ಸಪ್ತಸಾಗರ ವಾರ್ತೆ, ವಿಜಯಪುರ, ಜ.1: ಕುವೆಂಪು ರಚಿಸಿದ ಕನ್ನಡದ ನಾಡಗೀತೆ ಕನ್ನಡಿಗರ, ಕನ್ನಡ ಸಾಹಿತ್ಯದ ಶ್ರೀಮಂತ ಸಂಸ್ಕೃತಿ ಕರ್ನಾಟಕದ ಸ್ವಾಭಿಮಾನ ಮತ್ತು ಘನತೆ, ಇತಿಹಾಸ, ಭೂಗೋಳ ವೈವಿಧ್ಯತೆಯನ್ನು ಸಾರುವ ನಮ್ಮೆಲ್ಲರ ಹೆಮ್ಮೆಯ ನಾಡಗೀತೆ ಜಯ ಭಾರತ ಜನನಿಯ ತನುಜಾತೆಗೆ ನೂರು ವರುಷಗಳು ಸಂದಿದ್ದು ಕನ್ನಡಿಗರಿಗೆ ಸ್ವಾಭಿಮಾನದ ಸಂಕೇತ ಎಂದು ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಎನ್.ಎಂ. ಬಿರಾದಾರ ಅಭಿಪ್ರಾಯಪಟ್ಟರು.
ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಿಟ್ಟಿನಹಳ್ಳಿ ಪಿ.ಕೆ.ಪಿ.ಎಸ್ ಸಹಯೋಗದಲ್ಲಿ ಜರುಗಿದ ಕುವೆಂಪುರವರ ಜನ್ಮ ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ ಹಾಗೂ ನಾಡಗೀತೆಗೆ ನೂರರ ಸಂಭ್ರಮ ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕವು ದೇಶದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದ್ದು, ಸರ್ವ ಜನಾಂಗದ ಶಾಂತಿಯ ತೋಟವೆಂದು ಬಣ್ಣಿಸುವುದರೊಂದಿಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ, ಜೈನ್ ರಂತಹ ವಿವಿಧ ಸಮುದಾಯಗಳ ಸಹಬಾಳ್ವೆಯನ್ನು ಸಾರುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕುವೆಂಪುರವರು ಕನ್ನಡಾಂಬೆಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ತಂದುಕೊಡುವ ಮೂಲಕ ಕನ್ನಡ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅದ್ಭುತವಾದ ಕನ್ನಡದ ನಾಡಗೀತೆಗೆ ನೂರು ವರುಷಗಳು ಸಂದಿದ್ದು,ಅದರ ಸಂಭ್ರಮಾಚರಣೆಗೆ ಇಂದು ಕನ್ನಡನಾಡು ಅಣಿಯಾಗಿರುವುದು ಸಂತಸದ ಸಂಗತಿ ಎಂದರು.
ಕುವೆಂಪುರವರ ವಿಶ್ವಮಾನವ ಕಲ್ಪನೆ ಹಾಗೂ ನಾಡಗೀತೆಗೆ ನೂರರ ಸಂಭ್ರಮ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಪಿ.ಡಿ.ಜೆ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಸಂತೋಷ ಕುಲಕರ್ಣಿ ಮಾತನಾಡಿ, ಕುವೆಂಪುರವರ ಆತ್ಮಕಥನ ನೆನಪಿನ ದೋಣಿಯಲ್ಲಿನ ಅನೇಕ ದೃಷ್ಟಾಂತಗಳನ್ನು ಮೆಲುಕು ಹಾಕಿದ ಅವರು ಕನ್ನಡದ ನಾಡಗೀತೆ ಕನ್ನಡಿಗರ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕುವೆಂಪುರವರ ವಾಣಿಯನ್ನು ಮೆಲುಕು ಹಾಕುತ್ತ ಕುವೆಂಪುರವರ ಜೀವನದ ಯಶೋಗಾಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಹಕಾರಿ ಧುರೀಣ ರಾಜೇಂದ್ರ ಕೊರಡ್ಡಿ. ಪಿ ಕೆ ಪಿ ಎಸ್ ಬ್ಯಾಂಕಿನ ವ್ಯವಸ್ಥಾಪಕ ಮಲ್ಲಿಕಾರ್ಜುನ ನಾಗಶೆಟ್ಟಿ. ಬ್ಯಾಂಕಿನ ನಿರ್ದೇಶಕರಾದ ಸುಭಾಷ ಯಂಭತ್ನಾಳ, ಮಹಮ್ಮದ ಹುಸೇನ ವಾಲಿಕಾರ, ಗುರುಲಿಂಗಪ್ಪ ನಾಟಿಕಾರ, ಸುಭಾಷ ಚವ್ವಾಣ ವೇದಿಕೆಯ ಮೇಲಿದ್ದರು.
ಡಾ. ವಿ.ಡಿ ಐಹೊಳ್ಳಿ, ಡಾ. ಸಂಗಮೇಶ ಮೇತ್ರಿ, ಎ.ಡಿ. ಮುಲ್ಲಾ, ಕವಿತಾ ಕಲ್ಯಾಣಪ್ಪಗೋಳ, ಪಾಂಡುರಂಗ ಕುಲಕರ್ಣಿ, ಆರ್.ಬಿ. ಬಿರಾದಾರ, ಚಂದ್ರಶೇಖರ ಮಲಘಾಣ, ದುಂಡಪ್ಪ ಬಗಲಿ, ಮುದಸ್ಸರ ವಾಲಿಕಾರ, ಸಂಗನಗೌಡ ಬಿರಾದಾರ, ಚಂದ್ರಾಮಪ್ಪ ಯಾಳವಾರ, ಮಲ್ಲಿಕಾರ್ಜುನ ಬಿರಾದಾರ, ಸಂಗಮೇಶ ಕವಡಿಮಟ್ಟಿ ಉಪಸ್ಥತರಿದ್ದರು.
ಶಶಿಕಲಾ ನಾಯ್ಕೋಡಿ ಹಾಗೂ ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಡಾ. ಮಾಧವ ಗುಡಿ ಸ್ವಾಗತಿಸಿ ಗೌರವಿಸಿದರು. ಡಾ. ಆನಂದ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಮಮತಾ ಮುಳಸಾವಳಗಿ ನಿರೂಪಿಸಿದರು. ಕಲ್ಯಾಣಪ್ಪಗೋಳ ವಂದಿಸಿದರು.
ನಾಡಗೀತೆ ಕರ್ನಾಟಕದ ಶ್ರೇಷ್ಠತೆ ಗೌರವದ ಸಂಕೇತ – ಎನ್.ಎಂ.ಬಿರಾದಾರ ಅಭಿಮತ


