ಸಪ್ತಸಾಗರ ವಾರ್ತೆ ಮೈಸೂರು, ಅ. 2: ಬಾಲಮಂದಿರಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿರುವ ಕರುನಾಡಿನ ಮುದ್ದು ಮಕ್ಕಳು, ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ಅಪರೂಪದ ಸಾಧಕರಾಗಿ ಬೆಳೆದು ಮುಂದೊಂದು ದಿನ ನಾಡ ಹಬ್ಬ ಮೈಸೂರು ದಸರಾ ಉದ್ಘಾಟಿಸುವಂತಾಗಬೇಕೆಂದು ನಾನು ಹಂಬಲಿಸುವುದಾಗಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಬಾಲ ಮಂದಿರ ಮಕ್ಕಳೊಂದಿಗೆ ದಸರಾ ಹಬ್ಬ ಆಚರಿಸಲು ಧಾರವಾಡದಿಂದ ತಮ್ಮೊಂದಿಗೆ ತಂದಿದ್ದ ಸಿಹಿ ಪದಾರ್ಥ ಗಳೊಂದಿಗೆ ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಸರಕಾರಿ ಬಾಲಕಿಯರ ಬಾ ಲಮಂದಿರಕ್ಕೆ ಆಗಮಿಸಿದ್ದ ಅವರು, ಬಾಲಕಿಯರ ಬಾಲಮಂದಿರದ ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಯಾರಲ್ಲಿ ಆತ್ಮವಿಶ್ವಾಸ ಇರುವದಿಲ್ಲವೋ ಅವರು ಮಾತ್ರ ಅನಾಥರು. ಯಾರಲ್ಲಿ ಏನಾದರೂ ಸಾಧಿಸಬೇಕೆಂಬ ಛಲ, ಆತ್ಮ ವಿಶ್ವಾಸವಿದೆಯೋ ಅವರೆಂದು ಅನಾಥರಾಗಲು ಸಾಧ್ಯವಿಲ್ಲವೆಂದು ಹೇಳಿದರು.
ನೀವೆಲ್ಲರೂ ಉನ್ನತ ಸಾಧನೆ ಮಾಡಿ ನಾಡದೇವಿಯ ಸನ್ನಿಧಿಯಲ್ಲಿ ಮೈಸೂರು ದಸರಾ ಉದ್ಘಾಟನೆ ನೆರವೇರಿಸುವಂತಾಗಬೇಕು. ನೀವೆಲ್ಲರೂ ಆ ಎತ್ತರಕ್ಕೆ ಬೆಳೆಯಬೇಕು. ಸಾಧಕರ ಸಾಧನೆಗಳು ನಿಮಗೆ ಸದಾ ಪ್ರೇರಣೆ ನೀಡಲೆಂದು ಸಂಗಮೇಶ ಹೇಳಿದರು. ಮೈಸೂರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಯೋಗೇಶ, ಶಿಶು ಅಭಿವೃದ್ಧಿ ಅಧಿಕಾರಿ ರಾಘವೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಕ್ಕಳಿಗೆ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರು ಸಿಹಿ ವಿತರಿಸಿ ಮಕ್ಕಳಿಗೆ ದಸರಾ ಹಬ್ಬದ ಶುಭಾಶಯ ಕೋರಿದ್ದು, ನಿಜವಾಗಿ ಅವಕಾಶ ವಂಚಿತ ಮಕ್ಕಳೊಂದಿಗೆ ದಸರಾ ಹಬ್ಬ ಆಚರಿಸಿ ಅವರಿಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.
ಛಲ, ಆತ್ಮ ವಿಶ್ವಾಸ ಇದ್ದವರು ಎಂದಿಗೂ ಅನಾಥರಲ್ಲ: ಸಂಗಮೇಶ ಬಬಲೇಶ್ವರ


