ಟಿಪ್ಪರ್ – ಬಸ್ ಮಧ್ಯೆ ಭೀಕರ ರಸ್ತೆ ಅಪಘಾತ: ಮಹಿಳೆ ಸೇರಿ ಮೂವರ ಸಾವು

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 16:
ಟಿಪ್ಪರ್ ಹಾಗೂ ಸರ್ಕಾರಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಮೂವರು ಮೃತಪಟ್ಟು ಇತರ ಹತ್ತು ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಕ್ರಾಸ್ ಬಳಿ ಮಂಗಳವಾರ ನಡೆದಿದೆ.
ಟಿಪ್ಪರ್ ಟೈರ್ ಬ್ಲಾಸ್ಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ಗೊತ್ತಾಗಿದೆ.
ಟಿಪ್ಪರ್ ನಲ್ಲಿದ್ದ ಚಾಲಕ ಹಾಗೂ ಆತನ ಪತ್ನಿ ಮತ್ತು ಸರ್ಕಾರಿ ಬಸ್ ಚಾಲಕ ಸೇರಿ ಮೂವರು ಮೃತಪಟ್ಟಿದ್ದಾರೆ.
ಟಿಪ್ಪರ್ ಚಾಲಕ ಅಶೋಕ ಉಟಗಿ ಹಾಗೂ ಪತ್ನಿ ರಾಧಾಬಾಯಿ ಹಾಗೂ
ಬಸ್ ಚಾಲಕ ಹನುಮಂತ ಛವಲಾದಿ ಮೃತಪಟ್ಟ ನತದೃಷ್ಟರು.
KA 28 – AA 6792 ನೋಂದಣಿಯ ಟಿಪ್ಪರ್ ಚಡಚಣದತ್ತ ಹೊರಟಿತ್ತು.
KA 28 F 2468 ನಂಬರಿನ ಸರ್ಕಾರಿ ಬಸ್ ಚಡಚಣದಿಂದ ವಿಜಯಪುರದತ್ತ ಹೊರಟಿದ್ದ ವೇಳೆ ಈ ದುರಂತ ನಡೆದಿದೆ.
ಸ್ಥಳಕ್ಕೆ ಚಡಚಣ ಪೊಲೀಸ್ ಠಾಣೆಯ ಪಿಎಸ್ಐ ಸೊಮೇಶ ಗೆಜ್ಜಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Share this