ಮೂರು ದಿನ ಬ್ಯಾಂಕ್ ಮುಷ್ಕರ: ಸೆ.28ರಂದು ವಿಜಯಪುರದಲ್ಲಿ ಬೃಹತ್ ರ‍್ಯಾಲಿ

ಐದು ದಿನಗಳ ಬ್ಯಾಂಕಿಂಗ್ ವಾರ ಜಾರಿಗೆ ಆಗ್ರಹ; 30 ತಿಂಗಳ ವಿಳಂಬಕ್ಕೆ ನೌಕರರ ಆಕ್ರೋಶ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ.27:
ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಬಹುಕಾಲದಿಂದ ಬಾಕಿ ಇರುವ ಬೇಡಿಕೆಗಳನ್ನು ಈಡೇರಿಸುವಂತೆ ಭಾರತೀಯ ಬ್ಯಾಂಕುಗಳ ಸಂಘ (IBA) ಹಾಗೂ ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ಇಲಾಖೆ (DFS/MoF) ಮೇಲೆ ಒತ್ತಡ ಹೇರಲು ಅಖಿಲ ಭಾರತ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಸಂಘಟನೆಗಳ ನೇತೃತ್ವದಲ್ಲಿ ಸೆ.28, 29 ಮತ್ತು 30ರಂದು ಮೂರು ದಿನಗಳ ಬ್ಯಾಂಕ್ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ತಕ್ಷಣವೇ ಐದು ದಿನಗಳ ಬ್ಯಾಂಕಿಂಗ್ ವಾರ ಜಾರಿಗೊಳಿಸುವುದು, ಎಲ್ಲ ವರ್ಗದ ನೌಕರರು ಮತ್ತು ಅಧಿಕಾರಿಗಳಿಗೆ ನ್ಯಾಯಸಮ್ಮತ ಹಾಗೂ ಸಮಾನ PLI ಯೋಜನೆ ಜಾರಿಗೊಳಿಸುವುದು ಮತ್ತು ಬಹುಕಾಲದಿಂದ ಬಾಕಿ ಇರುವ ರೆಸಿಡ್ಯುವಲ್ ಸಮಸ್ಯೆಗಳನ್ನು ಪರಿಹರಿಸುವುದು ಮುಷ್ಕರದ ಪ್ರಮುಖ ಬೇಡಿಕೆಗಳಾಗಿವೆ ಎಂದು ಅಖಿಲ ಭಾರತ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಜಿ.ಗಾಂಧಿ ತಿಳಿಸಿದ್ದಾರೆ.

ಐದು ದಿನಗಳ ಬ್ಯಾಂಕಿಂಗ್ ವಾರಕ್ಕೆ 30 ತಿಂಗಳ ವಿಳಂಬ

ಐದು ದಿನಗಳ ಬ್ಯಾಂಕಿಂಗ್ ವಾರದ ಬೇಡಿಕೆ ಹೊಸದಲ್ಲ. 2024ರ ಮಾರ್ಚ್ 8ರಂದು IBA ಹಾಗೂ UFBU ನಡುವೆ ನಡೆದ ಒಪ್ಪಂದ/ಜಾಯಿಂಟ್ ನೋಟ್‌ನಲ್ಲಿ ಈ ಕುರಿತು ಒಪ್ಪಿಗೆ ವ್ಯಕ್ತಪಡಿಸಿ, ಅಂತಿಮ ಅನುಮೋದನೆಗಾಗಿ DFS/MoFಗೆ ಕಳುಹಿಸಲಾಗಿತ್ತು. ಆದರೆ ಸುಮಾರು 30 ತಿಂಗಳು ಕಳೆದರೂ ಈ ಕುರಿತು ಅಂತಿಮ ನಿರ್ಧಾರ ಹೊರಬಿದ್ದಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ವಿಚಾರವಾಗಿ ಕೇಂದ್ರ ಮುಖ್ಯ ಕಾರ್ಮಿಕ ಆಯುಕ್ತರು ಹಾಗೂ ನವದೆಹಲಿಯ ಉಪ ಮುಖ್ಯ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಆರುಕ್ಕೂ ಹೆಚ್ಚು ಬಾರಿ ಸಮನ್ವಯ ಹಾಗೂ ಸಂಧಾನ ಸಭೆಗಳು ನಡೆದಿವೆ. ಪ್ರತಿ ಸಭೆಯಲ್ಲೂ ವಿಷಯವು ಸಕ್ರಿಯ ಪರಿಗಣನೆಯಲ್ಲಿದೆ ಎಂಬ ಭರವಸೆ ನೀಡಲಾಗಿದ್ದರೂ, ಇದುವರೆಗೆ ಯಾವುದೇ ಸಕಾರಾತ್ಮಕ ನಿರ್ಧಾರ ಪ್ರಕಟವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರದ ವಿಳಂಬ ಧೋರಣೆಯಿಂದಾಗಿ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಅನಿವಾರ್ಯವಾಗಿ ಮುಷ್ಕರದ ಹಾದಿ ಹಿಡಿಯಬೇಕಾಗಿದೆ ಎಂದು ಗಾಂಧಿ ಹೇಳಿದ್ದಾರೆ.

ಗ್ರಾಹಕರಿಗೆ ಅನಾನುಕೂಲ: ಸಂಘದ ವಿಷಾದ

ಮುಷ್ಕರದಿಂದ ಬ್ಯಾಂಕ್ ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿ ಗ್ರಾಹಕರಿಗೆ ಅನಾನುಕೂಲವಾಗುವ ಸಾಧ್ಯತೆಯಿದೆ. ಇದಕ್ಕಾಗಿ ವಿಷಾದ ವ್ಯಕ್ತಪಡಿಸಿರುವ ಸಂಘ, ಗ್ರಾಹಕರ ವಿರುದ್ಧ ತಮ್ಮ ಹೋರಾಟವಲ್ಲ; ಬಹುಕಾಲದಿಂದ ಬಾಕಿ ಇರುವ ನ್ಯಾಯಸಮ್ಮತ ಬೇಡಿಕೆಗಳನ್ನು ವಿಳಂಬಗೊಳಿಸುತ್ತಿರುವ ಧೋರಣೆಯ ವಿರುದ್ಧದ ಹೋರಾಟವಾಗಿದೆ ಎಂದು ಸ್ಪಷ್ಟಪಡಿಸಿದೆ.

ಸೆ.28ರಂದು ವಿಜಯಪುರದಲ್ಲಿ ಬೃಹತ್ ರ‍್ಯಾಲಿ

ಮೂರು ದಿನಗಳ ಮುಷ್ಕರದ ಅಂಗವಾಗಿ ಸೆ.28ರಂದು ಬೆಳಿಗ್ಗೆ 10.30ಕ್ಕೆ ವಿಜಯಪುರದಲ್ಲಿ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಬೃಹತ್ ರ‍್ಯಾಲಿ ನಡೆಯಲಿದೆ.
ರ‍್ಯಾಲಿಯು ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾಗಿ ಗಾಂಧಿ ವೃತ್ತ, ಶ್ರೀ ಬಸವೇಶ್ವರ ವೃತ್ತದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಸಾಗಲಿದೆ. ಬಳಿಕ ಅಂಬೇಡ್ಕರ್ ವೃತ್ತದಲ್ಲಿ UFBU/UFGBU ಜಿಲ್ಲಾ ಘಟಕಗಳ ಮುಖಂಡರು ಬೇಡಿಕೆಗಳು, ಪ್ರಸ್ತುತ ಪರಿಸ್ಥಿತಿ ಹಾಗೂ ಮುಂದಿನ ಹೋರಾಟದ ಕುರಿತು ಮಾತನಾಡಲಿದ್ದಾರೆ.
ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ 8 ಲಕ್ಷಕ್ಕೂ ಅಧಿಕ ನೌಕರರು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘ ತಿಳಿಸಿದೆ.
ಮುಷ್ಕರವನ್ನು ಯಶಸ್ವಿಗೊಳಿಸುವಂತೆ ಜಿಲ್ಲೆಯ ಎಲ್ಲ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳಿಗೆ ಜಿ.ಜಿ.ಗಾಂಧಿ ಮನವಿ ಮಾಡಿದ್ದಾರೆ.
“ಏಕತೆ–ಬದ್ಧತೆ–ಹೋರಾಟ; ಐದು ದಿನಗಳ ಬ್ಯಾಂಕಿಂಗ್ ವಾರ ಜಾರಿಯಾಗುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು ಅವರು ತಿಳಿಸಿದ್ದಾರೆ.

Share this