಿಷತ್, ಆಮ್ ಆದ್ಮಿ ಪಕ್ಷ ಮುಂತಾದ ಸಂಸ್ಥೆಗಳು ಹೋರಾಟಕ್ಕೆ ಸಾಥ್ ನೀಡಿವೆ.
ವಿಜಯಪುರ ಜಿಲ್ಲೆಯ ಖ್ಯಾತ ನೇತ್ರತಜ್ಞ ಹಾಗೂ ಕಾಂಗ್ರೆಸ್ ಮುಖಂಡ ಪ್ರಭುಗೌಡ ಪಾಟೀಲ (ಲಿಂಗದಳ್ಳಿ) ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ನಾನೂ ಕೂಡ ಜಿಲ್ಲೆಗೆ ಪಿಪಿಪಿ ಬದಲು ಸರ್ಕಾರಿ ವೈದ್ಯಕೀಯ ಕಾಲೇಜು ಆಗಬೇಕು ಎಂದು ಮನವರಿಕೆ ಮಾಡುತ್ತೇನೆ. ಈಗಾಗಲೇ ಮುಖ್ಯಮಂತ್ರಿ ಅವರ ಸಮ್ಮುಖ ಸಚಿವರೊಂದಿಗೆ ಸಕಾರಾತ್ಮಕವಾಗಿ ಚರ್ಚೆಯಾಗಿದೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ( ಶಿವರಾಮೇಗೌಡ ಬಣ) ಮಾತನಾಡಿ, ಪಿಪಿಪಿ ಮಾದರಿಯು ಖಾಸಗಿ ಸಂಸ್ಥೆಗಳ ಲಾಭಕ್ಕೆ ಆದ್ಯತೆ ನೀಡಿ, ಬಡವರಿಗೆ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ದೂರಮಾಡುತ್ತದೆ ಎಂದು ಆರೋಪಿಸಿದರು.
ಹೋರಾಟ ಸಮಿತಿ ಸದಸ್ಯರಾದ ಲಕ್ಷ್ಮಣ ಹಂದ್ರಾಳ ಮಾತನಾಡಿ, ಜಿಲ್ಲೆಯ ಯುವಕರು, ವಿದ್ಯಾರ್ಥಿಗಳು ಮತ್ತು ರೋಗಿಗಳು ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡುವುದರಲ್ಲಿ ಯಾವುದೇ ತೊಂದರೆ ಇಲ್ಲ. ಯಾಕೆ ಸರ್ಕಾರ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಕರಾಳ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಹೋರಾಟಗಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಹೋರಾಟವು ಜಿಲ್ಲೆಯ ಶೈಕ್ಷಣಿಕ ಮತ್ತು ಆರೋಗ್ಯ ಅಭಿವೃದ್ಧಿಗೆ ಅತ್ಯಗತ್ಯವಾದುದು ಎಂದು ಸಮಿತಿಯ ಹೋರಾಟಗಾರರು ಹೇಳಿದ್ದಾರೆ.
ರಾಜ್ಯ ಸರ್ಕಾರ ತಕ್ಷಣವೇ ಹೋರಾಟಗಾರರ ಜೊತೆ ಚರ್ಚೆ ನಡೆಸಿ, ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ
ವಿಜಯಪುರ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಡುತ್ತಿರುವ ಹೋರಾಟ ಸಮಿತಿಯಾಗಿದ್ದು, ಜಿಲ್ಲೆಯ ಜನರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶ ಹೊಂದಿದೆ.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಸದಸ್ಯರಾದ ಅಕ್ರಂ ಮಾಶಾಳಕರ, ಸಿದ್ರಾಮಯ್ಯ ಹಿರೇಮಠ, ಭರತಕುಮಾರ ಎಚ್, ಬಾಬುರಾವ ಬೀರಕಬ್ಬಿ, ಜಗದೇವ ಸೂರ್ಯವಂಶಿ, ಗಿರೀಶ ಕಲಘಟಗಿ, ಸುರೇಶ ಬಿಜಾಪುರ, ಪ್ರಭುಗೌಡ ಪಾಟೀಲ, ಸಿದ್ದರಾಮ ಹಳ್ಳೂರ, ಕಾವ್ಯ ಎಂ.ಟಿ, ಮಲ್ಲಿಕಾರ್ಜುನ ಎಚ್.ಟಿ, ಗೀತಾ ಎಚ್, ಸುಶೀಲಾ ಮಿಣಜಗಿ, ಲಕ್ಷ್ಮಣ ಹಂದ್ರಾಳ, ಮೊಹಮ್ಮದ್ ಇಕ್ಬಾಲ್ ಅವಟಿ, ಶೇಷರಾವ ಮಾನೆ, ಕಿರಣ ಮೇಲಿನಕೇರಿ ಮತ್ತಿತರರು ಇದ್ದರು.

Share this