ವಿಜಯಪುರ ಜಿಲ್ಲೆಯ ಪೂಜಾರ, ಶೇಖ ಮಾಸ್ತರ, ಧನಗೊಂಡ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 30 :
ಸಿಂದಗಿಯ ಮಕ್ಕಳ ಸಾಹಿತಿ ಹ.ಮ. ಪೂಜಾರ, ಬಿಜ್ಝರಗಿಯ ಡೊಳ್ಳಿನ ಪದಗಳ ಹಾಡುಗಾರ ಸೋಮಣ್ಣ ಧನಗೊಂಡ ಹಾಗೂ ರಂಗ ಕಲಾವಿದ ಎಲ್.ಬಿ. ಶೇಖ್ ಮಾಸ್ಟರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಮಕ್ಕಳ' ಮನಸ್ಸಿನಪೂಜಾರ’ ಅವರಿಗೆ ರಾಜ್ಯೋತ್ಸವ ಗರಿ
ಸರಳತೆ, ಸಜ್ಜನಿಕೆಯ ಇನ್ನೊಂದು ಹೆಸರಾಗಿರುವ ಹ.ಮ. ಪೂಜಾರ ಸಾತ್ವಿಕ ಸ್ವಭಾವದ ಸಾಹಿತಿ. ಮಕ್ಕಳ ಮನಸ್ಸಿನ ಮಕ್ಕಳ ಸಾಹಿತಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ಹನುಮಂತರಾಯ ಮುನ್ನಪ್ಪ ಪೂಜಾರ ನಾಡಿನಾದ್ಯಂತ ಹ.ಮ. ಪೂಜಾರ ಎಂದೇ ಖ್ಯಾತಿ ಪಡೆದವರು. ೧೯೪೩ ರಲ್ಲಿ ಸಿಂದಗಿಯಲ್ಲಿ ಜನಿಸಿದ ಪೂಜಾರ ಅವರು ಶಿಕ್ಷಣ, ಸಾಹಿತ್ಯ ಲೋಕಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ.
೧೯೬೧ ರಿಂದ ೧೯೯೩ ರ ವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ನಂತರ ೧೯೯೩ ರಿಂದ ಪ್ರಾಢಶಾಲಾ ಶಿಕ್ಷಕರಾಗಿ ೨೦೦೧ ರಲ್ಲಿ ಸೇವಾ ನಿವೃತ್ತಿ ಹೊಂದಿದವರು. ಶಿಕ್ಷಕರಾಗಿದ್ದಾಗಲೂ ಸೃಜನಶೀಲ ಚಟುವಟಿಕೆಗಳ ಮೂಲಕ ಜನಪ್ರಿಯತೆ ಪಡೆದಿದ್ದ ಅವರು ಮಕ್ಕಳಿಗಾಗಿ ಪ್ರತಿಭಾ ಪ್ರದರ್ಶನಕ್ಕೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮ, ಪ್ರತಿ ತಿಂಗಳು ಕೊನೆಯ ದಿನ ಶಿಕ್ಷಕರಿಂದ ಮಾದರಿ ಪಾಠ ಕೊಡಿಸುವ ವಿಶೇಷ ಬೋಧನಾ ಶೈಲಿ, ಪಾಠೋಪಕರಣಗಳ ಪ್ರದರ್ಶನ ಹೀಗೆ ನಾನಾ ರೀತಿಯಲ್ಲಿ ಸೇವಾ ಕೈಂಕರ್ಯ ಕೈಗೊಂಡ ಪರಿಣಾಮವಾಗಿ ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮಕ್ಕಳಿಗಾಗಿ ಅನೇಕ ಕವನ ಸಂಕಲನಗಳನ್ನು ರಚಿಸಿದ ಅವರು ನೀತಿಯ ಬದುಕು,ಪರಿಸರ, ಪರೋಪಕಾರ, ತುಂಟ ಮಂಗ, ಚಿಣ್ಣರ ಚೇತನ, ಯಾರು ಜಾಣರು, ನಮಸ್ಕಾರ ಪುನ: ಬನ್ನಿ ಎಂಬ ಕೃತಿಗಳನ್ನು ಮಕ್ಕಳ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಅದೇ ತೆರನಾಗಿ ಕಾಯಕಯೋಗಿ, ಗೋಲಗೇರಿಯ ಗೊಲ್ಲಾಳೇಶ್ವರ ಎಂಬ ಜೀವನ ಚರಿತ್ರೆ ರಚಿಸುವ ಜೊತೆಗೆ ಅನೇಕ ಮಹತ್ವದ ಗ್ರಂಥಗಳ ಸಂಪಾದನೆಯ ಕರ್ಣಧಾರತ್ವ ವಹಿಸಿದ್ದುಂಟು.
ಮಕ್ಕಳೂ ಸಾಹಿತ್ಯ ಬರೆಯುವಂತೆ ಪ್ರೋತ್ಸಾಹಿಸಲು ಮಕ್ಕಳ ಬಳಗ, ಮಕ್ಕಳ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಪ್ರೋತ್ಸಾಹ, ವಿದ್ಯಾಚೇತನ ಪ್ರಕಾಶನದ ಮೂಲಕ ಮಕ್ಕಳ ಸಾಹಿತ್ಯ ಪ್ರಕಟಣೆ ಮತ್ತು ಪ್ರಸಾರ ಕಾರ್ಯವನ್ನು ಕೈಗೊಳ್ಳುತ್ತಲೇ ಇದ್ದಾರೆ.
ಹುಬ್ಬಳ್ಳಿಯ ಮೂರು ಸಾವಿರ ಮಠದಿಂದ ಕೊಡಮಾಡುವ ಸಾಹಿತ್ಯ ಪ್ರಶಸ್ತಿ ಗೌರವ, ಮಹಾದೇವಪ್ಪ ಕರ್ಲಟ್ಟಿ ಸಾಹಿತ್ಯ ಪ್ರಶಸ್ತಿ' ಮಕ್ಕಳ ಸಾಹಿತ್ಯ ಸಂಗಮದಿಂದಪರಿಸರ’ ಕೃತಿಗೆ ಸಾಹಿತ್ಯ ಪ್ರಶಸ್ತಿಯ ಗೌರವ, ಧಾರವಾಡದ ಚಿಲಿಪಿಲಿ ಪ್ರಕಾಶನದಿಂದ ಶಿಕ್ಷಣ ಸಿರಿ' ವಿಜಯ ಪ್ರಕಾಶನ ಇವರಿಂದ ಶ್ರೀ ಗುರು ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಸಮ್ಮಾನಗಳು ಅವರ ಮುಡಿಗೇರಿವೆ. ರಂಗಭೂಮಿ ದಾಖಲೆಸರದಾರ’ ಶೇಖ್ ಮಾಸ್ಟರ್
ಬಡ ಕುಟುಂಬದಲ್ಲಿ ಜನಿಸಿ ಕಲೆ'ಯನ್ನೇ ಸರ್ವಸ್ವವಾಗಿಸಿಕೊಂಡುರಂಗಭೂಮಿ’ಯನ್ನೇ ಕರ್ಮಭೂಮಿಯಾಗಿಸಿಕೊಂಡ ಎಲ್.ಬಿ. ಶೇಖ್ ಮಾಸ್ಟರ್ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ಶೇಖ್ ಮಾಸ್ಟರ್ ರಂಗನಟ ಅಷ್ಟೇ ಅಲ್ಲದೇ ಸಂಗೀತ ನಿರ್ದೇಶಕರೂ ಹೌದು. ಸಂಗೀತ ಹಾಗೂ ರಂಗಭೂಮಿ ಎರಡು ಕ್ಷೇತ್ರಗಳಲ್ಲೂ ಕರತಲಾಮಲಕರಾಗಿರುವ ಶೇಖ್ ಮಾಸ್ಟರ್ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುದ್ದುಂಟು. ಮುದ್ದೇಬಿಹಾಳ ತಾಲ್ಲೂಕಿನ ಲಿಂಗದಳ್ಳಿ ಗ್ರಾಮದವರು. ಮುಸ್ಲಿಮರಾದರೂ ಸರ್ವಧರ್ಮಗಳ ತತ್ವ, ಸಿದ್ದಾಂತ ಮೈಗೂಢಿಸಿಕೊಂಡವರು.
ಬಾವಾಸಾಹೇಬ ಹಾಗೂ ಶಹಜಾಬಿ ದಂಪತಿಯ ಪುತ್ರನಾಗಿ ೧೯೫೫ ಸೆ.೧ ರಂದು ಜನಿಸಿದ ಶೇಖ್ ಮಾಸ್ತರ ಬಡತನದ ಕಾರಣಕ್ಕೆ ಎಸ್‌ಎಸ್‌ಎಲ್‌ಸಿ ವರೆಗೆ ಶಿಕ್ಷಣ ಪಡೆದರೂ, ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಗಾಧ. ಪುಟ್ಟರಾಜ ಗವಾಯಿಗಳ ಶಿಷ್ಯರಾಗಿರುವ ಇವರು ಬಾಲ್ಯದಿಂದಲೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ.
ತಾಳಿಕೋಟೆಯ ಖಾಸ್ಗತೇಶ್ವರ ಮಠದಲ್ಲಿ ಹಿಂದುಸ್ತಾನಿ ಸೀನಿಯರ್ ಹಾಡುಗಾರಿಕೆ ಹಾಗೂ ಹಾರ್ಮೋನಿಯಂ ಅಭ್ಯಾಸ ಮಾಡುತ್ತಲೇ ಬೆಳೆದ ಶೇಖ್ ಮಾಸ್ತರ್ ವೃತ್ತಿ ರಂಗಭೂಮಿಯಲ್ಲಿ ಅನುಪಮ ಸೇವೆ ಸಲ್ಲಿಸಿದ್ದಾರೆ. ೧೯೮೩ರಲ್ಲಿ ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಸ್ಥಾಪಿಸಿ ಸುಮಾರು ೫೦ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ೯ ಸಾವಿರಕ್ಕೂ ಅಧಿಕ ರಂಗ ಪ್ರಯೋಗಗಳ ಸಾರಥ್ಯ ವಹಿಸಿದ್ದು ದಾಖಲೆಯೇ ಸರಿ. ಕಿವುಡ ಮಾಡಿದ ಕಿತಾಪತಿ, ಭಗವಂತ ಕೊಟ್ಟ ಭಾಗ್ಯ, ಮುದುಕನ ಮದುವೆ, ತ್ಯಾಗಜೀವಿ, ಕೊರವಂಜಿ ಮೊದಲಾದ ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿರುವ ಇವರ ರಂಗ ಸಾಧನೆ ಅಪಾರ.
ರಂಗ ಆರಾಧಕ, ರಂಗಕೇಸರಿ, ಕುಮಾರಶ್ರೀ, ಬಸವಶಾಂತಿ, ಜೋಳದ ರಾಶಿ ದೊಡ್ಡನಗೌಡ, ಗುಬ್ಬಿ ವೀರಣ್ಣ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಈ ಮಾಸ್ತರ್ ಭಾಜನರಾಗಿದ್ದಾರೆ.
ಡೊಳ್ಳಿನ ಹಾಡಿನ ಜಾಣ ಸೋಮಣ್ಣ' ಬಿಜ್ಜರಗಿ ಸೋಮಲಿಂಗ ಎಂದೇ ಪ್ರಸಿದ್ಧಿಯಾದ ಸೋಮಣ್ಣ ದುಂಡಪ್ಪ ಧನಗೊಂಡ ಡೊಳ್ಳಿನ ಹಾಡುಗಾರಿಕೆಯ ಪ್ರವೀಣ. ತಮ್ಮ ಕಂಚಿನ ಕಂಠದಿಂದ ಡೊಳ್ಳಿನ ಪದಗಳನ್ನು ಹಾಡುವುದನ್ನು ಕೇಳುತ್ತಲೇ ಇರಬೇಕು ಎನಿಸುವಷ್ಟು ಆಪ್ತಭಾವದಿಂದ ಪದ ಹಾಡುವುದುಂಟು. ಬಿಜ್ಜರಗಿ ಸೋಮಲಿಂಗ ಎಂದೇ ಪ್ರಸಿದ್ಧಿಯಾಗಿರುವ ಅವರ ಹಾಡುಗಳು ಇಂದಿನ ನವಮಾಧ್ಯಮಗಳಾದ ಯೂ-ಟ್ಯೂಬ್‌ಗಳಲ್ಲಿಯೂ ಅತ್ಯಂತ ಜನಪ್ರಿಯ, ಸಾವಿರಾರು ವೀಕ್ಷಣೆ ಪಡೆದಿರುವ ಇವರ ಡೊಳ್ಳಿನ ಹಾಡುಗಳು ಬಲು ಜನಪ್ರಿಯ. ತಿಕೋಟಾ ತಾಲೂಕಿನ ಬಿಜ್ಜರಗಿ ಅವರಾದ ಸೋಮಣ್ಣ ಅವರು ಡೊಳ್ಳಿನ ಹಾಡುಗಾರಿಕೆಯನ್ನೇ ತಮ್ಮ ಜೀವಾಳವಾಗಿಸಿಕೊಂಡವರು. ಡೊಳ್ಳಿನ ಹಾಡುಗಳನ್ನು ಮತ್ತು ಡೊಳ್ಳು ಕುಣಿತ ಜಾನಪದ ಕಲೆಯನ್ನು ಮೈಗೂಢಿಸಿಕೊಂಡು ಬೆಳೆದವರು. ಜಾನಪದ ಕಲಾವಿದರಾದ ಇವರು ಅನೇಕ ಕಲಾವಿದರಿಗೆ ತರಬೇತಿ ನೀಡಿ ಕಲಾವಿದರನ್ನು ಬೆಳೆಸಿದ್ದಾರೆ. ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ ನಿಂದ ಲೋಕಸಿರಿ ಪ್ರಶಸ್ತಿ ಹಲವಾರು ಸಂಘ ಸಂಸ್ಥೆಗಳು ಇವರ ಕಲಾ ಸೇವೆಯನ್ನು ಗುರತಿಸಿ ಗೌರವಿಸಿದ್ದಾರೆ. ನಾಡಿನ ಹೆಮ್ಮೆಯ ಪ್ರಶಸ್ತಿ ನನಗೆ ದೊರಕಿದ್ದು ಭಾಳ ಸಂತೋಷ ಆಗೇದ್ರೀ… ಎಂದು ಸೋಮಣ್ಣ ಅವರು ಸಂತಸ ವ್ಯಕ್ತಪಡಿಸಿದರು.

Share this