ಸಪ್ತಸಾಗರ ವಾರ್ತೆ, ವಿಜಯಪುರ, ಜ. 11: ಕನ್ನಡ ಸಾಹಿತ್ಯದ ಪ್ರಮುಖ ಘಟ್ಟವಾಗಿರುವ ದಾಸ ಸಾಹಿತ್ಯ ಹಲವಾರು ಶ್ರೇಷ್ಠವಾದ ಜೀವನ ಮೌಲ್ಯಗಳನ್ನು ಹೊಂದಿ ಮಾರ್ಗದರ್ಶನ ಮಾಡುತ್ತಾ ಹೋಗುತ್ತದೆ. ಕನಕದಾಸರು ಪುರಂದರದಾಸರು ಈ ಸಾಹಿತ್ಯದ ಶ್ರೇಷ್ಠರಾಗಿದ್ದು ಅವರ ಕೀರ್ತನೆಗಳು ಬದುಕಿನ ದಾರಿಗೆ ದೀಪಗಳಾಗಿವೆ ಎಂದು ಚೇತನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಸಾಹಿತಿ ಪ್ರೊ. ಎ. ಎಚ್. ಕೊಳಮಲಿ ಇಂದಿಲ್ಲಿ ಅಭಿಪ್ರಾಯಪಟ್ಟರು. ನಗರದ ಆಶ್ರಮ ರಸ್ತೆಯ ಐಶ್ವರ್ಯ ಬಡಾವಣೆಯ ವರದಾಂಜನೇಯ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡ 550 ನೇ ಮಹಾ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಜೀವನದಲ್ಲಿ ತಲ್ಲಣಗಳಿರುತ್ತವೆ. ಅವುಗಳನ್ನು ಎದುರಿಸುತ್ತಾ ನಾವು ಸಮಾಧಾನದಿಂದಿರಬೇಕು. ಮಾನವ ಜನ್ಮ ದೊಡ್ಡದಾಗಿದೆ. ಇದನ್ನು ಹಾನಿ ಮಾಡಿಕೊಳ್ಳದೆ ಮೌಲ್ಯಗಳ ಜೊತೆಗೂಡಿ ಸಾರ್ಥಕತೆಯನ್ನು ಮೆರೆಯಬೇಕು. ಇದಕ್ಕೆ ಭಕ್ತಿಯೇ ಊರುಗೋಲು. ಆ ದಾರಿಯಲ್ಲಿ ನಾವು ನಡೆದಾಗ ನಮಗೆ ಶಾಂತಿ, ನೆಮ್ಮದಿ ಸಿಗುತ್ತದೆ. ಇದಕ್ಕೆ ಕನಕದಾಸರ, ಪುರಂದರದಾಸರ, ಜಗನ್ನಾಥದಾಸರ, ಕೀರ್ತನೆಗಳು ಸಾಕ್ಷಿಯಾಗಿವೆ ಎಂದು ಅವರು ತಿಳಿಸಿದರು.
ವೈಚಾರಿಕತೆಯನ್ನು ಅಳವಡಿಸಿಕೊಂಡ ಭಕ್ತಿ ಶ್ರೇಷ್ಠತೆ ಮೆರೆಯುವ ಕೀರ್ತನೆಗಳು ದಾಸ ಸಾಹಿತ್ಯದಲ್ಲಿವೆ. ಅವುಗಳನ್ನು ವಿಶ್ಲೇಷಣಾಮುಖಿಯಾಗಿ ಓದುವ ಹಾಗೂ ಬದುಕಿನಲ್ಲಿ ಅಳವಡಿಸಿಕೊಳ್ಳುವದು ಅಗತ್ಯವಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವ್ಹಿ. ಸಿ. ನಾಗಠಾಣ ಅವರು ಮಾತನಾಡಿ, ಇಂದಿನ ಆಧುನಿಕರಣ ಬದುಕು ಮೌಲ್ಯಗಳನ್ನು ದೂರ ಸರಿಸಿ ವಿಸ್ತಾರವಾಗುತ್ತಿದೆ. ಸೌಲಭ್ಯಗಳು ಸಿಗುತ್ತಿದ್ದು ಸಂತೃಪ್ತಿ ದೂರವಾಗುತ್ತಿದೆ. ಇದಕ್ಕೆ ನಮ್ಮ ಸಾಹಿತ್ಯದ ಅಧ್ಯಯನ ದಿವ್ಯ ಔಷಧವಾಗಿದೆ. ಜೊತೆಗೆ ಟಿವಿ ಮತ್ತು ಮೊಬೈಲ್ ನ್ನು ಬೇಕಾದಷ್ಟು ಮಾತ್ರ ಬಳಸಬೇಕು. ಅವುಗಳ ದಾಸರಾಗಬಾರದೆಂದು ಕರೆ ನೀಡಿದರು. ಜೀವನ ಅನುಭವದ ಅನೇಕ ಮೌಲಿಕ ಮಾತುಗಳನ್ನು ಸಭೆಗೆ ಹಂಚಿಕೊಂಡರು.
ಕಾರ್ಯಕ್ರಮದ ಭಕ್ತಿ ಸೇವೆಯನ್ನು ನೆರವೇರಿಸಿದ ಐಶ್ವರ್ಯ ನಗರದ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷ ಹಾಗೂ ನ್ಯಾಯವಾದಿ ವಿವೇಕ ಹುಂಡೇಕಾರ ಅವರು ಮಾತನಾಡಿ, ನಮ್ಮ ಬದುಕು ಸಮಾಜಮುಖಿಯಾಗಿ, ಸಾಹಿತ್ಯ ಮುಖಿಯಾಗಿ ಸಾಗಿದಾಗ ನೆಮ್ಮದಿ ಸಿಗುತ್ತದೆ. ನಮ್ಮ ದುಡಿಮೆಯ ಜೊತೆಗೆ ದಾಸೋಹದ ನೀತಿಯನ್ನು ಅನುಸರಿಸುವದು ಮುಖ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಸುನೀತಾ ಬಿರಾದಾರ ಪ್ರಾರ್ಥನಾ ಗೀತೆಯನ್ನು ಹಾಡಿದರು. ಸಾಹಿತಿಗಳಾದ ಡಾ. ಮಲ್ಲಿಕಾರ್ಜುನ ಮೇತ್ರಿ ಅವರು ಸರ್ವರನ್ನು ಸ್ವಾಗತ ಕೋರಿ, ಪ್ರಾಸ್ತಾವಿಕವಾಗಿ ಮಾತನಾಡಿ, ಸತ್ಸಂಗದ ಮಹತ್ವವನ್ನು ವಿವರಿಸಿದರು. ವಿಶ್ರಾಂತ ಪ್ರಾಚಾರ್ಯ ಎಂ. ಓ. ಶಿರೂರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾರಂಭದಲ್ಲಿ ಮಾರುತಿ ದೇವಸ್ಥಾನದ ಅರ್ಚಕ ಮಲ್ಲಯ್ಯಸ್ವಾಮಿ ಹಿರೇಮಠ, ಮಾರುತಿ ಸೇವಾ ಸಮಿತಿ ಅಧ್ಯಕ್ಷ ಬಿ. ಎನ್. ಬಿರಾದಾರ, ಎಸ್. ಕೆ. ಬಿರಾದಾರ. ಎಂ ಕೆ. ಬಿಸನಾಳ, ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ವೀರಣ್ಣ ಹುಂಡೇಕಾರ, ಚಂದ್ರಶೇಖರ ಸರಸಂಬಿ, ಡಾ. ಆರ್. ಎನ್. ದಿಂಡೂರ, ಬಿ. ವ್ಹಿ. ಪಾಟೀಲ, ಸುನೀಲ ಒಣರೊಟ್ಟಿ, ಜಿ. ಬಿ. ಪಟ್ಟಣದ, ಈರಣ್ಣ ಹುಲಸೂರ, ಬಸವರಾಜ ಕಣಬೂರ, ರಾಜಣ್ಣ ಜಕ್ಕೊಂಡಿ, ಮಧು ಕಲಾದಗಿ, ಅಶೋಕ ಗಣಕುಮಾರಮಠ, ನಾನಾಗೌಡ ಪಾಟೀಲ, ಅಶೋಕ ಬನ್ನಟ್ಟಿ, ಅಶೋಕ ದೇಶಟ್ಟಿ, ಜಿ. ಡಿ. ಬಾಗೇವಾಡಿ, ರಾಮಗೊಂಡಪ್ಪ ಗುದ್ದಿ ಮುಂತಾದ ಬಡಾವಣೆಯ ಗಣ್ಯರು ಉಪಸ್ಥಿತರಿದ್ದರು.
ದಾಸ ಸಾಹಿತ್ಯದಲ್ಲಿ ಶ್ರೇಷ್ಠ ಜೀವನ ಮೌಲ್ಯಗಳಿವೆ-ಸಾಹಿತಿ ಪ್ರೊ. ಎ. ಎಚ್. ಕೊಳಮಲಿ


