ಸಪ್ತಸಾಗರ ವಾರ್ತೆ,ಬಾಗಲಕೋಟೆ, ಮಾ. 23:
“ಎರಡು ವಿಚಾರಕ್ಕೆ ಈ ಉಪಚುನಾವಣೆ ನಡೆಯಲಿದೆ. ಇದು ಧರ್ಮ ಹಾಗೂ ಅಧರ್ಮ, ಸತ್ಯ ಹಾಗೂ ಸುಳ್ಳಿನ ನಡುವಣ ಚುನಾವಣೆಯಾಗಿದೆ. ಬಿಜೆಪಿಯವರು ಏನಿದ್ದರೂ ಸುಳ್ಳು ಆಶ್ವಾಸನೆ ನೀಡುವುದು. ಆದರೆ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿದೆ. ಬಸವಣ್ಣನವರ ನಾಡಿನಲ್ಲಿ ನುಡಿದಂತೆ ನಡೆಯುತ್ತೇವೆ. ಎಲ್ಲಾ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.
ಬಾಗಲಕೋಟೆ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ನಾಮಪತ್ರ ಸಲ್ಲಿಕೆ ಬಳಿಕ ಶಿವಕುಮಾರ್ ಅವರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.
“ಇತ್ತೀಚೆಗಷ್ಟೇ ನಾವು ಮೆಡಿಕಲ್ ಕಾಲೇಜು ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಲು ನಾವಿಲ್ಲಿಗೆ ಬಂದಿದ್ದೆವು. ಖಾಸಗಿ ಮೆಡಿಕಲ್ ಕಾಲೇಜಿನಿಂದ ಬಡವರಿಗೆ ಅನುಕೂಲವಾಗುತ್ತಿರಲಿಲ್ಲ. ಎಂಬ ಕಾರಣಕ್ಕೆ ಮೇಟಿ ಅವರು ಈ ಭಾಗಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಕೇಳುತ್ತಿದ್ದರು. ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಸುಲಿಗೆ ನಡೆಯುತ್ತದೆ ಹೊರತು, ಬಡವರಿಗೆ ನೆರವಾಗುವುದಿಲ್ಲ ಎಂಬ ಕಾರಣಕ್ಕೆ ಮೇಟಿ ಅವರು ಸಚಿವರು ಹಾಗೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಈ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅನುಮತಿ ಪಡೆದಿದ್ದರು. ನಂತರ ಬಂದ ಬಿಜೆಪಿ ಸರ್ಕಾರ ಈ ಮೆಡಿಕಲ್ ಕಾಲೇಜಿಗೆ ಜೀವ ನೀಡಿರಲಿಲ್ಲ. ಅವರು ತಮಗೆ ಬೇಕಾದ ಕಡೆ ಮಾಡಿದ್ದರು. ಇಲ್ಲಿ ಬಿಜೆಪಿ ಶಾಸಕರಿದ್ದರೂ ಮೆಡಿಕಲ್ ಕಾಲೇಜು ನೀಡಿರಲಿಲ್ಲ” ಎಂದು ಹರಿಹಾಯ್ದರು.
“ಚುನಾವಣೆಗೂ ಮುನ್ನ, ಚುನಾವಣೆ ನಂತರ ನಾವು ಕೊಟ್ಟ ಭರವಸೆಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ. ನಾವು ಕೊಟ್ಟ ಮಾತಿನಂತೆ ಇಲ್ಲಿಗೆ ಬಂದು ಮೆಡಿಕಲ್ ಕಾಲೇಜು ಆರಂಭಕ್ಕೆ ಭೂಮಿ ಪೂಜೆ ಮಾಡಿದ್ದೇವೆ. ಈ ರಾಜ್ಯದಲ್ಲಿ 1.23 ಕೋಟಿ ಮನೆಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಬಡವರಿಗೆ ಉಚಿತವಾಗಿ ಅಕ್ಕಿ ನೀಡುತ್ತಿದ್ದೇವೆ. ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಇಂತಹ ಒಂದೇ ಒಂದು ಕಾರ್ಯಕ್ರಮ ಮಾಡಲಿಲ್ಲ. ಹೀಗಾಗಿ ಬಿಜೆಪಿಯವರಿಗೆ ಮತ ಕೇಳುವ ಹಕ್ಕಿಲ್ಲ, ಅವರು ಸ್ವಾಭಿಮಾನ ಕಳೆದುಕೊಂಡಿದ್ದಾರೆ. ಜನರ ಪರವಾಗಿ ಅವರ ಕಷ್ಟ ಸುಖದಲ್ಲಿ ಭಾಗಿಯಾಗಿರುವ ಉಮೇಶ್ ಮೇಟಿ ಅವರ ಜತೆಗೆ ಇಡೀ ಸರ್ಕಾರ ನಿಲ್ಲಲಿದೆ” ಎಂದು ಭರವಸೆ ನೀಡಿದರು.
“ನೀವೆಲ್ಲರೂ ಸೇರಿ ಅತಿ ಹೆಚ್ಚು ಮತಗಳಿಂದ ಉಮೇಶ್ ಮೇಟಿ ಅವರನ್ನು ಆಯ್ಕೆ ಮಾಡಬೇಕು. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದ ಚರಂತಿಮಠ ಅವರು ಕೂಡ ನಮಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ” ಎಂದು ತಿಳಿಸಿದರು.
ಎಲ್ಲರ ಒಮ್ಮತದಿಂದ ಉಮೇಶ್ ಮೇಟಿ ಅವರಿಗೆ ಪಕ್ಷದಿಂದ ಟಿಕೆಟ್
ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, “ಎಲ್ಲರ ಅಭಿಪ್ರಾಯ ಪಡೆದು ದಿವಂಗತ ಎಚ್.ವೈ.ಮೇಟಿ ಅವರ ಮಗನಿಗೆ ಒಮ್ಮತದಿಂದ ಉಪಚುನಾವಣೆ ಟಿಕೆಟ್ ನೀಡಲಾಗಿದೆ. ಬೂತ್ ಮಟ್ಟದಲ್ಲಿಯೂ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡು ಟಿಕೆಟ್ ನೀಡಲಾಗಿದೆ. ಉಚಿತ ಆಸ್ಪತ್ರೆ ಮಾಡಬೇಕು ಎನ್ನುವ ಕನಸನ್ನು ಹೆಚ್.ವೈ. ಮೇಟಿ ಅವರು ಹೊತ್ತಿದ್ದರು. ಆ ಕನಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಸು ಮಾಡಿದ್ದಾರೆ. ಆಲಮಟ್ಟಿ ಆಣೆಕಟ್ಟು ಎತ್ತರ ಹೆಚ್ಚಳ ಸಂಬಂಧ ಸಂತ್ರಸ್ತರಿಗೆ ಅತ್ಯುತ್ತಮ ಪರಿಹಾರ ನೀಡಲಾಗುತ್ತಿದೆ” ಎಂದರು.
“ಬೆಂಗಳೂರಿಗಿಂತ ಸುಂದರವಾಗಿ ಬಾಗಲಕೋಟೆ ಯೋಜಿತ ನವನಗರ ರೂಪಿಸಲಾಗುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸಗಳಿದ್ದರೂ ನಮ್ಮ ಸರ್ಕಾರ ಜನಸೇವೆ ಮಾಡಲು ಸಿದ್ಧವಿದೆ. ಎಲ್ಲಾ ವರ್ಗದ ಜನರು ನಮಗೆ ಸಹಾಯ ಮಾಡುತ್ತಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬರಲು ಅನೇಕರು ಉತ್ಸುಕರಾಗಿದ್ದು. ಮುಖ್ಯಮಂತ್ರಿಯವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನನ್ನ ಬಳಿ ಮಾತನಾಡಿದ್ದಾರೆ. ಎಲ್ಲರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕೆಲಸ ಮಾಡಲಾಗುವುದು” ಎಂದರು.
ಹಿಂದಿನ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷ ಗೆದ್ದಿದೆ ಈಗಲೂ ಗೆಲ್ಲಲಿದೆ
“ಹಿಂದಿನ ಎಲ್ಲಾ ಉಪಚುನಾವಣೆಗಳನ್ನೂ ಕಾಂಗ್ರೆಸ್ ಪಕ್ಷ ಗೆದ್ದಿದೆ. ಪ್ರಸ್ತುತ ಎರಡೂ ಕ್ಷೇತ್ರಗಳಲ್ಲೂ ನಮ್ಮ ಪಕ್ಷ ಗೆಲುವು ಸಾಧಿಸಲಿದೆ. ನಮ್ಮ ಕ್ಷೇತ್ರಗಳನ್ನು ನಾವು ಉಳಿಸಿಕೊಳ್ಳುತ್ತೇವೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
“ಪಕ್ಷದ ಪ್ರಣಾಳಿಕೆಯಂತೆ ನೀಡಿದ ವಾಗ್ದಾನಗಳನ್ನು ಈಡೇರಿಸಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಮನೆ, ಮನೆಗೆ ತಲುಪಿಸಲಾಗಿದೆ. ಯೋಜನೆಗಳ ಪ್ರಯೋಜನ ಪಡೆಯುತ್ತಿರುವ ತಾಯಂದಿರು ಇಂತಹ ಸರ್ಕಾರ ಉಳಿಸಿಕೊಳ್ಳಬೇಕು ಎಂದು ನಮ್ಮ ಜೊತೆ ನಿಂತಿದ್ದಾರೆ. ಉಪಕಾರ ಸ್ಮರಣೆ ಮಾಡುತ್ತಿರುವ ಎಲ್ಲಾ ವರ್ಗದ ಜನರನ್ನು ನೋಡಿ ಸಂತೋಷವಾಗಿದೆ” ಎಂದರು.
ಸೋಲಿನ ಭಯದಿಂದ ಬಿಜೆಪಿ ಆರೋಪ
ಅಧಿಕಾರ ಹಾಗೂ ಹಣ ದುರುಪಯೋಗವಾಗುತ್ತಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, “ಸೋಲಿನ ಭಯದಿಂದ ಬಿಜೆಪಿ ಆರೋಪ ಮಾಡುತ್ತಿದೆ. ಚುನಾವಣಾ ಆಯೋಗ ಚುನಾವಣೆ ನಡೆಸಲಿದೆ. ಚುನಾವಣೆಗೂ ಮುಂಚಿತವಾಗಿ ಬಿಜೆಪಿಯವರು 10 ಸಾವಿರ ನೀಡಿದಂತೆ ನಾವು ಮಾಡುತ್ತಿಲ್ಲವಲ್ಲ. ಪ್ರತಿ ಖಾತೆಗೂ 2 ಸಾವಿರ ನೀಡುತ್ತೇವೆ, 200 ಯುನಿಟ್ ವಿದ್ಯುತ್, 10 ಕೆಜಿ ಅಕ್ಕಿ, ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ನುಡಿದಂತೆ ನಡೆಯುವ ಬಸವಣ್ಣನ ನಾಡಿನಲ್ಲಿ ಅವರ ಹಾದಿಯಂತೆ ನಾವು ನಡೆದಿದ್ದೇವೆ. ಇದು ನಮ್ಮ ಶಕ್ತಿ. ಈ ಹಿಂದೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರ ಸರ್ಕಾರವಿತ್ತು. ಆಗ ಮಹಿಳೆಯರಿಗೆ, ಯುವಕರಿಗೆ ಸಹಾಯ ಮಾಡಿದ್ದರೆ. ಮನೆಗೆ ಅಕ್ಕಿ ಕೊಟ್ಟಿದ್ದರೇ? ಸಹಾಯ ಮಾಡಿದ ನಮಗೆ ಆಶೀರ್ವಾದ ಮಾಡಲು ಜನ ಬದ್ಧರಾಗಿದ್ದಾರೆ. ಅದಕ್ಕೆ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಸುಪುತ್ರರನ್ನು ಸೋಲಿಸಿದರು. ಸಂಡೂರಿನಲ್ಲಿ ನಮ್ಮ ಸ್ಥಾನವನ್ನು ನಮಗೆ ಮರಳಿ ನೀಡಿದರು” ಎಂದರು.


