ಸಪ್ತಸಾಗರ ವಾರ್ತೆ,ವಿಜಯಪುರ, ಆ. 25: ಆರ್ಥಿಕ ಅಭಿವೃದ್ಧಿಯಲ್ಲಿ ರೈತರು ಮತ್ತು ಕೃಷಿಯ ಪಾತ್ರ ಮುಖ್ಯವಾಗಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಸೋಮವಾರ ಬಬಲೇಶ್ವರ ತಾಲೂಕಿನ ಹೆಬ್ಬಾಳಟ್ಟಿ ಗ್ರಾಮದಲ್ಲಿ ನೂತನ ಶ್ರೀ ನಂದಿ ಬಸವೇಶ್ವರ ದೇವಸ್ಥಾನ ಉದ್ಘಾಟನೆ ಮತ್ತು ಕಳಸಾರೋಹಣದ ಅಂಗವಾಗಿ ಆಯೋಜಿಸಲಾಗಿದ್ದ ಕುಂಭಮೇಳ ಹಾಗೂ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಚಿವ ಎಂ. ಬಿ. ಪಾಟೀಲ ಅವರು ಮಾಡಿರುವ ನೀರಾವರಿಯಿಂದಾಗಿ ಜಿಲ್ಲೆಯ ಚಿತ್ರಣ ಬದಲಾಗಿದೆ. ವಿಜಯಪುರ ರಾಜ್ಯದಲ್ಲಿ ಶ್ರೀಮಂತ ಜಿಲ್ಲೆಗಳಲ್ಲಿ ಒಂದಾಗುವ ಕಾಲ ಬಂದಿದೆ. ನೀರಾವರಿಯಿಂದಾಗಿ ರೈತರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ರೈತರಲ್ಲಿ ಖರೀದಿ ಸಾಮರ್ಥ್ಯ ಹೆಚ್ಚುತ್ತಿರುವುದರಿಂದ ಕಿರಾಣಿ ವ್ಯಾಪಾರ, ಹೊಟೇಲುಗಳು, ರಸಗೊಬ್ಬರ ವ್ಯಾಪಾರ ಸೇರಿದಂತೆ ವ್ಯಾಪಾರ ವಹಿವಾಟಿದಾರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತಿದೆ. ಇದು ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೂ ಕೊಡುಗೆ ನೀಡುತ್ತಿದೆ. ಆರ್ಥಿಕವಾಗಿ ಸಬಲರಾಗುತ್ತಿರುವ ರೈತರು ತಮ್ಮ ಕುಟುಂಬಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮನಗೂಳಿ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಕಾಖಂಡಕಿ ಶ್ರೀ ಗುರುದೇವ ಆಶ್ರಮದ ಶ್ರೀ ಶಿವಯೋಗಿಶ್ವರ ಸ್ವಾಮಿಗಳು, ಗುಣದಾಳ ಶ್ರೀ ಕಲ್ಯಾಣೇಶ್ವರ ಮಠದ ಡಾ. ವಿವೇಕಾನಂದ ದೇವರು, ಹೆಬ್ಬಾಳಟ್ಟಿ ಶ್ರೀ ಚಂದ್ರಗಿರಿ ಸಿದ್ರಾಮೇಶ್ವರ ಮಠದ ಶ್ರೀ ಸಿದ್ದಲಿಂಗಯ್ಯ ರು. ಹಿರೇಮಠ, ಅರ್ಜುಣಗಿಯ ಶಿವಕುಮಾರ ಮಠ, ಹೆಬ್ಬಾಳಟ್ಟಿಯ ಶಣ್ಮುಖಯ್ಯ ಮಠಪತಿ, ಸಿದ್ದರಾಮ ಮ. ಕಾಖಂಡಕಿ ಮುಂತಾದವರು ಉಪಸ್ಥಿತರಿದ್ದರು.
ಆರ್ಥಿಕ ಅಭಿವೃದ್ಧಿಯಲ್ಲಿ ರೈತರು ಮತ್ತು ಕೃಷಿಯ ಪಾತ್ರ ಮುಖ್ಯ: ಸುನೀಲಗೌಡ ಪಾಟೀಲ


