ಸಪ್ತಸಾಗರ ವಾರ್ತೆ, ವಿಜಯಪುರ, ಡಿ. 12: ಕುವೆಂಪು ರಚಿಸಿದ ನಾಡಗೀತೆಯು ಕನ್ನಡಿಗರ ಹೃದಯದ ನಾದವಾಗಿದ್ದು, ನಾಡಿನ ಶ್ರೀಮಂತ ಸಂಸ್ಕೃತಿ, ಇತಿಹಾಸ, ಭೂಗೋಳ, ವೈವಿಧ್ಯತೆಯನ್ನು ಸಾರುವ ಒಂದು ಅಮರ ಗೀತೆಯಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಶಿವಚಂದ್ರ ಕತ್ನಳ್ಳಿ ಹೇಳಿದರು.
ಶುಕ್ರವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ‘ನಾಡಗೀತೆಯ ನೂರರ ಹಾಗೂ ವಂದೇ ಮಾತರಂ ಗೀತೆಯ ನೂರೈವತ್ತರ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾಡಗೀತೆಯು ಕರ್ನಾಟಕದ ಸ್ವಾಭಿಮಾನ ಮತ್ತು ಘನತೆಯನ್ನು ಎತ್ತಿ ಹಿಡಿಯುತ್ತದೆ. ಆತ್ಮವಿಶ್ವಾಸ ಮತ್ತು ಶಕ್ತಿಯ ಸ್ಥಾನದಿಂದ ತನ್ನ ಗುರುತನ್ನು ಕಾಪಾಡಿಕೊಳ್ಳುವಂತೆ ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಉಪನ್ಯಾಸ ನೀಡಿ ಮಾತನಾಡುತ್ತಾ,
“ಭಾರತ ಮಾತೆಯ ಮಗಳು”-ಕರ್ನಾಟಕವು ದೇಶದ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟವೆಂದು ಬಣ್ಣಿಸುವುದರೊಂದಿಗೆ ಹಿಂದೂ, ಕ್ರಿಶ್ಚಿಯನ್, ಮುಸ್ಲಿಮ್, ಪಾರ್ಸಿ, ಜೈನರಂತಹ ವಿವಿಧ ಸಮುದಾಯಗಳ ಸಹಬಾಳ್ವೆಯನ್ನು ಸಾರುತ್ತದೆ ಎಂದು ಹೇಳುತ್ತಾ, ವಂದೇ ಮಾತರಂ ಗೀತೆಯು ಮಾತೃಭೂಮಿಗೆ ನಮನವನ್ನು ಮಾತ್ರ ಸೂಚಿಸದೆ, ತ್ಯಾಗ, ಧೈರ್ಯ ಮತ್ತು ರಾಷ್ಟ್ರದ ಬಗೆಗೆ ಅತ್ಯುನ್ನತ ಪ್ರೇಮದ ಭಾವನೆಯನ್ನು ಸಾರುತ್ತದೆ ಎಂದು ಹೇಳಿದರು.
ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ನಾಡಗೀತೆಯು ಕರ್ನಾಟಕದ ಇತಿಹಾಸ, ಸಂಸ್ಕೃತಿ, ನೆಲ, ಜಲ, ವೈವಿಧ್ಯತೆ, ಭವ್ಯ ಪರಂಪರೆಯನ್ನು ಸಾರುವ ಗೀತೆಯಾಗಿದ್ದು, ಕನ್ನಡಿಗರ ಭಾವನಾತ್ಮಕ ಏಕತೆ ಮತ್ತು ಅಸ್ಮಿತೆಯ ಸಂಕೇತವಾಗಿದೆ.ಈ ಗೀತೆಯಲ್ಲಿ ನಾಡು, ನುಡಿ, ಭಾಷೆ, ಸಹಬಾಳ್ವೆ, ಆತ್ಮವಿಶ್ವಾಸ, ಶಕ್ತಿ, ಘನತೆಯನ್ನು ಕಾಪಾಡಿಕೊಳ್ಳುವ ಕರ್ನಾಟಕದ ಹೆಮ್ಮೆಯನ್ನು ವರ್ಣಿಸಲಾಗಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ, ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ, ಜಯಶ್ರೀ ಬಂಗಾರಿ,ಲಕ್ಷ್ಮೀ ಮಸೂತಿ, ನವೀನ ಬಂಡೆನವರ, ಸಚೀನ ಅವಟಿ, ಸಿದ್ದು ರತ್ನಾಕರ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.
ನಾಡಗೀತೆ ಕರ್ನಾಟಕದ ಶ್ರೇಷ್ಠತೆ,ಗೌರವದ ಸಂಕೇತ-ಶಿವಚಂದ್ರ ಕತ್ನಳ್ಳಿ


