ಸಪ್ತಸಾಗರ ವಾರ್ತೆ ವಿಜಯಪುರ, ಸೆ. 19: ಸಚಿವ ಸಂಪುಟ ಸಭೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಮರುಸಮೀಕ್ಷೆ ಕುರಿತು ಸೌಹಾರ್ದಯುತ ಚರ್ಚೆ ನಡೆದಿದೆ ಹೊರತು ಯಾವುದೇ ರೀತಿ ಗದ್ದಲ, ಗೊಂದಲ ಉಂಟಾಗಿಲ್ಲ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಮೇಜು ಗುದ್ದಿ ಮಾತನಾಡಿದ್ದೇನೆ. ಪೇಪರ್ ಹರಿದು ಹಾಕಲಾಗಿದೆ. ಸಭೆಯಲ್ಲಿ ಸೌಹಾರ್ದಯುತವಾಗಿ ಚರ್ಚೆ ನಡೆದಿದೆ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಸಭೆಯಲ್ಲಿ ಇರಲಿಲ್ಲ. ಆದರೂ ಅವರು ಏರು ದನಿಯಲ್ಲಿ ಮಾತನಾಡಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪಾಗಿ ವರದಿ ಮಾಡಲಾಗಿದೆ. ಆದರೆ, ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದಂತೆ ಕೆಲವು ಗೊಂದಲಗಳ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಅದನ್ನು ಪರಿಹರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಇದು ಜಾತಿ ಗಣತಿಯಲ್ಲ. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ. ಆದರೆ, ಬಹಳಷ್ಟು ಜನ ಇದನ್ನು ಜಾತಿಗಣತಿ ಎಂದು ತಪ್ಪು ಭಾವಿಸಿದ್ದಾರೆ. ಕೇಂದ್ರ ಸರಕಾರ ಜಾತಿ ಗಣತಿ ಸಮೀಕ್ಷೆ ನಡೆಸುತ್ತದೆ. ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ ಅಧ್ಯಯನ ನಡೆಸಿ ಅವರಿಗೆ ಸರಕಾರಿ ಯೋಜನೆ ತಲುಪಿಸುವ ಸದುದ್ದೇಶ ಹೊಂದಿದೆ. ಈ ಸಮೀಕ್ಷೆಯನ್ನು ಮುಂದೂಡುವ ಪ್ರಶ್ನೆಯಿಲ್ಲ. ಶಾಲಾ ರಜಾ ದಿನಗಳ ಇರುವುದರಿಂದ ಶಿಕ್ಷಕರು ಸಮೀಕ್ಷೆ ನಡೆಸಲು ಈ ಸಮಯ ನಿಗದಿಯಾಗಿದೆ. ಅಲ್ಲದೇ, ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಇದರಿಂದ ಅನುಕೂಲವಾಗಲಿದೆ. ಈ ಸಮೀಕ್ಷೆ ಮೂಲಕ ರಾಜ್ಯದ ಜನತೆಗೆ ಒಳಿತನ್ನು ಮಾಡುವ ಕೆಲಸ ಸಿಎಂ ನೇತೃತ್ವದ ನಮ್ಮ ಸರಕಾರ ಮಾಡಲಿದೆ. ಇದರಲ್ಲಿ ಯಾರೂ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದು ಸಚಿವ ಎಂ. ಬಿ. ಪಾಟೀಲ ಹೇಳಿದರು.
ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಗದ್ದಲವಿಲ್ಲ :ಎಂ. ಬಿ. ಪಾಟೀಲ
