ಸಪ್ತಸಾಗರ ವಾರ್ತೆ ವಿಜಯಪುರ, ಜು. 12
ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಾಗಿ ವ್ಯಾಪಾರ (ಆಕ್ಷನ್) ನಡೆದಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆರೋಪಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ದೆಹಲಿಯಲ್ಲಿ ಕುಳಿತಿದ್ದಾರೆ ಎಂದು ಟೀಕಿಸಿದರು.
ಡಿಕೆಶಿ ಹಾಗೂ ಸಿದ್ದರಾಮಯ್ಯ ಸಿಎಂ ಕುರ್ಚಿಗಾಗಿ ಎಷ್ಟು ಕೋಟಿ ಕೊಡುತ್ತಾರೆ. ಮೂರನೇ ವ್ಯಕ್ತಿ ಎಷ್ಟು ಕೋಟಿ ಕೊಡುಬಹುದು ಎನ್ನುವ ವ್ಯಾಪಾರ (ಆಕ್ಷನ್) ನಡೆದಿದೆ ಎಂದು ಛೇಡಿಸಿದರು.
ದೇಶದಲ್ಲಿ ಎಲ್ಲಿಯೂ ಕಾಂಗ್ರೆಸ್ ಆಧಿಕಾರದಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹಣವಿಲ್ಲ. ಹಾಗಾಗಿ ಈ ಆಕ್ಷನ್ ಕರೆದಿದ್ದಾರೆ ಎಂದು ಕುಟುಕಿದರು.
ಡಿಕೆಶಿಗೆ ಹೆಚ್ಚಿನ ಬಲವಿಲ್ಲ.ಐದು ವರ್ಷ ನಾನೇ ಸಿಎಂ ಆಗಿರುತ್ತೇನೆಂಬ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಅವರು ದೆಹಲಿ ಬಿಟ್ಟು ರಾಜ್ಯಕ್ಕೆ ಬಂದು ಜನಪರ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿದ್ದರೂ ಸಿಎಂ, ಡಿಸಿಎಂ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ ಎಂದರು.
ರಾಜ್ಯದ 10 ಮಹಾನಗರ ಪಾಲಿಕೆಗಳಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಹೋರಾಟ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಈ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ರಾಜ್ಯದಲ್ಲಿ ಸರ್ಕಾರ ಜೀವಂತವಾಗಿಲ್ಲ ಎಂದು ಯತ್ನಾಳ್ ಟೀಕಿಸಿದರು.
ಸಿಎಂ ಕುರ್ಚಿ ಕಚ್ಚಾಟ ವಿಚಾರದಲ್ಲಿ ಬಿಜೆಪಿಯವರ ಕೆಲಸವಿಲ್ಲ.ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಾಗಿದೆ ಎಂದರು.
ಸಿಎಂ ಯಾರಾಗಬೇಕೆಂಬುದನ್ನು ಒಂದು ದಿನದಲ್ಲಿ ಮುಗಿಸಿಕೊಳ್ಳಬೇಕು.
ಸಿಎಂ ಬದಲಾವಣೆ ಮಾಡುವುದು ಬಿಡುವುದು ಅವರ ಪಕ್ಷಕ್ಕೆ ಬಿಟ್ಟಿದ್ದು ಎಂದು ತಿಳಿಸಿದರು.
ನಿಮಗೆ ಭಯ ಇರುವುದಕ್ಕೆ, ಕುರ್ಚಿ ಅಲುಗಾಡುತ್ತಿರುವ ಕಾರಣ ದೆಹಲಿಯಲ್ಲಿ ಕೂತಿದ್ದೀರಿ ಎಂದು ಯತ್ನಾಳ್ ಸಿಎಂ, ಡಿಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಕೂಡಲೇ ದೆಹಲಿಯಿಂದ ಬೆಂಗಳೂರಿಗೆ ಬಂದು ಜನರ ಕೆಲಸಗಳನ್ನು ಮಾಡುವ ಕಡೆಗೆ ಸಿಎಂ, ಡಿಸಿಎಂ ಇನ್ನಾದರೂ ಗಮನ ಹರಿಸಬೇಕು ಎಂದು ಯತ್ನಾಳ್ ಒತ್ತಾಯಿಸಿದರು.
ಕಾಂಗ್ರೆಸಿನಲ್ಲಿ ಸಿಎಂ ಕುರ್ಚಿಗೆ ವ್ಯಾಪಾರ ನಡೆದಿದೆ- ಯತ್ನಾಳ್ ಆರೋಪ
