ರೇಬೀಸ್ ತಡೆಗೆ ಸಕಾಲಿಕ ಲಸಿಕೆಯೇ ರಕ್ಷಾಕವಚ

ಪ್ರಾಣಿಗಳ ಕಡಿತದ ಬಳಿಕ ನಿರ್ಲಕ್ಷ್ಯ ಬೇಡ: ಡಾ. ತೇಜಸ್ವಿನಿ ವಲ್ಲಭ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 29:
ರೇಬೀಸ್ ಶೇ.100ರಷ್ಟು ಮಾರಣಾಂತಿಕ ಕಾಯಿಲೆಯಾಗಿದ್ದರೂ, ಪ್ರಾಣಿಗಳ ಕಡಿತದ ಬಳಿಕ ಸಕಾಲದಲ್ಲಿ ಸೂಕ್ತ ಲಸಿಕೆ ಹಾಗೂ ಚಿಕಿತ್ಸೆ ಪಡೆಯುವುದರಿಂದ ರೋಗವನ್ನು ಶೇ.100ರಷ್ಟು ತಡೆಗಟ್ಟಬಹುದು ಎಂದು ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪ್ರಾಚಾರ್ಯೆ ಹಾಗೂ ಡೀನ್ ಡಾ. ತೇಜಸ್ವಿನಿ ವಲ್ಲಭ ಹೇಳಿದರು.
ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ವೈದ್ಯಕೀಯ ಮಹಾವಿದ್ಯಾಲಯದ ಸಾಮಾನ್ಯ ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸಾ ವಿಭಾಗಗಳು ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಕಿರಿಯ ವೈದ್ಯರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರೇಬೀಸ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೇಬೀಸ್ ಕೇವಲ ನಾಯಿ ಕಡಿತದಿಂದ ಮಾತ್ರವಲ್ಲದೆ ಇತರ ಸಾಕುಪ್ರಾಣಿಗಳು ಹಾಗೂ ಕಾಡುಪ್ರಾಣಿಗಳ ಕಡಿತದಿಂದಲೂ ಹರಡಬಹುದು. ಹೀಗಾಗಿ ಪ್ರಾಣಿಗಳ ಕಡಿತ ಸಂಭವಿಸಿದ ತಕ್ಷಣ ಗಾಯವನ್ನು ಸ್ವಚ್ಛಗೊಳಿಸಿ, ವೈದ್ಯರ ಸಲಹೆಯಂತೆ ಅಗತ್ಯ ಲಸಿಕೆ ಹಾಗೂ ಚಿಕಿತ್ಸೆಯನ್ನು ಪಡೆಯಬೇಕು. ಈ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ಮಾಡಬಾರದು ಎಂದು ಅವರು ಎಚ್ಚರಿಸಿದರು.
ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಮಂಜುನಾಥ ಸಾವಂತ ಮಾತನಾಡಿ, ರೇಬೀಸ್ ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿ ಲೂಯಿಸ್ ಪಾಶ್ಚರ್ ಅವರ ಸ್ಮರಣಾರ್ಥ ಸೆ. 28ರಂದು ವಿಶ್ವ ರೇಬೀಸ್ ದಿನ ಆಚರಿಸಲಾಗುತ್ತದೆ. ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ರೇಬೀಸ್ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಪ್ರಾಣಿಗಳ ಕಡಿತದ ಬಳಿಕ ಕೈಗೊಳ್ಳಬೇಕಾದ ಪ್ರಾಥಮಿಕ ಚಿಕಿತ್ಸಾ ಕ್ರಮಗಳು, ಲಸಿಕೆ ಪಡೆಯುವ ಅಗತ್ಯ ಹಾಗೂ ರೇಬೀಸ್ ನಿಯಂತ್ರಣದಲ್ಲಿ ಸಾರ್ವಜನಿಕರು ಮತ್ತು ವೈದ್ಯಕೀಯ ಸಿಬ್ಬಂದಿಯ ಸಮನ್ವಯದ ಮಹತ್ವವನ್ನು ವಿವರಿಸಿದರು. ಈ ವರ್ಷದ ವಿಶ್ವ ರೇಬೀಸ್ ದಿನದ ಧ್ಯೇಯವಾಕ್ಯ ‘ಒಟ್ಟಿಗೆ ಬಲವಾಗಿದ್ದೇವೆ’ ಎಂಬುದಾಗಿದೆ ಎಂದರು.
ಸಾಮಾನ್ಯ ವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ. ವಿಶ್ವನಾಥ ಜಾಲವಾದಿ ರೇಬೀಸ್ ವೈರಾಣು, ರೋಗದ ಲಕ್ಷಣಗಳು, ರೋಗನಿರ್ಣಯ ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಇಲಾಖೆಯ ಕೀಟಶಾಸ್ತ್ರಜ್ಞ ಡಾ. ಸುರೇಶ ಪಾಚಾಪುರ ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ರೇಬೀಸ್ ನಿಯಂತ್ರಣಕ್ಕಾಗಿ ವಿಜಯಪುರ ಸೇರಿದಂತೆ ಐದು ಜಿಲ್ಲೆಗಳಲ್ಲಿ ಕರ್ನಾಟಕ ಸರ್ಕಾರ ಮಾದರಿ ರೇಬೀಸ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ತಿಳಿಸಿದರು. ಸರ್ಕಾರಿ ಆಸ್ಪತ್ರೆಗಳು ಹಾಗೂ ಬಿ.ಎಲ್.ಡಿ.ಇ. ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ. ಅಚ್ಯುತ ಪತ್ತಾರ ಅವರು ರೇಬೀಸ್ ಚಿಕಿತ್ಸೆಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡಿದರು.
ಸಾಮಾನ್ಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ವಿಜಯಕುಮಾರ ವಾರದ ಸ್ವಾಗತಿಸಿದರು. ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೋಟೆಣ್ಣವರ ವಂದಿಸಿದರು. ಡಾ. ಅರ್ಪಿತ ಬನ್ಸಲ್ ನಿರೂಪಿಸಿದರು. ಬಳಿಕ ತಜ್ಞ ವೈದ್ಯರೊಂದಿಗೆ ರೇಬೀಸ್ ಕುರಿತು ಸಂವಾದ ನಡೆಯಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಅಪ್ಪಾಸಾಹೇಬ ಇನಾಮದಾರ, ಆಸ್ಪತ್ರೆಯ ಉಪ ಅಧೀಕ್ಷಕ ಡಾ. ರವಿಕುಮಾರ ಬಿರಾದಾರ, ಪ್ರಾಧ್ಯಾಪಕರಾದ ಡಾ. ಎಂ.ಬಿ. ಪಾಟೀಲ, ಡಾ. ವಿಕ್ರಂ ಸಿಂದಗಿಕರ, ಡಾ. ಶರಣ ಬಡಿಗೇರ, ಡಾ. ಪ್ರಕಾಶ ಮಂಟೂರ, ಡಾ. ಎಸ್.ಎಂ. ಬಿರಾದಾರ, ಡಾ. ರಾಘವೇಂದ್ರ ಗೊಬ್ಬೂರ, ಡಾ. ಈರಣ್ಣ ಧಾರವಾಡಕರ ಸೇರಿದಂತೆ ಸುಮಾರು 100 ಕಿರಿಯ ವೈದ್ಯರು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Share this